ಡಿ ನೋಟಿಫಿಕೇಷನ್ ಪ್ರಕರಣ: ಯಡಿಯೂರಪ್ಪ ವಿರುದ್ಧದ 5 ಪ್ರಕರಣಗಳ ವಜಾಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಬಿಗ್ ರಿಲೀಫ್ ನೀಡಿದೆ.

ಅಕ್ರಮ ಭೂಕಬಳಿಕೆ, ಡಿ ನೋಟಿಫಿಕೇಷನ್ ಸಂಬಂಧಿ ಸಿದ ಐದು ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯ ಇಂದು ವಜಾಗೊಳಿಸಿದೆ. ಬಿಎಸ್‍ವೈ ಹಾಗೂ ಕುಟುಂಬದ ವಿರುದ್ಧ ಸಿರಾಜಿನ್ ಬಾಷಾ ಎಂಬ ವಕೀಲರು ದಾಖಲಿಸಿದ್ದ ಐದು ಪ್ರಕರಣಗಳ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಐದು ಕೇಸ್‍ಗಳನ್ನು ವಜಾಗೊಳಿಸಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಡಿನೋಟಿಫಿಕೇಷನ್ ನಡೆಸಿದ್ದರೆಂದು ವಕೀಲ, ಸಾಮಾಜಿಕ ಕಾರ್ಯಕರ್ತ ಸಿರಾಜಿನ್ ಬಾಷಾ ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಹೈಕೋರ್ಟ್ ಯಡಿಯೂರಪ್ಪ ಅವರನ್ನು ನಿರಪರಾಧಿ ಎಂದಿತ್ತು. ಆದರೆ ಬಾಷಾ ಮತ್ತೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.

ಸುಪ್ರೀಂಕೋರ್ಟ್ ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಕೇಸುಗಳ ಖುಲಾಸೆ ಗೊಳಿಸಿದ್ದು, ಇದಕ್ಕೆ ಬಿಜೆಪಿ ಕರ್ನಾಟಕ ಘಟಕ ಟ್ವೀಟ್ ಮೂಲಕ ಹರ್ಷ ವ್ಯಕ್ತಪಡಿಸಿದೆ. ಸತ್ಯಕ್ಕೆ ಸಾವಿಲ್ಲ-ಸುಳ್ಳಿಗೆ ಉಳಿಗಾಲವಿಲ್ಲ ಎಂಬಂತೆ ಯಡಿಯೂರಪ್ಪ ಹಾಗೂ ಕುಟುಂಬದವರ ವಿರುದ್ಧ ಸಿರಾಜಿನ್ ಬಾಷಾ ಹಾಕಿದ್ದ ಸುಳ್ಳಿನ, ರಾಜಕೀಯ ಷಡ್ಯಂತರದಿಂದ ಕೂಡಿದ ದೂರುಗಳನ್ನು ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿ ಇತಿಶ್ರೀ ಹಾಡಿದೆ. ಯಡಿಯೂರಪ್ಪನವರ ಸತ್ಯದ ಹಾದಿಗೆ ಸಂದ ಜಯ ಇದು ಎಂದು ಟ್ವೀಟ್ ಮಾಡಿ ತನ್ನ ಸಂತಸವನ್ನು ಹಂಚಿಕೊಂಡಿದೆ.