ವಾರಸುದಾರರಿಂದಲೇ ಕೋವಿಡ್‍ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ

ಮೈಸೂರು, ಆ.16(ಆರ್‍ಕೆ)- ಕೋವಿಡ್-19 ಸೋಂಕು ತಗುಲಿ ಮೃತಪಟ್ಟ ವ್ಯಕ್ತಿಗಳ ಅಂತ್ಯಕ್ರಿಯೆ ಯನ್ನು ವಾರಸುದಾರರೇ ತಮ್ಮ ಸಂಪ್ರದಾಯದಂತೆ ನಡೆಸಬಹುದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣ ದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯ ಕ್ಷತೆಯಲ್ಲಿ ನಡೆದ ಕೋವಿಡ್ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿದ ಅವರು ಕೊರೊನಾ ಸೋಂಕು ಇತರರಿಗೆ ಹರಡಬಾರದೆಂದಬ ಕಾರಣಕ್ಕಾಗಿ ಈವರೆಗೆ ಸೋಂಕಿ ನಿಂದ ಮೃತಪಟ್ಟವರ ಪಾರ್ಥಿವ ಶರೀರವನ್ನು ವಾರಸುದಾರರಿಗೆ ನೀಡದೇ ಜಿಲ್ಲಾಡಳಿತದಿಂದ ಪಿಪಿಇ ಕಿಟ್ ಧರಿಸಿ ಅಗತ್ಯ ಮುಂಜಾಗ್ರತ ಕ್ರಮ ಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತಿತ್ತು ಎಂದರು.

ಆದರೆ ಈಗ ಕೇಂದ್ರ ಸರ್ಕಾರದ ಹೊಸ ಮಾರ್ಗ ಸೂಚಿಯಂತೆ ಕೊರೊನಾ ಸೋಂಕಿತ ವ್ಯಕ್ತಿಯ ಮೃತದೇಹದಿಂದ ವೈರಾಣು ಹರಡುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿರುವ ಕಾರಣ ಇನ್ನು ಮುಂದೆ ಮೃತದೇಹಗಳನ್ನು ವಾರಸುದಾರರೇ ತಮ್ಮ ಸಂಪ್ರ ದಾಯದಂತೆ ಹಾಗೂ ವಿಧಿ ವಿಧಾನ ಗಳೊಂದಿಗೆ ನೆರವೇರಿಸುವ ಅವಕಾಶ ಕಲ್ಪಿಸಲಾಗಿದೆ. ಆದರೆ ತಮ್ಮ ಜಮೀನು ಅಥವಾ ಸ್ಮಶಾನಗಳಲ್ಲಿ ಕನಿಷ್ಠ ಆರು ಅಡಿ ಆಳಕ್ಕೆ ಗುಂಡಿ ತೆಗೆದು ರಸಾಯನಿಕ ದ್ರಾವಣ ಹಾಕಿ ಮೃತದೇಹಗಳನ್ನು ಹೂಳಬಹುದೇ ಹೊರತು ಸೌದೆಯಿಂದ ಸುಡುವಂತಿಲ್ಲ. ಎಲೆಕ್ಟ್ರಿಕ್ ಅಥವಾ ಅನಿಲ ಚಿತಾಗಾರ ಇದ್ದಲ್ಲಿ ಮಾತ್ರ ಅಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶವಿರುತ್ತದೆ ಎಂದರು. ಅಂತ್ಯಕ್ರಿಯೆ ವೇಳೆ ಸ್ಥಳೀಯ ಪುರಸಭೆ, ಪಟ್ಟಣ ಪಂಚಾಯಿತಿ ಅಥವಾ ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದು ಮಾರ್ಗದರ್ಶನ ನೀಡುವರಲ್ಲದೆ ಅಂತ್ಯಕ್ರಿಯೆ ನಡೆದ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡುವರು. ಆದರೆ ಸಂಬಂಧಿಕರು ಅಥವಾ ವಾರಸು ದಾರರು 5ರಿಂದ 10 ಮಂದಿ ಪಾಲ್ಗೊಂಡು ಕನಿಷ್ಠ 10 ಅಡಿ ದೂರಲ್ಲಿ ನಿಂತು ಅಂತ್ಯಕ್ರಿಯೆ ವೀಕ್ಷಿಸಬಹುದು. ಪೂಜೆ-ಧಾರ್ಮಿಕ ವಿಧಿವಿಧಾನ ನೆರವೇರಿಸುವ ವ್ಯಕ್ತಿಗಳು ಪಿಪಿಇ ಕಿಟ್ ಧರಿಸುವುದು ಕಡ್ಡಾಯ. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಕೊರೊನಾ ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಅವಕಾಶವಿರುವುದರಿಂದ ಸಾರ್ವಜನಿಕರಿಗೆ ಭಾವನಾತ್ಮಕವಾಗಿ ಅನುಕೂಲವಾಗಲಿದೆ ಎಂದೂ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.