ಮರಣ ಹೊಂದಿದ್ದ ಅಣ್ಣನ ಹೆಸರಲ್ಲಿ ಸುದೀರ್ಘ 24 ವರ್ಷ ಕಾಲ ಶಿಕ್ಷಕನಾಗಿದ್ದ ತಮ್ಮನ ಬಂಧನ!

ಹುಣಸೂರು, ಮಾ.24 (ಕೆಕೆ/ ಮಹೇಶ್)- ಮೃತ ಅಣ್ಣನ ನೇಮಕಾತಿ ಪತ್ರವನ್ನು ಬಳಸಿಕೊಂಡು ಸುದೀರ್ಘ 24ವರ್ಷದಿಂದ ಅಣ್ಣನ ಹೆಸರಿನಲ್ಲೇ ಶಿಕ್ಷಕ ವೃತ್ತಿ ಮಾಡುತ್ತಿದ್ದ ತಮ್ಮನನ್ನು ಪಿರಿಯಾ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಕೆ.ಆರ್.ನಗರ ತಾಲೂಕು ಡಿ.ಕೆ.ಕೊಪ್ಪಲು ಗ್ರಾಮದವನಾಗಿದ್ದು, ಹುಣಸೂರು ತಾಲೂಕು ಹಿರೀಕ್ಯಾತನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕೆಲಸ ಮಾಡು ತ್ತಿದ್ದ ಲಕ್ಷ್ಮಣೇಗೌಡ ಬಂಧಿತ ಶಿಕ್ಷಕನಾಗಿದ್ದು, ಪೊಲೀಸರು ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈತ ತನ್ನ ಮೃತ ಅಣ್ಣ ಲೋಕೇಶ್ ನೇಮಕಾತಿ ಪತ್ರವನ್ನು ಬಳಸಿಕೊಂಡು, ತಾನೇ ಲೋಕೇಶ್ ಎಂದು ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಎಂಬುದು ಪತ್ತೆಯಾದ ಹಿನ್ನೆಲೆಯಲ್ಲಿ ಹುಣಸೂರು ಬಿಇಒ ಎಸ್.ಪಿ. ನಾಗರಾಜ್, ಪಿರಿಯಾಪಟ್ಟಣ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ವಿವರ: ಕೆ.ಆರ್.ನಗರ ತಾಲೂಕು ಡಿ.ಕೆ.ಕೊಪ್ಪಲು ಗ್ರಾಮದ ರಾಮೇಗೌಡರ ಪುತ್ರ ಲೋಕೇಶ್ ಸಹ ಶಿಕ್ಷಕನ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದರು. ಅವರಿಗೆ 1998ರ ಆಗಸ್ಟ್ 18ರಂದು ಅಂಚೆ ಮೂಲಕ ಶಿಕ್ಷಣ ಇಲಾಖೆಯಿಂದ ನೇಮಕಾತಿ ಆದೇಶ ಪತ್ರ ಬಂದಿತ್ತು. ಆದರೆ ಆ ವೇಳೆಗಾಗಲೇ ಲೋಕೇಶ್ ಮೃತಪಟ್ಟಿದ್ದರು.
ಲೋಕೇಶ್ ಅವರ ತಮ್ಮ ಲಕ್ಷ್ಮಣೇ ಗೌಡ ತನ್ನ ಅಣ್ಣನ ನೇಮಕಾತಿ ಪತ್ರ ಹಾಗೂ ಇತರ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ಹಾಜರುಪಡಿಸಿ, ತಾನೇ ಲೋಕೇಶ್ ಎಂದು ಹೇಳಿಕೊಂಡು ಇಲಾಖೆಗೆ ಸೇರ್ಪಡೆಯಾದ. 1998ರ ಸೆಪ್ಟೆಂಬರ್ 11ರಂದು ಪಿರಿಯಾ ಪಟ್ಟಣ ತಾಲೂಕು ಮುದ್ದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕನಾಗಿ ಲಕ್ಷ್ಮಣೇಗೌಡ ನೇಮಕವಾಗಿದ್ದಾನೆ.

ಹಲವು ಶಾಲೆಗಳಿಗೆ ವರ್ಗಾವಣೆಗೊಂಡು ಕೆಲಸ ಮಾಡುತ್ತಿದ್ದ ಈತನಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯೂ ಲಭಿಸಿತ್ತು. ಈತನ ಪರಿಚಯ ಇರುವವರು ಲಕ್ಷ್ಮಣೇಗೌಡ ಎಂದೇ ಗುರುತಿಸುತ್ತಿದ್ದರು. ಆದರೆ ಶಾಲೆಯಲ್ಲಿ ಲೋಕೇಶ್ ಎಂದು ಹೇಳುತ್ತಿದ್ದಾಗ ಆತ ಮೃತಪಟ್ಟಿದ್ದಾನಲ್ಲ ಎಂದು ಕೆಲವರು ಮಾತನಾಡಿಕೊಳ್ಳಲು ಆರಂಭಿಸುತ್ತಿದ್ದಂತೆಯೇ ಲಕ್ಷ್ಮಣೇಗೌಡ ಬೇರೆ ಊರಿನ ಶಾಲೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿಬಿಡುತ್ತಿದ್ದ ಎನ್ನಲಾಗಿದೆ.
ಈ ಮಧ್ಯೆ ಲಕ್ಷ್ಮಣೇಗೌಡ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಈತನನ್ನು ಗುರುತಿಸಿದ ಹುಣಸೂರಿನ ಪತ್ರಕರ್ತ ಇಂಟೆಕ್ ರಾಜು, 2019ರ ಡಿಸೆಂಬರ್ ತಿಂಗಳಿನಲ್ಲಿ ಲೋಕಾ ಯುಕ್ತಗೆ ದೂರು ಸಲ್ಲಿಸಿದ್ದರು. ಇವರ ದೂರಿನ ಆಧಾರದ ಮೇಲೆ ಈತನ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕೆ.ಆರ್. ನಗರ ತಾಲೂಕಿನ ಅಂದಿನ ತಹಸೀಲ್ದಾರ ರಿಗೆ ಆದೇಶ ನೀಡಲಾಗಿತ್ತು. ಆದರೆ ಅವರು ಶಿಕ್ಷಕ ಲೋಕೇಶ್‍ನ ಕುಟುಂಬದವರು ಯಾವುದೇ ರೀತಿಯ ಮಾಹಿತಿ ಹಾಗೂ ದಾಖಲೆ ನೀಡುತ್ತಿಲ್ಲ ಹಾಗೂ ಗ್ರಾಮಸ್ಥರು ಹೇಳಿಕೆಯನ್ನೂ ನೀಡುತ್ತಿಲ್ಲ, ಹೀಗಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸುವಂತೆ ಹುಣಸೂರು ತಾಲೂಕಿನ ಅಂದಿನ ಬಿಇಒ ಅವರಿಗೆ ಪತ್ರ ರವಾನಿಸಿದ್ದರು.

ಈ ಪತ್ರದ ಆಧಾರದ ಮೇರೆಗೆ ಹುಣ ಸೂರು ತಾಲೂಕಿನ ಅಂದಿನ ಬಿಇಒ ಮೈಸೂರು ಜಿಲ್ಲಾಧಿಕಾರಿಗಳ ಅನುಮತಿ ಕೋರಿದ್ದರು. 2020ರ ಡಿಸೆಂಬರ್ 10ರಂದು ಮೈಸೂರು ಅಪರ ಜಿಲ್ಲಾಧಿಕಾರಿಗಳು ನೀಡಿದ ಆದೇಶದ ಮೇರೆಗೆ ಮೈಸೂರು ಜಿಲ್ಲೆಯ ಡಿಡಿಪಿಐ ವಿಚಾರಣೆ ನಡೆಸಿ ಎಲ್ಲಾ ದಾಖಲೆಗಳನ್ನೂ ಕೂಲಂಕುಶವಾಗಿ ಪರಿಶೀಲಿಸಿದಾಗ ಲಕ್ಷ್ಮಣೇಗೌಡ ತನ್ನ ಅಣ್ಣ ಲೋಕೇಶನ ನೇಮಕಾತಿ ಪತ್ರ ಹಾಗೂ ದಾಖಲಾತಿ ಗಳನ್ನು ಬಳಸಿಕೊಂಡು ಶಿಕ್ಷಕ ಹುದ್ದೆಗೆ ಸೇರಿ ಕೆಲಸ ಮಾಡುತ್ತಿದ್ದಾನೆ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಡಿಡಿಪಿಐ ಅವರು ಈತನ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸುವಂತೆ ಹುಣಸೂರು ತಾಲೂಕು ಬಿಇಒ ಎಸ್.ಪಿ. ನಾಗರಾಜು ಅವರಿಗೆ 2022ರ ಮಾ.9ರಂದು ಆದೇಶ ನೀಡಿ ದ್ದರು. ಆರೋಪಿ ಲಕ್ಷ್ಮಣೇಗೌಡ ಪ್ರಪ್ರಥಮ ವಾಗಿ ಪಿರಿಯಾಪಟ್ಟಣ ತಾಲೂಕಿನ ಮುದ್ದನ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡಿದ್ದರಿಂದ ಪಿರಿಯಾಪಟ್ಟಣ ಠಾಣೆ ಪೊಲೀಸರಿಗೆ ದೂರು ಸಲ್ಲಿಸಲಾಯಿತು.
ಈತನ ವಿರುದ್ಧ ಭಾರತೀಯ ದಂಡ ಸಂಹಿತೆ 404, 406, 408, 409, 417, 419 ಮತ್ತು 420ರಡಿ ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಠಾಣೆ ಪೊಲೀಸರು ಮಾ.21ರಂದು ಲಕ್ಷ್ಮಣೇ ಗೌಡನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.