ಮಡಿಕೇರಿಯಲ್ಲಿ ಬ್ರಿಟೀಷರ ಗೋರಿಗಳ ದುಸ್ಥಿತಿ

ಮಡಿಕೇರಿ.ಫೆ,23-ಕೊಡಗು ಜಿಲ್ಲೆ ಯಲ್ಲೂ ಬ್ರಿಟಿಷರು ಆಳ್ವಿಕೆ ನಡೆಸಿದ್ದ ರೆಂಬುದು ಇತಿಹಾಸವಾಗಿದೆ. ತಮ್ಮದೇ ಆರ್ಮಿಯನ್ನು ಹೊಂದಿದ್ದ ಬ್ರಿಟಿಷರು ಅದರ ಸಹಾಯದಿಂದಲೇ ಜಿಲ್ಲೆಯಲ್ಲಿ ಆಡಳಿತ ನಡೆಸಿದ್ದರು.

ಇಂತಹ ನೂರಾರು ಸೈನಿಕರ ಮತ್ತು ಸೈನ್ಯಾಧಿಕಾರಿಗಳ ಗೋರಿಗಳು ಮಡಿ ಕೇರಿಯ ಕೈಗಾರಿಕಾ ತರಬೇತಿ ಕೇಂದ್ರದ ಹಿಂಭಾಗದ ಪ್ರದೇಶದಲ್ಲಿ ಶಿಥಿಲ ಸ್ಥಿತಿ ಯಲ್ಲಿವೆ. ಕೆಲವು ಗೋರಿಗಳು ಅಮೃತ ಶಿಲೆಗಳಿಂದ ಮಾಡಲ್ಪಟ್ಟಿದ್ದರೆ, ಮತ್ತೆ ಕೆಲವು ಗೋರಿಗಳು ಕಲ್ಲಿನಿಂದ ಪಿರ ಮಿಡ್ ಆಕಾರದಲ್ಲಿ ನಿರ್ಮಿಸಲಾಗಿದೆ. ಬಹುತೇಕ ಗೋರಿಗಳು ಕಿಡಿಗೇಡಿಗಳ ಕಲ್ಲೇಟಿಗೆ ಧ್ವಂಸವಾಗಿದ್ದರೆ ಕೆಲವು ಸಂಪೂರ್ಣ ವಾಗಿ ಮಣ್ಣಿನಡಿ ಹೂತು ಹೋಗಿವೆ.

ಕೆಲವು ಗೋರಿಗಳ ಕಲ್ಲುಗಳು ಕೆಲವು ಮನೆಗಳ ಮುಂದಿನ ಮೆಟ್ಟಲುಗಳಾಗಿವೆ. ಪ್ರತಿ ಗೋರಿಯಲ್ಲೂ ಮಡಿದವರ ಹೆಸರು ಮತ್ತು ಅದನ್ನು ನಿರ್ಮಿಸಿದವರ ಹೆಸರುಗಳನ್ನು ಕೆತ್ತಲಾಗಿದೆ. ಅದೆಷ್ಟೋ ವರ್ಷಗಳಿಂದ ನಿರ್ಲಕ್ಷ್ಯ ಮತ್ತು ಮೂಲೆ ಗುಂಪು ಮಾಡಿರುವ ಹಿನ್ನಲೆಯಲ್ಲಿ ಗೋರಿ ಗಳ ಮೇಲಿನ ಹೆಸರುಗಳು ಮಳೆ, ಗಾಳಿಗೆ ಪಾಚಿಕಟ್ಟಿ ಅಕ್ಷರಗಳು ಅಸ್ಪಷ್ಟವಾಗಿ ಕಾಣುತ್ತವೆ.

ಈ ಪೈಕಿ ಒಂದು ಗೋರಿ ಲೆಫ್ಟಿನೆಂಟ್ ಜನರಲ್ ಒಬ್ಬರ ಪುತ್ರನ ಹೆಸರಲ್ಲಿದ್ದು, ಆತ ಕೇವಲ ತನ್ನ 18ನೇ ವಯಸಲ್ಲೇ ಮೃತನಾಗಿರುವ ಬಗ್ಗೆ ಉಲ್ಲೇಖಿಸ ಲಾಗಿದೆ. ಮತ್ತೊಂದು ಗೋರಿಯಲ್ಲಿ ಒಂದು ಕುಟುಂಬದ 4 ಮಂದಿಯ ಹೆಸರಿದೆ. ಈ ಕುಟುಂಬ ಸಾಮೂಹಿಕವಾಗಿ ಮೃತಪಟ್ಟ ಬಗ್ಗೆ ಗೋರಿ ಯಲ್ಲಿ ಬರೆಯಲಾಗಿಲ್ಲ. ಆದರೆ, ಈ ಗೋರಿಯನ್ನು ನಿರ್ಮಿಸಿದ ವ್ಯಕ್ತಿ ಬೆಂಗ ಳೂರು ಮೂಲದವರೆಂದು ಕೆತ್ತಲಾಗಿದೆ. ಮಾತ್ರ ವಲ್ಲದೇ ಈ ಗೋರಿಗಳು 1805 ರಿಂದ ವಿವಿಧ ಇಸವಿಗಳಲ್ಲಿ ನಿರ್ಮಾಣವಾಗಿವೆ ಎಂಬು ದನ್ನು ವಿವರಿಸುತ್ತವೆ. ಈ ಗೋರಿಗಳಲ್ಲಿ ಮಡಿದವರ ಹೆಸರಿದ್ದರೂ, ಅವರ ಸಾವಿಗೆ ನಿಖರ ಕಾರಣ ಏನು ಎಂಬುದನ್ನು ಎಲ್ಲಿಯೂ ಬರೆಯಲಾಗಿಲ್ಲ. ಹೀಗಾಗಿ ಅವರ ಸಾವಿನ ಹಿಂದಿನ ಕಾರಣಗಳು ಕೂಡ ನಿಗೂಢವಾಗಿದೆ.

ರಾಜಾಸೀಟಿನಿಂದ ಸ್ಥಳಾಂತರ: ಸ್ವಾತಂತ್ರ ಪೂರ್ವದಲ್ಲಿ ಈ ಗೋರಿಗಳು ಇಂದಿನ ರಾಜಾಸೀಟು ಪ್ರದೇಶದಲ್ಲಿತ್ತು ಎಂದು ದಾಖಲೆಗಳು ಹೇಳುತ್ತವೆ. ಅಂದು ರಾಜಾ ಸೀಟು ಮಡಿಕೇರಿ ನಗರದ ಹೊರವಲಯ ವಾಗಿ ಗುರುತಿಸಿಕೊಂಡಿದ್ದರ ಪರಿಣಾಮ ಈ ಗೋರಿಗಳನ್ನು ಅಲ್ಲಿ ಹೂಳಲಾಗಿತ್ತು ಎನ್ನಲಾಗುತ್ತಿದೆ. ಸ್ವಾತಂತ್ರ್ಯ ಬಳಿಕ ಮಡಿ ಕೇರಿ ಅಭಿವೃದ್ಧಿ ಹೊಂದುವ ಸಂದರ್ಭ ನಗರೀಕರಣಕ್ಕೆ ಒಳಗಾಗಿ ರಾಜಾಸೀಟು ಪ್ರದೇಶ ಕೂಡ ನಗರಕ್ಕೆ ಸೇರ್ಪಡೆಗೊಂಡಿತ್ತು. ಈ ಸಂದರ್ಭ ನಗರದ ಒಳಗಿದ್ದ ಈ ಗೋರಿ ಗಳನ್ನು ಕೈಗಾರಿಕಾ ತರಬೇತಿ ಕೇಂದ್ರದ ಹಿಂದಿನ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಈ ಪ್ರದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಸುತ್ತಲೂ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ ಕಾಲ ಕ್ರಮೇಣ ಈ ತಡೆಗೋಡೆ ಕೂಡ ಕುಸಿದು ಬಿದ್ದು, ಕಾಡು ಪಾಲಾಗಿವೆ. ಈ ಪ್ರದೇಶದಲ್ಲಿ 20 ಅಡಿ ಎತ್ತರಕ್ಕೆ ಕಾಡು ಗಿಡಗಳು ಬೆಳೆದು ನಿಂತಿದ್ದು, ಅದೆಷ್ಟೋ ವರ್ಷಗಳಿಂದ ನಿರ್ಲಕ್ಷ್ಯಕ್ಕೆ ತುತ್ತಾಗಿದೆ ಎಂಬುದನ್ನು ಸಾಕ್ಷೀಕರಿಸುತ್ತಿದೆ.

ಈ ಗೋರಿಗಳು ಅತ್ಯಂತ ಸುಂದರ ಕೆತ್ತನೆಗಳನ್ನು ಕೂಡ ಒಳಗೊಂಡಿದೆ. ಮಾತ್ರವಲ್ಲದೆ ಬಹುತೇಕ ಗೋರಿಗಳು ಸೈನಿಕರು ಮತ್ತು ಸೇನಾಧಿಕಾರಿಗಳದ್ದಾಗಿದೆ. ಹಾಗಾದರೇ ಕೊಡಗು ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ ಹೋರಾಟದ ಸಂದರ್ಭ ಈ ಸೈನಿಕರು ಸಾವನಪ್ಪಿದರೆ, ಅಥವಾ ಇನ್ನಾವುದೋ ಕಾರಣಕ್ಕೆ ಜೀವತೆತ್ತರೇ ಎಂಬುದಕ್ಕೆ ದಾಖಲೆ ಮತ್ತು ಉತ್ತರಗಳಿಲ್ಲ. ಹೀಗಾಗಿ ಈ ಗೋರಿಗಳು ಇತಿಹಾಸ ಸಂಶೋಧನಾಕಾರರಿಗೆ ಅಧ್ಯಯನದ ವಿಷಯವಾಗಬಲ್ಲದು. ಕೊಡಗು ಸ್ವಾತಂತ್ರ ಸಂಗ್ರಾಮದಲ್ಲಿ ಈ ಬ್ರಿಟಿಷ್ ಸೈನಿಕರು ಮೃತಪಟ್ಟಿದ್ದೇ ಆಗಿದಲ್ಲಿ ಕೊಡಗು ಜಿಲ್ಲೆಯ ಸ್ವಾತಂತ್ರ ಹೋರಾಟಗಾರರ ಮತ್ತೊಂದು ಚರಿತ್ರೆಯೂ, ವಿರೋಚಿತ ಅಧ್ಯಾಯವೂ ಜಗತ್ತಿಗೆ ತಿಳಿಯಲಿದೆ.

ಪ್ರಸಾದ್ ಸಂಪಿಗೆಕಟ್ಟೆ