ಗೋ ಹತ್ಯೆ ನಿಷೇಧ ಕಾಯ್ದೆಗೆ ನ್ಯಾಯಾಲಯದಲ್ಲಿ ಹಿನ್ನಡೆ ಖಚಿತ: ಬಡಗಲಪುರ ನಾಗೇಂದ್ರ

ಮೈಸೂರು, ಡಿ.13(ಎಂಟಿವೈ)- ಗಂಜಲದ ವಾಸನೆ, ಹಸು ಸಾಕುವುದರ ತಿಳಿಯದವರು ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಲಿದೆ ಎಂದು ವಕೀಲರೂ ಆದ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ರೈತರು, ಗ್ರಾಮೀಣ ಜನರಿಗೆ ಗೋವು ಗಳ ಸಾಕಣೆ ಬಗ್ಗೆ ಯಾರೂ ಹೇಳಿಕೊಡುವ ಅಗತ್ಯವಿಲ್ಲ. ಹಸುಗಳ ಬಗ್ಗೆ ತಿಳಿಯದೇ ಇದ್ದವರು ಹಸು ಸಾಕಣೆ ಬಗ್ಗೆ ತಿಳಿಹೇಳುವಂತಹ ದುಸ್ಥಿತಿ ಎದುರಾಗಿದೆ. ಹಸುವಿನ ಗಂಜಲದ ವಾಸನೆ ತಿಳಿಯದವರು, ಬೆರಣಿ ತಟ್ಟಲು ಬಾರದವರು, ಹಸು, ದನ ಮೇಯಿಸದೇ ಇರುವವರು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ವಯಸ್ಸಾದ ಹಸುಗಳನ್ನು ಹೇಗೆ ಸಾಕಬೇಕೆಂಬುದು ನಮಗೆ ಗೊತ್ತಿದೆ. ನಾನೊಬ್ಬ ವಕೀಲನಾಗಿ ಹೇಳುತ್ತಿದ್ದೇನೆ, ಗೋಹತ್ಯಾ ನಿಷೇಧ ಕಾಯ್ದೆಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗುವುದು ಖಚಿತ ಎಂದರು.

ಸರ್ಕಾರ ಕರಡು ಪ್ರತಿ ನೀಡದೆ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಚರ್ಚೆಗೊಳಪಡಿ ಸದೆ ಬಿಲ್ ಪಾಸ್ ಮಾಡಲಾಗಿದೆ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೋ ಹತ್ಯೆ ನಿಷೇಧ ಕಾಯ್ದೆ ಅವೈಜ್ಞಾನಿಕ. ಗೋಹತ್ಯೆ ನಿಷೇಧ ಕಾಯ್ದೆ ರೈತರ ಬದುಕಿಗೆ ಮಾರಕ. ಉಪಯುಕ್ತ ಗೋವುಗಳನ್ನು ರೈತರು ಮಾರುವುದಿಲ್ಲ. ಅನುಪಯುಕ್ತ ಗೋವುಗಳನ್ನು ಮಾತ್ರ ಮಾರುತ್ತಾರೆ. ಸರ್ಕಾರದ ಈ ಕಾಯ್ದೆಯಿಂದ ಗೋವುಗಳನ್ನು ಕಾಯುವುದೇ ರೈತರ ಬದುಕಿಗೆ ಮಾರಕ ಎಂದರು.

ದೆಹಲಿ ಹೋರಾಟಕ್ಕೆ ಬೆಂಬಲ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಐಕ್ಯ ಹೋರಾಟ ಸಮಿತಿ ಬೆಂಬಲ ನೀಡಿದ್ದು, ಡಿ.16ರಿಂದ 31ರವರೆಗೆ ಬೆಂಗಳೂರಿನ ಮೌರ್ಯ ಹೋಟೆಲ್ ಸರ್ಕಲ್‍ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ನಿರಂತರ ಧರಣಿ ಪ್ರತಿಭಟನೆ ನಡೆಸಲಾಗುವುದು. 25 ಮಂದಿಯ ನಿಯೋಗ ಡಿ.24ರಂದು ದೆಹಲಿಗೆ ತೆರಳಿ ಡಿ.25 ಮತ್ತು 26ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆಗೂಡಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದೆ ಎಂದು ಮಾಹಿತಿ ನೀಡಿದರು.