ಆ.19 ಚಾಮುಂಡೇಶ್ವರಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧ

ಉತ್ತನಹಳ್ಳಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನಕ್ಕೆ ಆ.19, 21ರಂದು ನಿರ್ಬಂಧ
ಮೈಸೂರು, ಆ.16(ಎಸ್‍ಬಿಡಿ)- ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಒಂದು ದಿನ ಹಾಗೂ ಉತ್ತನಹಳ್ಳಿ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಾಲಯಕ್ಕೆ ಎರಡು ದಿನ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಮಾವಾಸ್ಯೆ ಹಾಗೂ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಈ ದೇವಾಲಯ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜನಸಂದಣಿ ಆಗದಂತೆ ಕ್ರಮ ವಹಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶಿಸಿದ್ದಾರೆ.

ಚಾಮುಂಡಿಬೆಟ್ಟ: ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚು ಭಕ್ತರು ಆಗ ಮಿಸುವ ನಿರೀಕ್ಷೆ ಇರುವುದರಿಂದ ಆ.19ರಂದು ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ
ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಗ್ರಾಮಸ್ಥರ ವಾಹನ ಹಾಗೂ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ, ಸಾರ್ವಜನಿಕ ಸಾರಿಗೆ ಹಾಗೂ ಯಾವುದೇ ಖಾಸಗಿ ವಾಹನಗಳನ್ನು ಬೆಟ್ಟಕ್ಕೆ ಸಂಚರಿಸುವಂತಿಲ್ಲ. ದೇವಾಲಯ ಅಥವಾ ದಾನಿಗಳ ವತಿಯಿಂದ ಸಾರ್ವಜನಿಕವಾಗಿ ಪ್ರಸಾದ ತಯಾರಿಸುವುದು ಹಾಗೂ ವಿತರಿಸುವುದನ್ನು ನಿಷೇಧಿಸಲಾಗಿದೆ.

ಉತ್ತನಹಳ್ಳಿ: ಅಮಾವಾಸ್ಯೆ ಹಾಗೂ ಗೌರಿ-ಗಣೇಶ ಹಬ್ಬದಂದು ಉತ್ತನಹಳ್ಳಿ ಶ್ರೀ ಜ್ವಾಲಾಮುಖಿ ತ್ರಿಪುರಸುಂದರಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಉತ್ತನಹಳ್ಳಿಯಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಾರ್ವ ಜನಿಕರಿಗೆ ದೇವರ ದರ್ಶನ ನಿರ್ಬಂಧಿಸುವಂತೆ ಆಗಮಿಕರು, ಅರ್ಚಕರು ಹಾಗೂ ಪಾರುಪತ್ತೆದಾರರು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಆ.19(ಬುಧವಾರ) ಹಾಗೂ 21(ಶುಕ್ರವಾರ) ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂ ಧಿಸಲಾಗಿದೆ. ಅಲ್ಲದೆ ಆ ದಿನಗಳಂದು ಪ್ರಸಾದ ತಯಾರಿಸಲು ಹಾಗೂ ವಿತರಿಸಲು ಯಾರಿಗೂ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ದೇವಾಲಯಗಳಲ್ಲಿ ಜರುಗುವ ಧಾರ್ಮಿಕ ಕೈಂಕರ್ಯಗಳನ್ನು ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿ ಉಪಸ್ಥಿತಿಯಲ್ಲಿ ಎಂದಿನಂತೆ ನಡೆಸಲು ಅವಕಾಶವಿದೆ.