ಜೆಡಿಎಸ್‍ನ 9, ಕಾಂಗ್ರೆಸ್‍ನ ಇಬ್ಬರು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ

*ಕೋನರೆಡ್ಡಿ ಸಿಎಂ ರಾಜಕೀಯ ಕಾರ್ಯದರ್ಶಿ
*ದೇವಾನಂದ್ ಪೂಲಸಿಂಗ್ ಚವ್ಹಾಣ್ ಸೇರಿ ನಾಲ್ವರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ
ಬೆಂಗಳೂರು: ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು 9 ತಿಂಗಳ ಬಳಿಕ ಜೆಡಿಎಸ್‍ನ 9 ಹಾಗೂ ಕಾಂಗ್ರೆಸ್‍ನ ಇಬ್ಬರು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿದೆ.

ವಿಪಕ್ಷ ಬಿಜೆಪಿಯ ರಾಜಕೀಯ ತಂತ್ರಗಾರಿಕೆ ಹಾಗೂ ಮೈತ್ರಿ ಪಕ್ಷಗಳ ಶಾಸಕರಲ್ಲಿ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ನಿಗಮ ಮಂಡಳಿ ನೇಮಕಾತಿ ಅಸ್ತ್ರವನ್ನು ಸಕಾಲದಲ್ಲಿ ಬಳಸಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಿಂತನೆ ನಡೆಸಿ ದ್ದರು. ಆದರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್‍ನ 9 ಹಾಗೂ ಕಾಂಗ್ರೆಸ್‍ನ ಇಬ್ಬರು ಶಾಸಕರನ್ನು ನಿಗಮ ಮಂಡಳಿಗೆ, ಜೆಡಿಎಸ್‍ನ ಐವರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಿ ಆದೇಶಿಸಿದ್ದಾರೆ. ಇದರಿಂದ ಶಾಸಕರ ಅಸಮಾಧಾನ ಶಮನವಾಗುವುದರ ಜೊತೆಗೆ ಮುಂಬರುವ ಚುನಾವಣೆಗೂ ಲಾಭವಾಗಲಿದೆ.

ನಿಗಮ ಮಂಡಳಿ ಅಧ್ಯಕ್ಷರು: ಜೆಡಿಎಸ್‍ನ ನಾಗನಗೌಡ ಕಂದಕೂರು ಅವರನ್ನು ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ, ರಾಜಾವೆಂಕಟಪ್ಪ ನಾಯಕ್- ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮ, ಡಿ.ಸಿ.ಗೌರಿಶಂಕರ್- ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್( ಎಂಎಸ್‍ಐಎಲ್), ಬಿ.ಸತ್ಯನಾರಾಯಣ- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಎಲ್.ಎನ್.ನಿಸರ್ಗ ನಾರಾಯಣಸ್ವಾಮಿ- ಬೆಂಗಳೂರು ಅಂತರಾ ಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ, ಡಾ.ಕೆ.ಅನ್ನದಾನಿ- ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ, ಕೆ.ಎಂ.ಶಿವಲಿಂಗೇಗೌಡ- ಕರ್ನಾಟಕ ಗೃಹ ಮಂಡಳಿ, ಕೆ.ಮಹದೇವ್- ಕರ್ನಾಟಕ ರಾಜ್ಯ ಕೈಗಾರಿಕೆ ಮೂಲ ಸೌಕರ್ಯ ಅಭಿವೃದ್ದಿ ನಿಗಮ, ಮಹಮ್ಮದ್ ಜಫ್ರುಲ್ಲಾ ಖಾನ್- ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮ, ಕಾಂಗ್ರೆಸ್‍ನ ಟಿ.ವೆಂಕಟರಮಣಯ್ಯ- ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ಹಾಗೂ ಎಸ್.ಭೀಮಾನಾಯಕ್- ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಸಂಸದೀಯ ಕಾರ್ಯದರ್ಶಿಗಳು: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಯಾಗಿ ನವಲಗುಂದ ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಹಾಗೂ ಮುಖ್ಯಮಂತ್ರಿ ಯವರ ಸಂಸದೀಯ ಕಾರ್ಯದರ್ಶಿ(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ)ಯಾಗಿ ಶಾಸಕ ದೇವಾನಾಂದ್ ಪೂಲಸಿಂಗ್ ಚವ್ಹಾಣ್, ಪಶುಸಂಗೋಪನೆ ಮತ್ತು ಮೀನು ಗಾರಿಕೆ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ ಶಾಸಕ ಡಾ.ಕೆ.ಶ್ರೀನಿವಾಸ ಮೂರ್ತಿ, ಸಹಕಾರ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ ಶಾಸಕ ಎಂ.ಶ್ರೀನಿವಾಸ ಹಾಗೂ ಲೋಕೋಪಯೋಗಿ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರನ್ನು ನೇಮಕ ಮಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶಿಸಿದ್ದಾರೆ.