ಕಿಚ್‍ಗುತ್ ಮಾರಮ್ಮ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರಲ್ಲ

ಮೈಸೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇಗುಲ ಮುಜರಾಯಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಮುಜರಾಯಿ ಸಚಿವ ರಾಜಶೇಖರ್ ಪಾಟೀಲ್ ಸ್ವಷ್ಟಪಡಿಸಿದರು.

ವಿಷಮಿಶ್ರಿತ ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥ ಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿರುವವರ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಥ ಪ್ರಕರಣಗಳು ರಾಜ್ಯದಲ್ಲಿ ನಡೆದಿರುವುದು ಇದೇ ಮೊದಲು. ಆದ್ದರಿಂದ ಮುಜರಾಯಿ ಇಲಾಖೆ ವ್ಯಾಪ್ತಿಯ ಅನ್ನಸಂತರ್ಪಣೆ ನಡೆಯುವ ದೇಗುಲಗಳಲ್ಲಿ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ ಕಿಚ್‍ಗುತ್ ದೇವಸ್ಥಾನ ಮುಜುರಾಯಿ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಎಲ್ಲಿಯೂ ಇಂತಹ ದುರಂತಗಳು ನಡೆಯಬಾರದು ಎಂದರು.

ಚಾಮುಂಡಿ ಬೆಟ್ಟದ ನೌಕರರ ಬೇಡಿಕೆಗಳ ಬಗ್ಗೆ ಸಚಿವರ ಗಮನ ಸೆಳೆದಾಗ, ಅವರ ಬೇಡಿಕೆಗಳ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಮುಜರಾಯಿ ಇಲಾಖೆ ಆಯುಕ್ತರಿಗೆ ಈಗಾಗಲೇ ಸೂಚಿಸಿದ್ದೇನೆ. ಈ ವರದಿ ಆಧಾರದ ಮೇಲೆ ಸಾಧಕ-ಬಾಧಕಗಳನ್ನು ಚರ್ಚಿಸಿ, ನಂತರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ವಿಷಯದ ಬಗ್ಗೆ ಡಿ.24ರಂದು ನಾನೇ ಖುದ್ದಾಗಿ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ಅವರ ಬೇಡಿಕೆಗಳಲ್ಲಿ ಯಾವುದು ಸಾಧ್ಯವೋ ಅದನ್ನು ಈಡೇರಿಸುವ ಭರವಸೆ ನೀಡಿದರು.