24 ದಿನಗಳ ಬಳಿಕ ಮನೆಗೆ ಮರಳಿದ ಕೊರೊನಾ ವಾರಿಯರ್ಸ್ 3ನೇ ತಂಡ

ಮೈಸೂರು, ಮೇ 6 (ಆರ್‍ಕೆಬಿ)- ಮೈಸೂರಿನ ಕೋವಿಡ್-19 ಆಸ್ಪತ್ರೆಯಲ್ಲಿ 10 ದಿನಗಳ ಕರ್ತವ್ಯ ನಿರ್ವಹಿಸಿ, ಬಳಿಕ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ ನಾಲ್ವರು ವೈದ್ಯರು ಮತ್ತು 8 ಸ್ಟಾಫ್‍ನರ್ಸ್‍ಗಳನ್ನು ಒಳಗೊಂಡ ಕೊರೊನಾ ವಾರಿಯರ್ಸ್‍ನ 3ನೇ ತಂಡ ಮಂಗಳವಾರ ಮನೆಗೆ ಮರಳಿದೆ.

ಮೈಸೂರಿನ ಸಯ್ಯಾಜಿರಾವ್ ರಸ್ತೆಯ ರಾಜಲಕ್ಷ್ಮಿ ಕಂಫರ್ಟ್ ನಲ್ಲಿ 14 ದಿನಗಳಿಂದ ಕ್ವಾರಂಟೈನ್‍ನಲ್ಲಿದ್ದ ಈ 12 ಮಂದಿಗೆ ಮೈಸೂರು ನಗರಪಾಲಿಕೆ ಅಧಿಕಾರಿಗಳು, ಲಯನ್ಸ್ ಸಂಸ್ಥೆ ಪದಾಧಿ ಕಾರಿಗಳು ಬುಧವಾರ ಗೌರವದ ಸೆಲ್ಯೂಟ್ ಹೊಡೆದು, ಹಣ್ಣು, ತರಕಾರಿ, ದಿನಸಿ ಕಿಟ್ ನೀಡಿ ಬೀಳ್ಕೊಟ್ಟರು. ಈ ವೇಳೆ ಮೈಸೂರು ಟೌನ್ ಪ್ಲಾನಿಂಗ್ ಅಧಿಕಾರಿ ಜಯಸಿಂಹ, ಜಿಎಸ್‍ಟಿ ಸಂಯೋ ಜಕ ಎಲ್.ಎನ್.ವೆಂಕಟೇಶ್ ಪ್ರಸಾದ್, ಲಯನ್ಸ್ ವಲಯ ಅಧ್ಯಕ್ಷ ಎಲ್.ಎನ್.ಸಂತೋಷ್‍ಕುಮಾರ್, ಜಿಲ್ಲಾ ಸೇವಾ ಚಟುವಟಿಕೆಗಳ ಸಂಯೋಜಕ ಟಿ.ಎಸ್.ರವೀಂದ್ರನಾಥ್, ಲಯನ್ಸ್ ಪದಾಧಿಕಾರಿ ಗಳಾದ ಪಿ.ರೇವಣ್ಣ, ಎಸ್.ರಮೇಶ್, ಡಾ.ಮಂಜುನಾಥ್, ಡಾ. ಹೆಚ್.ಆರ್.ದಿನೇಶ್ ಇನ್ನಿತರರು ಉಪಸ್ಥಿತರಿದ್ದರು