ಮೈಸೂರಿನಿಂದ ಚುಂಚನಕಟ್ಟೆಗೆ ಬೃಹತ್ ಶ್ರೀ ಆಂಜನೇಯಸ್ವಾಮಿ ಮೂರ್ತಿ

ಮೈಸೂರು, ಮೇ ೬(ಪಿಎಂ)- ಕೆಆರ್ ನಗರ ಕ್ಷೇತ್ರದ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಗ್ರಾಮದ ಶ್ರೀ ಕೋದಂಡ ರಾಮ ಸ್ವಾಮಿ ದೇವಸ್ಥಾನದ ಮುಂಭಾಗ ಪ್ರತಿಷ್ಠಾಪನೆಗೊಳ್ಳಲಿರುವ ೩೧ ಅಡಿ ಎತ್ತರದ ಶ್ರೀ ಆಂಜನೇಯಸ್ವಾಮಿಯ ಏಕಶಿಲಾ ಬೃಹತ್ ಮೂರ್ತಿಯನ್ನು ಮೈಸೂರು ನಗರದಿಂದ ಶುಕ್ರವಾರ ಬೆಳಗ್ಗೆ ಕಳುಹಿಸಿಕೊಡಲಾಯಿತು.

ಅಂದಾಜು ೪೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಬೃಹತ್ ಮೂರ್ತಿ, ೨೮ರಿಂದ ೩೦ ಟನ್ ತೂಕವಿದ್ದು, ಶಿಲ್ಪಿ ಅರುಣ್ ಯೋಗಿರಾಜ್ ಈ ಮೂರ್ತಿಯ ಕೆತ್ತನೆ ಕಾರ್ಯ ಮಾಡಿದ್ದಾರೆ. ಮೈಸೂರಿನ ಸರಸ್ವತಿಪುರಂನ ಅರುಣ್ ಯೋಗಿರಾಜ್ ಅವರ ಕೆತ್ತನೆ ಸ್ಥಳದಿಂದ ಇಂದು ಬೆಳಗ್ಗೆ ಕ್ರೇನ್ ಸಹಾಯದಿಂದ ತೆರೆದ ಲಾರಿಯ ಮೂಲಕ ಚುಂಚನಕಟ್ಟೆಗೆ ಕೊಂಡೊಯ್ಯಲಾಯಿತು.

ಇದಕ್ಕೂ ಮುನ್ನ ಸದರಿ ಮೂರ್ತಿಗೆ ಪೂಜಾ ಕೈಂಕರ್ಯ ನೆರವೇರಿಸಲಾ ಯಿತು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಸಾ.ರಾ.ಮಹೇಶ್, ಮಾಜಿ ಮೇಯರ್ ಲಿಂಗಪ್ಪ, ಮೈಸೂರು ಜಿಪಂ ಮಾಜಿ ಸದಸ್ಯ ಸಾ.ರಾ.ನಂದೀಶ್, ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

`ಶಾಸಕ ಸಾ.ರಾ.ಮಹೇಶ್ ಅವರು ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭದಲ್ಲಿ ಚುಂಚನಕಟ್ಟೆ ಕ್ಷೇತ್ರದ ಅಭಿವೃದ್ಧಿಗೆ ಒಟ್ಟಾರೆ ೧೨ ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದರು. ಅದರಲ್ಲಿ ಈ ಬೃಹತ್ ಮೂರ್ತಿಯನ್ನು ೪೦ ಲಕ್ಷ ರೂ. ವೆಚ್ಚದಲ್ಲಿ ಕೆತ್ತಿಸಲಾಗಿದೆ’ ಎಂದು ಸಾ.ರಾ.ಮಹೇಶ್ ಅವರ ಆಪ್ತ ಸಹಾಯಕರು `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಕೆಆರ್ ನಗರ ಪಟ್ಟಣದ ಶ್ರೀ ತೋಪಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಪುರ ಪ್ರವೇಶ ಪಡೆದ ಮೂರ್ತಿಯನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಇನ್ನಿತರೆ ಧರ್ಮೀಯರಿಂದ ಜಾತ್ಯತೀತವಾಗಿ ಪುಷ್ಪಾರ್ಚನೆ ಮೂಲಕ ಬರ ಮಾಡಿಕೊಳ್ಳಲಾಯಿತು. ಬಳಿಕ ಮೂರ್ತಿಯು ಚುಂಚನಕಟ್ಟೆ ತಲುಪಿತು.