ವಿಷಮಿಶ್ರಿತ ಹಲಸಿನಹಣ್ಣು ತಿಂದು ಹಸುಗಳು ಸಾವು

ಕುಶಾಲನಗರ: ಸಮೀಪದ ಹುದುಗೂರು ಜೇನುಕಲ್ಲು ಬೆಟ್ಟ ಮೀಸಲು ಅರಣ್ಯದಂಚಿನಲ್ಲಿ ಕಿಡಿಗೇಡಿಗಳು ಕಾಡಾನೆಗಳಿಗೆ ಇಟ್ಟಿದ್ದ ವಿಷಮಿಶ್ರಿತ ಹಲಸಿನಹಣ್ಣು ತಿಂದು ನಾಲ್ಕು ಹಸುಗಳು ಮೃತಪಟ್ಟಿರುವ ಘಟನೆ ಸೀಗೆ ಹೊಸೂರು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಕೂಡಿಗೆ ಗ್ರಾಪಂ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ರೈತ ರವಿ ಎಂಬುವವರಿಗೆ ಸೇರಿದ ಒಂದು ಎತ್ತು ಹಾಗೂ ಮೂರು ಹಸುಗಳು ಮೃತಪಟ್ಟಿವೆ. ಕಾಡಾಂಚಿನ ಗ್ರಾಮ ದಲ್ಲಿ ಕಾಡಾನೆಗಳು ದಾಳಿ ಮಾಡಿ ಕೃಷಿ ಫಸಲನ್ನು ನಾಶ ಮಾಡುತ್ತಿರುವ ಹಿನ್ನೆಲೆ ಯಲ್ಲಿ ಕೆಲವು ಕಿಡಿಗೇಡಿಗಳು ಕಾಡಾನೆಗಳು ಬರುವ ದಾರಿಯಲ್ಲಿ ಹಲಸಿನ ಹಣ್ಣಿನಲ್ಲಿ ವಿಷಮಿಶ್ರಣ ಮಾಡಿ ಇಟ್ಟಿದ್ದಾರೆ. ಇದೇ ದಾರಿಯಲ್ಲಿ ಮಧ್ಯಾಹ್ನ ಮೇಯಲು ಹೋಗುತ್ತಿದ್ದ ಈ ಹಸುಗಳು ಹಲಸಿನ ಹಣ್ಣು ತಿಂದು ತೀವ್ರವಾಗಿ ಅಸ್ವಸ್ಥಗೊಂಡು ಸಂಜೆ ವೇಳೆಗೆ ಮೃತಪಟ್ಟಿವೆ. ಸ್ಥಳಕ್ಕೆ ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಸತೀಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ರೈತ ರವಿ ಕೂಡ್ಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.