ಲೇಖಕ ಆತ್ಮಮುಖಿಯಾದರೆ ಸಾಲದು ಸಮಾಜಮುಖಿಯಾಗಿಯೂ ಇರಬೇಕು ಹಿರಿಯ ಸಾಹಿತಿ ಡಾ.ಸಿಪಿಕೆ ಅಭಿಮತ

ಮೈಸೂರು,ಏ.4(ಪಿಎಂ)- ಒಳ್ಳೆಯ ಸಾಹಿತಿಗಳು ಬೆಳೆದಷ್ಟು ಸಮಾಜವೂ ಸಮೃದ್ಧಿಯಾಗುತ್ತದೆ. `ಸಾಹಿತ್ಯ’ ಕೇವಲ ಸಂತಸ ನೀಡುವುದಕ್ಕೆ ಸೀಮಿತವಾಗಬಾರದು. ಇದರ ಜೊತೆಗೆ ಸಮಾ ಜದ ಸಂಪೋಷಣೆಯನ್ನೂ ಅದು ಮಾಡಬೇಕು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಅಭಿಪ್ರಾಯಪಟ್ಟರು.

ಮೈಸೂರಿನ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಎಂ.ಬಿ.ಸಂತೋಷ್ ಅಭಿಮಾನಿಗಳ ಬಳಗದ ವತಿಯಿಂದ `ಸಂತೋಷ್ ಷಷ್ಠಿಪೂರ್ತಿ ಸಂಭ್ರಮ-60’ ಶೀರ್ಷಿಕೆಯಡಿ ಭಾನುವಾರ ಹಮ್ಮಿ ಕೊಂಡಿದ್ದ ಸಾಹಿತಿ ಎಂ.ಬಿ.ಸಂತೋಷ್ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಾವಿಂದು ಬದಲಾದ ಕಾಲಘಟ್ಟದಲ್ಲಿದ್ದೇವೆ. ಇಂದು ಒಬ್ಬ ಲೇಖಕ ಆತ್ಮಮುಖಿಯಾದರೆ ಸಾಲದು. ಜೊತೆಗೆ ಸಮಾಜ ಮುಖಿಯೂ ಆಗಿರಬೇಕು. ಹೀಗೆ ಲೇಖಕ ಎರಡೆರಡು ಕರ್ತವ್ಯ ನಿಭಾಯಿಸುವುದು ಇಂದಿನ ಅಗತ್ಯವಾಗಿದೆ. ಅಂತೆಯೇ ಎಂ.ಬಿ.ಸಂತೋಷ್ ಸಾಹಿತ್ಯ ಕೃಷಿಯೊಂದಿಗೆ ಸಮಾಜಮುಖಿ ಯಾಗಿಯೂ ಮುನ್ನಡೆಯುತ್ತಿದ್ದಾರೆ ಎಂದು ಹೇಳಿದರು.

ಸಂತೋಷ್ ಅವರು 20 ವೈವಿಧ್ಯಪೂರ್ಣ ಕೃತಿಗಳನ್ನು ರಚಿಸಿ ದ್ದಾರೆ. ಹೀಗಾಗಿ ಅವರ ಸಾಹಿತ್ಯ ಕೃಷಿ ಸಮೃದ್ಧವಾಗಿದೆ ಎಂಬುದ ರಲ್ಲಿ ಯಾವುದೇ ಸಂದೇಹವಿಲ್ಲ. ಅವರ ಸಾಹಿತ್ಯ ಅನೇಕ ಪ್ರಕಾರ ಗಳಲ್ಲಿ ಹರಡಿದೆ. ಹನಿಗವನ, ಆಧುನಿಕ ವಚನ, ಕವನ ಸಂಗ್ರಹ, ಸಾಮಾಜಿಕ ಕಾದಂಬರಿ, ಸಣ್ಣ ಕಥೆಗಳು ಹಾಗೂ ನೀತಿ ಕಥೆಗಳ ಜೊತೆಗೆ `ಸಂತೋಷ್ ಪರ್ವ’ ಎಂಬ ಆತ್ಮಕಥನವನ್ನೂ ಅವರು ರಚಿಸಿದ್ದಾರೆ. ಅಲ್ಲದೆ, ಅನೇಕ ಕೃತಿಗಳನ್ನು ಅವರು ಸಂಪಾದಿಸಿ ದ್ದಾರೆ. ಅವರು ವೃತ್ತಿಯಲ್ಲಿ ಶೀಘ್ರಲಿಪಿಕಾರರು. ಇಂತಹ ವೃತ್ತಿ ಆಶ್ರಯಿಸುವ ಜೊತೆಗೆ ಸಾಹಿತ್ಯಕ ಕಾರ್ಯವನ್ನೂ ಮಾಡಿರುವುದು ಸಂತಸದ ವಿಷಯ. ಅವರದು ಆದರ್ಶ ದಾಂಪತ್ಯ. ಜೊತೆಗೆ ದಂಪತಿ ಗಳಿಬ್ಬರೂ ಶೀಘ್ರಲಿಪಿಕಾರರು ಎಂಬುದನ್ನು ನಾವು ಗಮನಿಸ ಬೇಕು. ಅವರ ಎಲ್ಲಾ ಕೃತಿಗಳ ವಿಮರ್ಶೆ ಇಂದು ಬಿಡುಗಡೆ ಗೊಂಡ ಅಭಿನಂದನಾ ಗ್ರಂಥದಲ್ಲಿ ಇರುವುದನ್ನು ಕಾಣ ಬಹುದು ಎಂದು ತಿಳಿಸಿದರು.

ಇನ್ನೊಂದೆಡೆ ಸಾಮಾಜಿಕ ಸೇವಾ ಕಾರ್ಯದಲ್ಲೂ ಅವರು ತೊಡಗಿಸಿಕೊಂಡಿದ್ದು, ನಾನಾ ಸಂಘ ಸಂಸ್ಥೆಗಳಲ್ಲಿ ಅವರು ಕ್ರಿಯಾಶೀಲರಾಗಿದ್ದಾರೆ. ಅಲ್ಲದೆ, ಶೀಲಸಂಪನ್ನರಾಗಿದ್ದು, ಇದು ಬಹಳ ಮುಖ್ಯ. ಹಲವು ಸಾಹಿತಿಗಳು ಮೇರು ಸಾಹಿತ್ಯ ನೀಡಿ ದರೂ ಶೀಲದ ವಿಚಾರದಲ್ಲಿ ಅವರ ಬಗ್ಗೆ ನಿರಾಸೆ ಮೂಡು ತ್ತದೆ. ಆದರೆ ಸಂತೋಷ್ ಶೀಲಸಂಪನ್ನರು ಹಾಗೂ ಸಾಹಿತ್ಯ ಯೋಗಿಯೂ ಆಗಿದ್ದಾರೆ. ಹಲವು ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಅಭಿನಂದನಾ ಭಾಷಣ ಮಾಡಿದ ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಇಷ್ಟೊಂದು ಪ್ರೀತಿಪಾತ್ರರು ಸೇರಿ ಅಭಿನಂದಿಸುವುದು ಈ ಕಾಲದಲ್ಲಿ ಅಪರೂಪ. ಅಂತಹ ಅಪರೂಪದ ಅಭಿನಂದನೆಗೆ ಸಂತೋಷ್ ಇಂದು ಭಾಜನ ರಾಗಿದ್ದಾರೆ. 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಸಂತೋಷ್, ಅವುಗಳಲ್ಲಿ ಜೀವನದ ಪ್ರೀತಿಯನ್ನು ಉಣ ಬಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಎಂ.ಬಿ.ಸಂತೋಷ್ ಹಾಗೂ ರೇಖಾ ಸಂತೋಷ್ ದಂಪತಿಯನ್ನು ಅಭಿನಂದಿಸಲಾಯಿತು. ಅಲ್ಲದೆ, `ಸಂತೋಷ್-ಸಂಪ್ರೀತಿ’ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಚಿಕ್ಕ ಅರಕಲಗೂಡು ವಿಶ್ವಕರ್ಮ ಶ್ರೀ ಸುಜ್ಞಾನ ಪ್ರಭುಪೀಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಅಭಿನಂದನಾ ಸಮಿತಿ ಅಧ್ಯಕ್ಷ ಕೃ.ಪಾ. ಮಂಜುನಾಥ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್, ಎಂ.ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.