ಕೊರೊನಾ ವೈರಸ್‍ನಿಂದ ಪಾಠ ಕಲಿತಿದ್ದರೂ ಪರಿಸರ ಉಳಿಸಿಕೊಳ್ಳದಿದ್ದರೆ ಮುಂದೆ ಯಾರಿಗೂ ಉಳಿಗಾಲವಿಲ್ಲ

ಮೈಸೂರು,ಮಾ.1(ಆರ್‍ಕೆಬಿ)- ಕೊರೊನಾ ವೈರಸ್ ನಮಗೆ ಪಾಠ ಕಲಿಸಿದ್ದು, ಪರಿ ಸರದ ಬಗ್ಗೆ ಒಮ್ಮೆ ಯೋಚಿಸುವಂತೆ ಮಾಡಿದೆ. ಇಷ್ಟಾಗಿಯೂ ನಾವು ಪಾಠ ಕಲಿಯ ದಿದ್ದರೆ, ಪರಿಸರ ಉಳಿಸಿಕೊಳ್ಳಲು ಮುಂದಾ ಗದೇ ಹೋದರೆ ಮುಂದೆ ಯಾರಿಗೂ ಉಳಿಗಾಲವಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಇಂದಿಲ್ಲಿ ಎಚ್ಚರಿಕೆ ನೀಡಿದರು.

ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ವಿಜ್ಞಾನ ವಿಭಾಗ ಆಯೋಜಿಸಿದ್ದ `ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂಗಾಲ ಹೊರಸೂಸುವಿಕೆ ಹೆಚ್ಚಿರುವ ಭಾಗ ದಲ್ಲಿ ಕೋವಿಡ್ ಪರಿಣಾಮ ತೀವ್ರವಾಗಿದ್ದ ಬಗ್ಗೆ ತಿಳಿಸಿದ ಅವರು, ಜೀವ ವೈವಿಧ್ಯ ಎಲ್ಲಿ ಹೆಚ್ಚಾಗಿರುತ್ತದೆಯೋ ಅಲ್ಲಿನ ಜನರ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿ ರುತ್ತದೆ. ಹೀಗಾಗಿಯೇ ಪಶ್ಚಿಮ ಘಟ್ಟ ಪ್ರದೇಶದ ಜನರನ್ನು ಕೊರೊನಾ ಹೆಚ್ಚು ಬಾಧಿಸಲಿಲ್ಲ. ಅಲ್ಲಿನ ವೈವಿಧ್ಯಮಯ ಆಹಾರ ಪದ್ಧತಿಯೂ ಇದಕ್ಕೆ ಕಾರಣ ಇರಬಹುದು ಎಂದು ಅಭಿಪ್ರಾಯಪಟ್ಟರು.

ಇಂದು ಅಭಿವೃದ್ಧಿ ಹೆಸರಿನಲ್ಲಿ ಜಲ ಮೂಲಗಳನ್ನು ನಾಶಪಡಿಸಲಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಜಲಾ ನಯನ ಪ್ರದೇಶಗಳ ಪುನಶ್ಚೇತನಕ್ಕೆ ಮುಂದಾ ಗದಿದ್ದರೆ ಜೀವ ವೈವಿಧ್ಯವನ್ನು ಕಳೆದುಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಿಂದಿನ ಕಾಲದಲ್ಲಿ ಅನಕ್ಷರಸ್ಥರಿಗೆ ನೀರಿನ ಮಹತ್ವ ತಿಳಿದಿತ್ತು. ಹಾಗಾಗಿ ಹೆಚ್ಚೆಚ್ಚು ಕೆರೆಗಳನ್ನು ನಿರ್ಮಿಸಿ ಜಲಮೂಲಗಳನ್ನು ಸಂರಕ್ಷಿಸಿದ್ದರು. ಆದರೆ ಇಂದು ನಮ್ಮಲ್ಲಿ ಪದವಿಗಳಿದ್ದರೂ ಸಮಾಜಕ್ಕೆ ಮತ್ತು ಸಕಲ ಜೀವಿಗಳಿಗೆ ಅನುಕೂಲಕರವಾದ ಕಾರ್ಯ ಗಳು ಆಗುತ್ತಿಲ್ಲ. ಜಲಾನಯನ ಅಭಿವೃದ್ಧಿಗೆ ಎಲ್ಲರೂ ಚಿಂತಿಸಬೇಕು. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿ ಕೊಂಡು ಮಳೆಯ ನೀರು ಪೋಲಾಗ ದಂತೆ ಕಾರ್ಯಪ್ರವೃತ್ತರಾಗಬೇಕು. ಇಂಗು ಗುಂಡಿ, ಬೀಳುವ ಮಳೆಗೆ ಅನುಗುಣವಾಗಿ ಕೊಳ, ಕೆರೆ ಕಟ್ಟೆಗಳನ್ನು ನಿರ್ಮಿಸಿಕೊಂಡರೆ ಮಾತ್ರ ಜೀವ ವೈವಿಧ್ಯ ಸಂರಕ್ಷಿಸಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.

ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾತನಾಡಿ, ಮುಕ್ತ ವಿವಿಯಲ್ಲಿ ನೀರಿನ ಸಂರಕ್ಷಣೆಯ ಅಧ್ಯಯನ ಕುರಿತು ಡಿಪ್ಲೊಮಾ ಕೋರ್ಸ್ ಆರಂಭಿಸಲು ಚಿಂತಿಸಿದ್ದೇವೆ. ಮುಕ್ತ ಗಂಗೋತ್ರಿ ಆವರಣ ದಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸುವ ಜೊತೆಗೆ ಮಳೆ ನೀರು ಸಂಗ್ರಹಿಸಿ ಕೆರೆ ನಿರ್ಮಿಸಲಾಗುವುದು ಎಂದರು.

ಇದೇ ವೇಳೆ `ಆರೋಗ್ಯ ಮತ್ತು ಪರಿ ಸರದ ಮೇಲೆ ಕೋವಿಡ್-19 ಪ್ರಭಾವ’ ಕುರಿತು ಆಯೋಜಿಸಲಾಗಿದ್ದ ಚಿತ್ರಸ್ಪರ್ಧೆ ಯಲ್ಲಿ ಮಹಾರಾಜ ಕಾಲೇಜಿನ ಸಮೃದ್ಧಿ ಮಿತ್ರ (ಪ್ರಥಮ), ಎಂ.ಸಿ.ಶ್ರದ್ಧಾ (ದ್ವಿತೀಯ), ಮುಕ್ತ ವಿವಿಯ ಉಸ್ಮಾನ್ (ತೃತೀಯ) ನಗದು ಬಹುಮಾನ ಪಡೆದರು. ಸೋನಿಕಾ, ಕೆ.ಟಿ.ಕಾವ್ಯಾ ಸಮಾಧಾನಕರ ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್, ಅಕಾಡೆಮಿಕ್ ಡೀನ್ ಡಾ.ಅಶೋಕ್ ಕಾಂಬ್ಳೆ, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಜೆ.ಎಸ್.ಚಂದ್ರಶೇಖರ್ ಉಪಸ್ಥಿತರಿದ್ದರು.