ಸೆ.23ರಂದು ಮೈಸೂರಲ್ಲಿ `ಹೈಫಾ ಯುದ್ಧ’ದ  ಶತಮಾನೋತ್ಸವ ಸಂಭ್ರಮ ಆಚರಣೆ

ಮೈಸೂರು:  ಮೈಸೂರು ಸಂಸ್ಥಾನದ ಅಶ್ವದಳ ಸೈನಿಕರು ಭಾಗಿಯಾಗಿದ್ದ ಇಸ್ರೇಲ್‍ನ `ಹೈಫಾ ಯುದ್ಧ’ದ ಶತಮಾನೋತ್ಸವ ಸಮಾರಂಭವನ್ನು ಸೆ.23ರಂದು ಮೈಸೂರಿನಲ್ಲಿ ಆಯೋಜಿಸಲಾಗಿದೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಅಂದು ಸಂಜೆ 6ಕ್ಕೆ ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ‘ಹೈಫಾ ಯುದ್ಧ’ ಶತಮಾನೋತ್ಸವ ಸಂಭ್ರಮಾಚರಣೆ ಸಮಾರಂಭ ನಡೆಯ ಲಿದ್ದು, ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಂಸದರಾದ ಆರ್.ಧ್ರುವನಾರಾಯಣ್, ಪ್ರತಾಪ್‍ಸಿಂಹ ಪಾಲ್ಗೊಳ್ಳಲಿದ್ದಾರೆ. ಹೈಫಾ ಯುದ್ಧದಲ್ಲಿ ಪಾಲ್ಗೊಂಡಿದ್ದ 5 ಸೈನಿಕ ಕುಟುಂಬದವರನ್ನು ಗುರುತಿಸಲಾಗಿದ್ದು, ಅವರಿಗೆ ಸಮಾರಂಭದಲ್ಲಿ ಅಭಿನಂದಿಸಿ, ಗೌರವಿಸಲಾಗುವುದು ಎಂದು ಹೇಳಿದರು.

ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಇಸ್ರೇಲ್‍ನ ಹೈಫಾ ನಗರದ ವಿಮೋಚನೆಗಾಗಿ ನಡೆದ ಯುದ್ಧದಲ್ಲಿ ಮೈಸೂರು ಸಂಸ್ಥಾನದ ಅಶ್ವರೋಹಿ ದಳ ಭಾಗಿಯಾಗಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಹೆಮ್ಮೆಯ ಸಂಗತಿ. ಮೈಸೂರಿನ ಸೈನಿಕ ರೊಂದಿಗೆ ಜೋಧ್‍ಪುರ ಹಾಗೂ ಹೈದರಾಬಾದ್ ಸೈನಿಕರೂ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಹೈಫಾ ಯುದ್ಧದಲ್ಲಿ ಮೈಸೂರಿನ ಸುಮಾರು 2500 ಸಾವಿರ ಸೈನಿಕರು ಭಾಗಿಯಾಗಿದ್ದರು ಎನ್ನಲಾಗಿದೆ. ಸದ್ಯ ಗುರುತಿಸಲಾಗಿರುವ 5 ಸೈನಿಕ ಕುಟುಂಬದ ಸದಸ್ಯರಿಗೆ ಸಮಾರಂಭದಲ್ಲಿ ಗೌರವಿಸಲಾಗುವುದು. ಹೈಫಾ ವಿಮೋಚನೆಗಾಗಿ ಹೋರಾಡಿ ಹುತಾತ್ಮರಾಗಿರುವ ಸೈನಿಕರ ಸ್ಮರಣಾರ್ಥ ನವದೆಹಲಿಯಲ್ಲಿ `ತೀನ್ ಮೂರ್ತಿ ಚೌಕ್’ ನಿರ್ಮಿಸಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲೇ ಬೆಂಗಳೂರಿನಲ್ಲೂ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಹಾಗೆಯೇ ಮೈಸೂರಿನಲ್ಲೂ ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕೆಂದು ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಮನವಿ ಸಲ್ಲಿಸಲಾ ಗುವುದು ಎಂದು ತಿಳಿಸಿದರು.

ಹೈಫಾ ಶತಮಾನೋತ್ಸವ ಆಚರಣೆ ಸಮಿತಿಯ ಕಾರ್ಯದರ್ಶಿ ಹರೀಶ್ ಶೆಣೈ ಮಾತನಾಡಿ, ಹೈಫಾ ಯುದ್ಧದ ಗೆಲುವಿನಲ್ಲಿ ಮೈಸೂರು ಸಂಸ್ಥಾನದ ಸೈನಿಕರ ಪಾತ್ರ ಮಹತ್ವವಾದುದು. ಯುದ್ಧದ ಶತಮಾನೋತ್ಸವ ಆಚರಣೆಗಾಗಿ ಅನೇಕ ಉದ್ಯಮಿಗಳು ಒಟ್ಟುಗೂಡಿ ಸಮಿತಿಯನ್ನು ರಚಿಸಿಕೊಳ್ಳಲಾಗಿದೆ. ಹಾಗೆಯೇ ಇತಿಹಾಸವನ್ನು ಸಾಮಾನ್ಯರಿಗೂ ತಿಳಿಸಬೇಕೆಂಬ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಐತಿಹಾಸಿಕ ಘಟನೆಯನ್ನು ಸ್ವಯಂ ಸೇವಕರು, ಕತೆಯ ರೂಪದಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿ ಗಳಿಗೆ ತಿಳಿಸುತ್ತಿದ್ದಾರೆ. ಮುಂದಿನ ದಿನ ಗಳಲ್ಲಿ ಈ ಸಂಬಂಧ ರಸಪ್ರಶ್ನೆ ಹಾಗೂ ಚರ್ಚಾ ಸ್ಪರ್ಧೆ ಕಾರ್ಯಕ್ರಮ ನಡೆಸಲು ಚಿಂತನೆ ನಡೆದಿದೆ ಎಂದರು. ಸಮಿತಿಯ ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

ಈಟಿ-ಖಡ್ಗವೇ ಯುದ್ಧಾಸ್ತ್ರ: ಹೈಫಾ ಇಸ್ರೇಲಿನ ಒಂದು ಪ್ರಮುಖ ಬಂದರು ನಗರವಾಗಿದ್ದು, ಮೊದಲ ಮಹಾಯುದ್ಧದಲ್ಲಿ ಇಲ್ಲಿನ ಮೌಂಟ್ ಕಾರ್ವೆಲ್ ಶಿಖರ ವನ್ನೇರಿ ಕುಳಿತಿದ್ದ ಟರ್ಕಿಯ ಸೈನ್ಯ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿ, ಇಂಗ್ಲೆಂಡ್‍ನ ಸೈನ್ಯವನ್ನು ಹಿಮ್ಮೆಟ್ಟಿಸಿತ್ತು. ಆದರೆ ಹೈಫಾ ಮುಕ್ತಿಗಾಗಿ ಅಶ್ವದಳದ ಮೇಜರ್ ದಳಪತ್ ಸಿಂಗ್ ಶೇಖಾವತ್ ನೇತೃತ್ವದಲ್ಲಿ ಮೈಸೂರು ಹಾಗೂ ಜೋಧ್‍ಪುರದ ಅಶ್ವದಳ 1918ರ ಸೆ.23ರಂದು ಕೆಚ್ಚೆದೆಯಿಂದ ಮುನ್ನುಗ್ಗಿ, ಕೇವಲ ಖಡ್ಗ ಹಾಗೂ ಈಟಿಯ ಸಹಾಯ ದಿಂದಲೇ ಶಸ್ತ್ರಸಜ್ಜಿತ ಟರ್ಕಿ ಸೈನಿಕರನ್ನು ಹಿಮ್ಮೆಟ್ಟಿಸಿತ್ತು. ಮಳೆಯ ನಡುವೆಯೂ ಪರ್ವತವನ್ನೇರುತ್ತಿದ್ದ ಮೈಸೂರಿನ ಅಶ್ವ್ವಾರೋಹಿ ದಳದ ಹಿಂದೆ ಇಡೀ ಭಾರ ತೀಯ ಸೇನೆ ದಾಳಿ ನಡೆಸಿ, ಐತಿಹಾಸಿಕ ಗೆಲುವು ಸಾಧಿಸಿತು. ಯುದ್ಧದಲ್ಲಿ ನೂರಾರು ಭಾರತೀಯ ಸೈನಿಕರು ಹುತಾತ್ಮರಾದರು. ಹೈಫಾ ವಿಮುಕ್ತಿ ಯುದ್ಧದ ಸ್ಮರಣಾರ್ಥ ಭಾರತೀಯ ಸೇನೆ ಸೆ.23ರಂದು ಹೈಫಾ ದಿನವನ್ನಾಗಿ ಆಚರಿಸುತ್ತದೆ.