ಕಾವೇರಿ ಕಲಾ ಗ್ಯಾಲರಿ ಕಾಮಗಾರಿ ಬಹುತೇಕ ಪೂರ್ಣ

ಮೈಸೂರು: ಕನ್ನಡ ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನದಿಂದ ಸಮುದ್ರಕ್ಕೆ ಸೇರುವವರೆವಿಗೂ ಸಂಪೂರ್ಣ ಚಿತ್ರಣವಿರುವ ಕಾವೇರಿ ಕಲಾ ಗ್ಯಾಲರಿಯನ್ನು ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಲು ಮುಂದಾಗಿದೆ.

ಕಾವೇರಿ ನದಿಯ ಬಗ್ಗೆ ಸಂಪೂರ್ಣವಾದ ಮಾಹಿತಿ ಬಹುತೇಕ ಜನರಿಗೆ ತಿಳಿಯದೆ ಇರುವುದನ್ನು ಮನ ಗಂಡಿರುವ ಕರ್ನಾಟಕ ಜ್ಞಾನ ಆಯೋಗವು ಕಾವೇರಿ ಗ್ಯಾಲರಿಯನ್ನು ನಿರ್ಮಿಸಿ ಮೈಸೂರಿನ ಜನತೆಗೆ ಮಾತ್ರವಲ್ಲದೆ, ಪ್ರವಾಸಿಗರಿಗೆ ಮಹತ್ತರವಾದ ಮಾಹಿತಿಯನ್ನು ಒದಗಿಸುವುದಕ್ಕಾಗಿ 2016ರಲ್ಲಿ ಈ ಹಿಂದಿನ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕಾವೇರಿ ನದಿಯ ಸಂರಕ್ಷಣೆಯ ಹಿತದೃಷ್ಟಿಯಿಂದ ಈ ಹಿಂದಿನ ಸರ್ಕಾರ ಜ್ಞಾನ ಆಯೋಗ ನೀಡಿದ್ದ ಸಲಹೆಯನ್ನು ಪುರಸ್ಕರಿಸಿ ಕಾವೇರಿ ಗ್ಯಾಲರಿಯ ಸ್ಥಾಪನೆಗೆ ಅಸ್ತು ಎಂದಿತ್ತು.

ಈ ಹಿನ್ನೆಲೆಯಲ್ಲಿ ಕಳೆದ 1 ವರ್ಷದಿಂದ ಪ್ರವಾಸೋದ್ಯಮ ಇಲಾಖೆ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಕನ್ನಡ ಕಾರಂಜಿ ಕಟ್ಟಡದಲ್ಲಿ 19 ಸಾವಿರ ಚದರ ಅಡಿ ವಿಸ್ತೀರ್ಣ ದಲ್ಲಿ ಕಾವೇರಿ ಗ್ಯಾಲರಿಯನ್ನು ನಿರ್ಮಿಸುತ್ತಿದೆ. ಕಾಮಗಾರಿ ಬಹುತೇಕ ಪೂರ್ಣ ಗೊಂಡಿದ್ದು, ದಸರಾ ಮಹೋತ್ಸವದ ವೇಳೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ಆ ಮೂಲಕ ದೇಶದಲ್ಲಿಯೇ ನದಿಗಳ ಬಗ್ಗೆಯೇ ನಿರ್ಮಾಣವಾದ 3ನೇ ಗ್ಯಾಲರಿ ಎಂಬ ಹಿರಿ ಮೆಗೆ ಪಾತ್ರವಾಗಲಿದೆ. ಈಗಾಗಲೇ ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಜೀವನ ಕುರಿತ ಗ್ಯಾಲರಿ ನಿರ್ಮಿಸಲಾಗಿದ್ದು, ಜನಮನ್ನಣೆ ಗಳಿಸುವುದರೊಂದಿಗೆ ಪ್ರವಾಸಿ ಕೇಂದ್ರವಾಗಿಯೂ ಮಾರ್ಪಟ್ಟಿದೆ. ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾವೇರಿ ಗ್ಯಾಲರಿ ಜನಾಕ ರ್ಷಣೆಯ ಕೇಂದ್ರ ಬಿಂದುವಾಗಲಿದೆ.

ತ್ರೀಡಿ ಥಿಯೇಟರ್ ಒಳಗೊಂಡಿದೆ: ಕಾವೇರಿ ಗ್ಯಾಲರಿಯಲ್ಲಿ ತ್ರೀಡಿ ಥಿಯೇಟರ್ ನಿರ್ಮಿಸಲಾಗಿದೆ. ಇದರಲ್ಲಿ ಕಾವೇರಿ ನದಿಯ ಬಗ್ಗೆ 20 ನಿಮಿಷಗಳ ಕಿರುಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಇದಕ್ಕಾಗಿ ಸಾಕ್ಷ್ಯಚಿತ್ರಗಳು ಹಾಗೂ ಕಾವೇರಿ ನದಿ ಹರಿಯುವ ಚಿತ್ರಣವುಳ್ಳ ವಿಡಿಯೋಗಳನ್ನು ಸಂಗ್ರಹಿಸಲಾಗಿದೆ.

ಆಕರ್ಷಣೀಯ ಕೇಂದ್ರವಾಗಲಿದೆ: ದಸರಾ ವಸ್ತುಪ್ರದರ್ಶನದ ಆವರಣದಲ್ಲಿರುವ ಕನ್ನಡ ಕಾರಂಜಿ ಕಟ್ಟಡದಲ್ಲಿ ನಿರ್ಮಿಸಲಾಗಿರುವ ಕಾವೇರಿ ಗ್ಯಾಲರಿ ಆಕರ್ಷಣೀಯ ಕೇಂದ್ರ ಬಿಂದುವಾಗಲಿದೆ. ಗ್ಯಾಲರಿಯಲ್ಲಿರುವ ಕಾವೇರಿ ನದಿಯ ಚಿತ್ರಣಕ್ಕೆ ಅನುಗುಣವಾಗಿ ಪ್ರವಾಸಿಗರಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ದ್ವನಿ ಮುದ್ರಿಕೆಯ ಮೂಲಕ ಮಾಹಿತಿ ಒದಗಿಸಲಾಗುತ್ತದೆ. ಜ್ಞಾನ ಆಯೋಗ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಪರಸ್ಪರ ಚರ್ಚಿಸಿ ಗ್ಯಾಲರಿಯ ಉದ್ಘಾಟನೆ ದಿನಾಂಕ ನಿಗದಿ ಮಾಡಿದರೆ ಪ್ರವಾಸಿಗರಿಗೆ ಉತ್ತಮವಾದ ಗ್ಯಾಲರಿ ಯೊಂದು ವೀಕ್ಷಣೆಗೆ ಲಭ್ಯವಾಗಲಿದೆ.

ಈ ಹಿಂದೆ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿದ್ದ ಕಸ್ತೂರಿರಂಗನ್ ಅವರು ಕಾವೇರಿ ಗ್ಯಾಲರಿ ನಿರ್ಮಾಣವಾಗುತ್ತಿದ್ದ ವೇಳೆ ಮೂರ್ನಾಲ್ಕು ಬಾರಿ ಭೇಟಿ ನೀಡಿ ಪರಿಶೀಲಿಸಿ, ಕಾವೇರಿ ನದಿಯ ಕಥೆಯನ್ನು ಜನರ ಕಣ್ಮುಂದೆ ಬರುವಂತೆ ವಿವರಿಸುವುದಕ್ಕೆ ಯಾವ ಕ್ರಮ ಅನುಸರಿಸಬೇಕು. ಯಾವ ತಂತ್ರಾಂಶ ಬಳಸಬೇಕೆಂದು ತಜ್ಞರೊಂದಿಗೆ ಚರ್ಚಿಸಿದ್ದಾರೆ. ಇದರೊಂದಿಗೆ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಸಲಹೆಯನ್ನು ಪರಿಗಣಿಸಿ ಉತ್ತಮವಾದ ಗ್ಯಾಲರಿ ನಿರ್ಮಿಸ ಲಾಗಿದೆ. ಈ ಗ್ಯಾಲರಿಯನ್ನು ಮೈಸೂರಿನ ಪ್ರವಾಸಿ ಕೇಂದ್ರವಾಗಿಯೂ ಮಾರ್ಪಡಿಸ ಬಹುದಾಗಿದೆ. ಕೇವಲ ದಸರಾ ವಸ್ತುಪ್ರದರ್ಶನ ಇರುವ 90 ದಿನಕ್ಕೆ ಮಾತ್ರ ಸೀಮಿತಗೊಳಿಸದೆ, ವರ್ಷದ 365 ದಿನಗಳಲ್ಲಿ ಪ್ರವಾಸಿಗರ ವೀಕ್ಷಣೆಗೆ ಗ್ಯಾಲರಿ ತೆರೆದಿರುವಂತೆ ಮಾಡಬೇಕೆಂದು ಅಧಿಕಾರಿಗಳು ಉದ್ದೇಶಿಸಿದ್ದಾರೆ.