ಚಾಮುಂಡಿಬೆಟ್ಟದ ದೇವಿಕೆರೆ ಪುನರ್‍ಜೀವನಗೊಳಿಸುವ ಕಾರ್ಯ ಆರಂಭ

ಮೈಸೂರು, ಜ.9- ಚಾಮುಂಡಿಬೆಟ್ಟದಲ್ಲಿ ಧಾರ್ಮಿಕ ಸನ್ನಿಧಿಯ ಮಹತ್ವದ ಕುರುಹಾಗಿರುವ ದೇವಿಕೆರೆಗೆ ಹೊಸ ರೂಪ ನೀಡಲು 7.5 ಕೋಟಿ ರೂ. ವೆಚ್ಚದಲ್ಲಿ ಸಣ್ಣ ನೀರಾ ವರಿ ಇಲಾಖೆ ಅಭಿವೃದ್ಧಿ ಕಾರ್ಯ ಆರಂಭಿಸಿದೆ.

ನವರಾತ್ರಿ ಬಳಿಕ ನಡೆಯುವ ತೆಪ್ಪೋತ್ಸವ ಸೇರಿದಂತೆ ಹಲವು ಸಂದರ್ಭಗಳಲ್ಲಿ ಚಾಮುಂಡೇಶ್ವರಿ ದೇವಿಯ ಪೂಜಾ ಕಾರ್ಯದಲ್ಲಿ ದೇವಿಕೆರೆಗೆ ಮಹತ್ವದ ಸ್ಥಾನವಿದೆ. ದೇವಿಕೆರೆಯಲ್ಲಿನ ನೀರನ್ನು ಬೆಟ್ಟದ ದೇವಾಲಯಕ್ಕೆ ತಂದು ಪೂಜಾಕಾರ್ಯದಲ್ಲಿ ಬಳಸುವ ಸಂಪ್ರದಾಯವಿದ್ದು, ಕೆಲ ವರ್ಷಗಳಿಂದ ಚಾಮುಂಡಿಬೆಟ್ಟದ ವಿವಿಧ ಬೀದಿಗಳಿಂದ ಕೊಳಚೆ ನೀರು ಇಳಿಜಾರಿನ ಪ್ರದೇಶದಲ್ಲಿ ಹರಿದು ದೇವಿಕೆರೆ ಸೇರುತ್ತಿತ್ತು ಎನ್ನಲಾಗಿದೆ. ಜೊತೆಗೆ ಕಳೆದ 6-7 ದಶಕದಿಂದ ದೇವಿಕೆರೆಯಲ್ಲಿ ತುಂಬಿಕೊಂಡಿದ್ದ ಹೂಳು ಹಾಗೂ ಕೊಳಚೆ ನೀರಿನಿಂದ ಕೆರೆಯ ತಳ ಸೇರಿದ್ದ ಪರಿಸರಕ್ಕೆ ಮಾರಕವಾದ ತ್ಯಾಜ್ಯವನ್ನು ಇದೀಗ ಹೂಳಿನೊಂದಿಗೆ ಮೇಲೆತ್ತಲಾಗುತ್ತಿದೆ. ಅಲ್ಲದೆ, ಕೆರೆಯ ಹಲವು ಭಾಗದÀಲ್ಲಿ ಕುಸಿದಿದ್ದ ಮೆಟ್ಟಿಲು ಗಳನ್ನು ಕರಾರುವಕ್ಕಾಗಿ ಜೋಡಣೆ
ಮಾಡಿ ಅಂದಗೊಳಿಸುವ ಕಾರ್ಯಯೋಜನೆ ರೂಪಿಸಲಾಗಿದೆ. ಅದರಂತೆ ಇದೀಗ ಹೂಳೆತ್ತುವ ಕಾಮಗಾರಿ ಭರದಿಂದ ಸಾಗಿದೆ.

ತುಂಬಿ ತುಳುಕಿದ್ದ ದೇವಿಕೆರೆ: ಮೈಸೂರು ಭಾಗದಲ್ಲಿ ಕಳೆದ 3-4 ವರ್ಷದಿಂದ ಉತ್ತಮ ಮಳೆಯಾಗಿದ್ದರಿಂದ ಚಾಮುಂಡಿ ಬೆಟ್ಟದ ದೇವಿಕೆರೆ ತುಂಬಿ ಕೋಡಿ ಬಿದ್ದಿತ್ತು. ಹಾಗಾಗಿ ದೇವಿಕೆರೆ ಉತ್ತನಹಳ್ಳಿ ರಸ್ತೆಯ ಕಡೆಯಿರುವ ಮತ್ತೊಂದು ಕೆರೆಗೂ ನೀರುಣಿ ಸಿತ್ತು. ಅಲ್ಲದೆ, ಕೆರೆಯಿಂದ ಹೊರ ಹರಿವು ಹೆಚ್ಚಾಗಿದ್ದರಿಂದ ಬೆಟ್ಟದಲ್ಲಿ ಹಲವು ಕಡೆ ಜಲಪಾತಗಳು ಸೃಷ್ಟಿಯಾಗಿದ್ದವು. ದಸರಾ ಬಳಿಕ ಚಾಮುಂಡಿಬೆಟ್ಟದಲ್ಲಿ ನಡೆಯುವ ರಥೋತ್ಸವವೂ ತುಂಬಿದ್ದ ದೇವಿಕೆರೆಯಲ್ಲಿ ವಿಜೃಂಭಣೆಯಿಂದ ನೆರವೇರಿತ್ತು.

ಪಂಪ್ ಮೂಲಕ ನೀರು ತೆರವು: ದೇವಿಕೆರೆಯ ಅಭಿವೃದ್ಧಿ ಕಾಮಗಾರಿಗಾಗಿ ಕೆರೆಯಲ್ಲಿದ್ದ ಅಪಾರ ಪ್ರಮಾಣದ ನೀರನ್ನು ಮೋಟಾರ್ ಬಳಸಿ ಪಂಪ್ ಮಾಡಲಾಗಿದೆ. ದೇವಿಕೆರೆ ಕೋಡಿ ಬೀಳುವ ಸ್ಥಳಕ್ಕೆ ನೀರನ್ನು ಪಂಪ್ ಮಾಡಲಾಗಿದ್ದು, ಆ ನೀರಿನಿಂದ ಉತ್ತನಹಳ್ಳಿ ರಸ್ತೆ ಭಾಗದಲ್ಲಿರುವ ಮತ್ತೊಂದು ಕೆರೆಯನ್ನು ತುಂಬಿಸ ಲಾಗಿದೆ. ದೇವಿಕೆರೆಯಲ್ಲಿದ್ದ ನೀರನ್ನು ಪೂರ್ಣ ಪ್ರಮಾಣದಲ್ಲಿ ಖಾಲಿ ಮಾಡಿದ ನಂತರವಷ್ಟೇ ಹೂಳೆತ್ತುವ ಕಾಮಗಾರಿ ಆರಂಭಿಸಲಾಗಿದೆ.
ಹೂಳೆತ್ತುವ ಕಾರ್ಯ ಅಂತಿಮ ಹಂತಕ್ಕೆ: ಕಳೆದ ಎರಡು ತಿಂಗ ಳಿಂದ ದೇವಿಕೆರೆ ಅಭಿವೃದ್ಧಿ ಕಾರ್ಯ ಆರಂಭಿಸಲಾಗಿದೆ. ಜೆಸಿಬಿ ಗಳ ಮೂಲಕ ಕೆರೆಯಲ್ಲಿ ತುಂಬಿದ್ದ ಹೂಳನ್ನು ಮೇಲೆತ್ತ ಲಾಗುತ್ತದೆ. ಹೂಳೆತ್ತುವ ಕಾಮಗಾರಿ ಅಂತಿಮ ಹಂತ ತಲುಪಿದೆ. ಮಾರ್ಚ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಂಡು, ಕೆರೆಗೆ ಒಂದು ಹೊಸ ರೂಪ ಬರಲಿದೆ.

ಮೆಟ್ಟಿಲುಗಳ ಪುನರ್ ಜೋಡಣೆ: ದೇವಿಕೆರೆಯ ಸುತ್ತಲೂ ಅಳವಡಿಸಿದ್ದ ಚಪ್ಪಡಿ ಕಲ್ಲಿನ ಮೆಟ್ಟಿಲುಗಳು ಹಲವೆಡೆ ಕುಸಿದಿ ದ್ದವು. ಕೆಲವೆಡೆ ಚಪ್ಪಡಿ ಕಲ್ಲು ಹಾಗೂ ದಿಂಡುಗಲ್ಲುಗಳು ಕೆರೆಗೆ ಜಾರಿಕೊಂಡಿದ್ದವು. ಅವುಗಳನ್ನು ನೀಟಾಗಿ ಜೋಡಿಸಿ, ಅಂದಗೊಳಿಸುವ ಮೂಲಕ ದೇವಿಕೆರೆಯನ್ನು ಸುಂದರ ತಾಣವಾಗಿಸುವ ಯೋಜನೆ ರೂಪಿಸಲಾಗಿದೆ.

ಮಳೆ, ಒಳಚರಂಡಿ ನೀರಿಗಾಗಿ ಪ್ರತ್ಯೇಕ ಚರಂಡಿ: ಕಳೆದ ಕೆಲ ದಶಕಗಳಿಂದ ದೇವಿಕೆರೆಗೆ ಚಾಮುಂಡಿಬೆಟ್ಟದ ಕೆಲ ಬೀದಿಗಳಿಂದ ಹರಿದು ಬರುತ್ತಿದ್ದ ಚರಂಡಿ ನೀರನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ಶಾಶ್ವತವಾಗಿ ದೇವಿಕೆರೆಯ ಪಾವಿತ್ರ್ಯತೆಯನ್ನು ಕಾಪಾಡಲು ಪ್ರತ್ಯೇಕ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಇನ್ನು ಮುಂದೆ ಚರಂಡಿ ನೀರು ಕೆರೆಗೆ ಹರಿದು ಹೋಗುವುದಕ್ಕೆ ತಡೆಯೊಡ್ಡಲಾಗಿದೆ.

ಪರಿಸರವಾದಿಗಳ ಆಕ್ಷೇಪ: ದೇವಿಕೆರೆಗೆ ಜೆಸಿಬಿ ಯಂತ್ರಗಳನ್ನು ಇಳಿಸಿ ಕಾಮಗಾರಿ ನಡೆಸುತ್ತಿರುವುದಕ್ಕೆ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಜ್ಞರ ಸಲಹೆ ಪಡೆಯದೇ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಯಂತ್ರಗಳ ಬಳಕೆಯಿಂದ ಕೆರೆಯಲ್ಲಿನ ನೀರಿನ ಕಣ್ಣು(ಬುಗ್ಗೆ)ಗಳಿಗೆ ಹಾನಿಯುಂಟಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಕೆರೆಯಲ್ಲಿ ನೀರು ಸಂಗ್ರಹವಾಗದೇ ಬತ್ತಿ ಹೋಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದು, ಕೆರೆಯಿಂದ ನೀರು ಹೊರ ಹಾಕಿರುವುದು ಅವೈಜ್ಞಾನಿಕ ನಿರ್ಧಾರ. ಕೆರೆ ಬತ್ತಿದ ಸಂದರ್ಭದಲ್ಲಿ ಹೂಳೆತ್ತಬಹುದಾಗಿತ್ತು. ಅದನ್ನು ಹೊರತುಪಡಿಸಿ, ತುಂಬಿದ್ದ ಕೆರೆಯಿಂದ ನೀರನ್ನು ಹೊರ ಹಾಕಿರುವುದು ಖಂಡನೀಯ. ಕೆರೆ ತಳಭಾಗವನ್ನು ಸಮತಟ್ಟಾಗಿ ಮಾಡುವುದರಿಂದ ಜಲಚರಗಳ ಅಸ್ತಿತ್ವಕ್ಕೆ ಹಾನಿಯಾಗಬಹುದು. ಯಾವುದೇ ಕೆರೆಗಳು ಜಲಚರಗಳಿಂದ ಜೀವಂತವಾಗಿ ನಳನಳಿಸ ಬೇಕಾದರೆ ಕೆರೆಯ ತಳಭಾಗ ಏರುಪೇರುಗಳಿಂದ ಕೂಡಿರಬೇಕು. ಆದರೆ ದೇವಿಕೆರೆಯ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಕ್ರಮಬದ್ಧತೆ ಅನುಸರಿಸುತ್ತಿಲ್ಲ ಎಂದು ದೂರಿದ್ದಾರೆ.

ಸುಂದರ ನೀಲನಕ್ಷೆ: ದೇವಿಕೆರೆಯ ಅಭಿವೃದ್ಧಿ ಯಾವ ರೀತಿ ನಡೆಯಬೇಕೆಂದು ರೂಪಿಸಿರುವ ನೀಲನಕ್ಷೆ ಸುಂದರವಾಗಿದೆ. ಕೆರೆ ಹೂಳೆತ್ತಿದ ಬಳಿಕ, ಕೆರೆ ಸುತ್ತಲೂ ಮೆಟ್ಟಿಲುಗಳನ್ನು ನಿರ್ಮಿಸ ಲಾಗುತ್ತದೆ. ಅಲ್ಲದೆ, ಕೆರೆಗೆ ತಡೆಗೋಡೆ ನಿರ್ಮಾಣ, ಕೆರೆ ಆವ ರಣದಲ್ಲಿ ಸುತ್ತಲೂ ಅಲಂಕಾರಿಕ ವಿದ್ಯುತ್ ದೀಪ ಅಳವಡಿಸಲು ನಿರ್ಧರಿಸಲಾಗಿದ್ದು, ಅದನ್ನು ನೀಲನಕ್ಷೆಯಲ್ಲೇ ಸೂಚಿಸಲಾಗಿದೆ.