ಮಾಜಿ ಸಿಎಂ ಸಿದ್ದರಾಮಯ್ಯ ಪ್ರಕರಣಕ್ಕೆ `ಬಿ’ ರಿಪೋರ್ಟ್ ಸಲ್ಲಿಸಿದ ಪೊಲೀಸರು

ಮೈಸೂರು:  ಭೂ ಪರಿವರ್ತನೆಯಾಗದ ಕೃಷಿ ಭೂಮಿಯಲ್ಲಿ ನಿಯಮಬಾಹಿರವಾಗಿ ಮನೆ ನಿರ್ಮಾಣ ಮಾಡಿರುವ ಆರೋಪ ದಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ `ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್, ಸಿದ್ದರಾಮಯ್ಯ ಅವರ ವಿರುದ್ಧದ ಪ್ರಕರಣದಲ್ಲಿ ಯಾವುದೇ ಸತ್ಯಾಂಶವಿಲ್ಲ, ತಪ್ಪು ಗ್ರಹಿಕೆಯಿಂದ ದೂರು ನೀಡಲಾಗಿದೆ ಎಂಬುದು ತನಿಖೆಯಲ್ಲಿ ತಿಳಿದುಬಂದ ಹಿನ್ನೆಲೆಯಲ್ಲಿ ಈ ಸಂಬಂಧ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ದೂರುದಾರ ಗಂಗರಾಜು, ಪೊಲೀಸರು `ಬಿ’ ರಿಪೋರ್ಟ್ ಸಲ್ಲಿಸಿರುವ ಬಗ್ಗೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುತ್ತೇನೆ. ಪ್ರಕರಣದ ಸಾಕ್ಷಿದಾರರ ಹೇಳಿಕೆ ಪಡೆಯದೆ, ಆಪಾದಿತ ವ್ಯಕ್ತಿಗಳ ಹೇಳಿಕೆಯನ್ನು ಮಾತ್ರ ಪೊಲೀಸರು ಪರಿಗಣಿಸಿದ್ದಾರೆ. ಹೈಕೋರ್ಟ್‍ವರೆಗೂ ಹೋಗಿ ಹೋರಾಟ ನಡೆಸುತ್ತೇನೆ ಎಂದು ಅವರು ಹೇಳಿದ್ದಾರೆ. ವಿಜಯನಗರ 2ನೇ ಹಂತದ ಬಡಾವಣೆ ನಿರ್ಮಾಣಕ್ಕೆ 1981ರಲ್ಲಿ ಸಿಐಟಿಬಿ ವತಿಯಿಂದ ಹಿನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ 535 ಎಕರೆ ಪ್ರದೇಶವನ್ನು ವಶಪಡಿಸಿಕೊಂಡು, ಬಡಾವಣೆ ರಚಿಸಿ, ನಿವೇಶನ ಹಂಚಿಕೆ ಮಾಡಲಾಗಿತ್ತು. ಈ ನಡುವೆ ಹಿನಕಲ್ ಗ್ರಾಪಂ ಅಧ್ಯಕ್ಷರಾಗಿದ್ದ ಪಾಪಣ್ಣ ಅವರ 30 ಗುಂಟೆ ಜಾಗವನ್ನು ಮುಡಾ ಅಧಿಕಾರಿಗಳು ಡಿ ನೋಟಿಫೈ ಮಾಡಿ, ನಿರಾಪೇಕ್ಷಣಾ ಪತ್ರ ನೀಡಿದ್ದರು. ಬಳಿಕ ಕುಟುಂಬದವರು ಹಂಚಿಕೆ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಸಾಕಮ್ಮ ಅವರಿಗೆ ಸೇರಿದ್ದ ಜಮೀನು ಖರೀದಿಸಿ, ಮನೆ ನಿರ್ಮಿಸಿ, ನಂತರ ಮಾರಾಟ ಮಾಡಿದ್ದರು. ಈಗಾಗಲೇ ಬದಲಿ ನಿವೇಶನ ಪಡೆದಿದ್ದ ಸಾಕಮ್ಮ ಅವರ ಪರವಾಗಿ ಕುಟುಂಬ ದವರು, ಕಳೆದ ವರ್ಷ ಮುಡಾಗೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ, ನಿವೇಶನ ನೀಡಲು ಸಭೆಯಲ್ಲಿ ಅನುಮೋದಿಸಲಾಗಿತ್ತು. ಈ ಬಗ್ಗೆ ಗಂಗರಾಜು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಂತರ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಲಕ್ಷ್ಮೀ ಪುರಂ ಪೊಲೀಸ್ ಠಾಣೆಗೆ ನ್ಯಾಯಾಲಯ ನಿರ್ದೇಶನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.