ಮೈಸೂರಲ್ಲೂ ಜನತೆಯ ಅಭೂತಪೂರ್ವ ಸ್ಪಂದನೆ

ಪೆಟ್ರೋಲ್ ಬಂಕ್, ಮೆಡಿಕಲ್ ಸ್ಟೋರ್, ಸರಕು ಸಾಗಣೆ, ಪ್ರಯಾಣಿಕರ ವಾಹನ ಸಂಚಾರ, ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಪಾರ್ಸಲ್, ಹೋಂ ಡೆಲಿವರಿ ಹೊರತುಪಡಿಸಿ ಉಳಿದಂತೆ ಮೈಸೂರು ಸಂಪೂರ್ಣ ಸ್ತಬ್ಧ
ಮೈಸೂರು, ಏ.24(ಆರ್‍ಕೆ)-ಅತ್ಯಂತ ಶರವೇಗದಲ್ಲಿ ಹರಡುತ್ತಿರುವ ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ವಿಧಿಸಿರುವ ವೀಕೆಂಡ್ ಕಫ್ರ್ಯೂಗೆ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಕೊರೊನಾ ಮಹಾಮಾರಿ ಸೋಂಕು ಸರಪಳಿ ತುಂಡರಿಸಲು ರಾಜ್ಯ ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಪಾಲಿಸುವ ಮೂಲಕ ವರ್ತಕರು, ಗ್ರಾಹಕರು ಹಾಗೂ ಸಾರ್ವಜನಿಕರು ವೀಕೆಂಡ್ ಕಫ್ರ್ಯೂಗೆ ಸ್ಪಂದಿಸಿದರು. ಪೆಟ್ರೋಲ್ ಬಂಕ್‍ಗಳು, ಮೆಡಿಕಲ್ ಸ್ಟೋರ್‍ಗಳು, ಕ್ಲಿನಿಕ್, ಆಸ್ಪತ್ರೆಗಳು ಹಾಗೂ ಹೋಟೆಲ್, ರೆಸ್ಟೋರೆಂಟ್, ಬೇಕರಿಗಳಲ್ಲಿ ಪಾರ್ಸಲ್ ಸೇವೆ ಹೊರತು ಪಡಿಸಿ ಉಳಿದೆಲ್ಲಾ ವಾಣಿಜ್ಯ ವಹಿವಾಟು, ಅಂಗಡಿ-ಮುಂಗಟ್ಟು ಸಂಪೂರ್ಣವಾಗಿ ಬಂದ್ ಆಗಿದ್ದವು.

ಎಲ್ಲಾ ಬಗೆಯ ಸರಕು ಸಾಗಣೆ, ಪ್ರಯಾಣಿಕರ ವಾಹನ ಸಂಚಾರ ಎಂದಿನಂತಿತ್ತಾದರೂ, ವಾರಾಂತ್ಯ ಕಫ್ರ್ಯೂ ನಿರ್ಬಂಧಕಾಜ್ಞೆ ಜಾರಿಯಲ್ಲಿದ್ದ ಕಾರಣ ಜನ ಸಂಚಾರ ವಿರಳವಾಗಿತ್ತು. ಇಂದು ಇಡೀ ಮೈಸೂರು ನಗರ ಚಟು ವಟಿಕೆ ಇಲ್ಲದೆ ಬಿಕೋ ಎನ್ನುವ ಪರಿಸ್ಥಿತಿ ಕಂಡು ಬಂದಿತು. ಇಂದಿನ ಕಫ್ರ್ಯೂ ದೃಶ್ಯವು ಕಳೆದ ವರ್ಷದ ಲಾಕ್‍ಡೌನ್ ಸಂದರ್ಭಕ್ಕಿಂತಲೂ ಗಂಭೀರವಾಗಿತ್ತು. ಸದಾ ಜನ ಸಂದಣಿ, ವಾಹನ ದಟ್ಟಣೆಯಿಂದ ಕೂಡಿದ್ದ ಮೈಸೂರಿನ ಹೃದಯ ಭಾಗವಾದ ಕೆ.ಆರ್. ಸರ್ಕಲ್, ಮಕ್ಕಾಜಿ ಚೌಕ, ಓಲ್ಡ್ ಬ್ಯಾಂಕ್ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಚಿಕ್ಕಗಡಿಯಾರ ವೃತ್ತ, ದೊಡ್ಡ ಗಡಿಯಾರ ಸರ್ಕಲ್, ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಸೇರಿದಂತೆ ಮೈಸೂರಿನ ವಿವಿಧ ವಾಣಿಜ್ಯ ರಸ್ತೆ, ಜಂಕ್ಷನ್‍ಗಳಲ್ಲಿ ಅಂಗಡಿ
ಮುಂಗಟ್ಟುಗಳೆಲ್ಲವೂ ಬಂದ್ ಆಗಿದ್ದರಿಂದ ಮೈಸೂರು ನಗರ ದಾದ್ಯಂತ ಎಲ್ಲಾ ರಸ್ತೆ, ಜಂಕ್ಷನ್‍ಗಳು ಜನರಿಲ್ಲದೆ ಭಣಗುಡುತ್ತಿತ್ತು. ಶುಕ್ರವಾರ ರಾತ್ರಿ 9 ಗಂಟೆ ಯಿಂದಲೇ ಜಾರಿಗೆ ಬಂದಿರುವ ವಾರಾಂತ್ಯ ಕಠಿಣ ಕಫ್ರ್ಯೂ ಆದೇಶ ಸೋಮ ವಾರ ಬೆಳಗ್ಗೆ 6 ಗಂಟೆವರೆಗೂ ಜಾರಿಯಲ್ಲಿ ರುವುದರಿಂದ ಕಟ್ಟುನಿಟ್ಟಾಗಿ ಆದೇಶವನ್ನು ಜಾರಿಗೊಳಿಸಲು ಮೈಸೂರು ನಗರ ಸಿವಿಲ್ ಮತ್ತು ಸಂಚಾರ ಠಾಣೆ ಪೊಲೀಸರು ಸಕ್ರಿಯರಾಗಿದ್ದರು.

ಗೊಂದಲ: ರಾಜ್ಯ ಸರ್ಕಾರದ ಆದೇಶ ಜಾರಿಗೊಳಿಸುವ ಬಗ್ಗೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರೇ ಹೊಟೇಲ್, ರೆಸ್ಟೋರೆಂಟ್, ಬೇಕರಿಗಳಲ್ಲಿ ಆಹಾರ, ತಿಂಡಿ-ತಿನಿಸುಗಳನ್ನು ರಾತ್ರಿ 9 ಗಂಟೆವರೆಗೂ ಪಾರ್ಸಲ್ ನೀಡಬಹು ದೆಂದು ಸ್ಪಷ್ಟಪಡಿಸಿದ್ದರಾದರೂ, ಇಂದು ಬೆಳಗ್ಗೆ ಕಾರ್ಯಾ ಚರಣೆ ನಡೆಸಿದ ಪೊಲೀಸರು ಮಾತ್ರ ಇಂದು ಬೆಳಗ್ಗೆ 10 ಗಂಟೆಗೆ ಬಾಗಿಲು ಮುಚ್ಚುವಂತೆ ಹೊಟೇಲ್, ರೆಸ್ಟೋರೆಂಟ್, ಬೇಕರಿ ಮಾಲೀಕರಿಗೆ ಸೂಚನೆ ನೀಡಿದ್ದುದು ಗೊಂದಲ ಮೂಡಿಸಿತ್ತು.

ಹೋಟೆಲ್ ಪಾರ್ಸಲ್‍ಗೆ ಅವಕಾಶ: ಪೊಲೀಸರು ಹೋಟೆಲ್ ಗಳ ಬಂದ್‍ಗೆ ಮುಂದಾದರು. ಈ ವೇಳೆ ಮೈಸೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಹಾಗೂ ಡಿಸಿಪಿ ಡಾ. ಎ.ಎನ್. ಪ್ರಕಾಶ್‍ಗೌಡ ಅವರನ್ನು ಸಂಪರ್ಕಿಸಿ, ಪೊಲೀಸರ ಸೂಚನೆ ಬಗ್ಗೆ ಗಮನ ಸೆಳೆದರು. ಹೊಟೇಲ್, ರೆಸ್ಟೋರೆಂಟ್, ಬೇಕರಿಗಳಲ್ಲಿ ಪಾರ್ಸಲ್ ಸೇವೆ ನೀಡಲು ಅವಕಾಶವಿದೆ. ಯಾರೂ ಆ ಸೇವೆಗೆ ತೊಂದರೆ ಕೊಡಬೇಡಿ ಎಂದು ಡಾ. ಚಂದ್ರಗುಪ್ತ ಅವರು ವಾಕಿ ಟಾಕಿ ಮೂಲಕ ಪೊಲೀಸರಿಗೆ ನಿರ್ದೇಶನ ನೀಡಿದರು.

ಎಲ್ಲವೂ ಬಂದ್: ವಾರಾಂತ್ಯ ಕಫ್ರ್ಯೂನಿಂದಾಗಿ ಮಾರುಕಟ್ಟೆ, ಮಾಲ್, ಸಿನಿಮಾ ಮಂದಿರ, ಸ್ವಿಮ್ಮಿಂಗ್ ಪೂಲ್, ಅಮ್ಯೂಸ್ ಮೆಂಟ್ ಪಾರ್ಕ್, ಬಾರ್, ಎಂಆರ್‍ಪಿ ಲಿಕ್ಕರ್ ಶಾಪ್, ಜಿಮ್ನಾಷಿಯಂ, ಶಾಲಾ ಕಾಲೇಜು, ಅಂಗಡಿ ಮುಂಗಟ್ಟು, ದಿನಸಿ, ತರಕಾರಿ, ಹಣ್ಣು, ಹಾಲಿನ ಜೊತೆ ಸೇರಿದಂತೆ ಎಲ್ಲಾ ಬಗೆಯ ವಾಣಿಜ್ಯ ವಹಿವಾಟು ಮೈಸೂರಲ್ಲಿ ಬಂದ್ ಆಗಿತ್ತು.

ತೆರೆದಿದ್ದವು: ಸರಕು ಸಾಗಾಣೆ ವಾಹನಗಳು ಹಾಗೂ ಆಯ್ದ ಪ್ರಯಾಣಿಕರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ಪೆಟ್ರೋಲ್ ಬಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವಾ ದರೂ, ವಹಿವಾಟು ನಿರೀಕ್ಷಿತ ಪ್ರಮಾಣದಲ್ಲಿ ನಡೆಯಲಿಲ್ಲ. ಮೆಡಿಕಲ್ ಸ್ಟೋರ್, ಕ್ಲಿನಿಕ್, ಡಯಾಗ್ನೋಸ್ಟಿಕ್ ಸೆಂಟರ್, ಲ್ಯಾಬೋರೇಟರಿ, ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳು, ಸಗಟು ಔಷಧಿ ಉಗ್ರಾಣ, ಲಾಜಿಸ್ಟಿಕ್ ಸಂಸ್ಥೆಗಳು ಇಂದು ಕಾರ್ಯ ನಿರ್ವಹಿಸಿದವು. ಹೊಟೇಲ್, ರೆಸ್ಟೋರೆಂಟ್‍ಗಳಲ್ಲಿ ಗ್ರಾಹಕರಿಗೆ ಅಹಾರವನ್ನು ಪಾರ್ಸಲ್ ನೀಡಲಾಯಿತಲ್ಲದೆ, ಹೋಂ ಡೆಲಿವರಿ ವ್ಯವಸ್ಥೆ ಎಂದಿನಂತೆ ನಡೆಯಿತು.

ಬಿಕೋ ಎನ್ನುತ್ತಿತ್ತು: ಎಲ್ಲಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾಗಿದ್ದ ಕಾರಣ ಸದಾ ಜನಜಂಗುಳಿಯಿಂದ ಕಂಗೊಳಿಸುತ್ತಿದ್ದ ಮೈಸೂರಿನ ಬಹುತೇಕ ವಾಣಿಜ್ಯ ರಸ್ತೆ, ಸರ್ಕಲ್‍ಗಳು ಜನರಿಲ್ಲದೆ ಭಣಗುಡುತ್ತಿದ್ದವು.

ಬ್ಯಾರಿಕೇಡ್: ಮೈಸೂರಿನ ಎಲ್ಲಾ ಪ್ರಮುಖ ರಸ್ತೆಯ ಜಂಕ್ಷನ್‍ಗಳಲ್ಲಿ ಪೊಲೀಸರು ಬ್ಯಾರಿಕೇಡ್‍ಗಳನ್ನು ಅಳವಡಿಸಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರನ್ನು ತಡೆದು ಪ್ರಶ್ನಿಸಿ, ತಿಳುವಳಿಕೆ ನೀಡಿ ಕಳುಹಿಸುತ್ತಿದ್ದರು.

ತೊಂದರೆ: ವಾರಾಂತ್ಯ ಕಫ್ರ್ಯೂನಿಂದಾಗಿ ಮದುವೆ, ನಿಶ್ಚಿತಾರ್ಥದಂತಹ ಶುಭ ಸಮಾರಂಭ, ಅಂತ್ಯ ಸಂಸ್ಕಾರಕ್ಕೆ ಅಗತ್ಯ ವಿರುವ ವಸ್ತುಗಳು, ಸೌಲಭ್ಯ ಸಿಗದೆ ನಾಗರಿಕರು ಪರದಾಡಿ ದರಲ್ಲದೆ ಅಗತ್ಯ ವಸ್ತುಗಳಾದ ಹಣ್ಣು, ತರಕಾರಿ, ಹಾಲು, ಪ್ರಾವಿಷನ್ ಸ್ಟೋರ್‍ಗಳಂತಹ ಅಗತ್ಯ ವಸ್ತು ಸೇವೆಯನ್ನು ಬೆಳಗ್ಗೆ 10 ಗಂಟೆಗೆ ಸ್ಥಗಿತಗೊಳಿಸಿದ್ದರಿಂದ ಸಾರ್ವಜನಿಕರು ಪರದಾಡು ವಂತಾಯಿತು. ಪಾರ್ಸಲ್‍ಗೆ ಮಾತ್ರ ಅವಕಾಶ ನೀಡಿದ್ದರಿಂದ ಶೇ. 50 ರಷ್ಟು ಹೊಟೇಲ್‍ಗಳನ್ನು ಮಾಲೀಕರು ತೆರೆಯಲೇ ಇಲ್ಲ. ಹಾಗಾಗಿ ಹೊಟೇಲ್ ತಿಂಡಿ, ಊಟವನ್ನೇ ನಂಬಿಕೊಂಡಿದ್ದ ಗ್ರಾಹಕರಿಗೆ ಇಂದು ತೀವ್ರ ತೊಂದರೆ ಉಂಟಾಯಿತು.