ಕೃಷಿ ಹೊಂಡಕ್ಕೆ ಬಿದ್ದು ಕಾರ್ಮಿಕರ ಮೂವರು ಮಕ್ಕಳು ಸಾವು

ಬನ್ನೂರು, ಸೆ.22-ಬಳ್ಳಾರಿಯಿಂದ ಕಬ್ಬು ಕಡಿಯಲು ಬಂದಿದ್ದ ಕಾರ್ಮಿಕ ಕುಟುಂಬಗಳ ಮೂವರು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಬನ್ನೂರು ಸಮೀಪದ ಅಂಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಬಳ್ಳಾರಿಯ ಹೊಸಕೋಟೆ ತಾಲೂಕಿನವರಾದ ರವಿಕುಮಾರ್ ಅವರ ಎರಡೂವರೆ ವರ್ಷದ ಪುತ್ರ ರೋಹಿತ್, ರಾಮನಾಯಕ ಎಂಬುವರ 3 ವರ್ಷದ ಮಗ ಸಂಜಯ್‍ಕುಮಾರ್ ಮತ್ತು ಕೃಷ್ಣಾ ನಾಯಕ ಎಂಬುವರ 2 ವರ್ಷದ ಮಗಳು ಕಾವೇರಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟ ಕಂದಮ್ಮಗಳು. ಬಳ್ಳಾರಿ ಜಿಲ್ಲೆಯಿಂದ ಕಬ್ಬು ಕಡಿಯುವ ಕೆಲಸಕ್ಕಾಗಿ ತಿ.ನರಸೀಪುರ ತಾಲೂಕಿಗೆ 4 ತಂಡಗಳು ಆಗಮಿಸಿವೆ. ಈ ಕಾರ್ಮಿಕರು ತಾವು ಕಬ್ಬು ಕಡಿಯುವ ಜಮೀನಿನ ಬಳಿಯೇ ಟೆಂಟ್ ನಿರ್ಮಿಸಿಕೊಂಡು ವಾಸಿಸುತ್ತಾರೆ. ಪ್ರತಿಯೊಂದು ತಂಡಕ್ಕೂ ಸೂಪರ್‍ವೈಸರ್ ಇದ್ದು, ರಸ್ತೆ ಬದಿ ಆತ ಸೂಚಿಸಿದ ಸ್ಥಳದಲ್ಲಿ ಟೆಂಟ್ ನಿರ್ಮಿಸಿ ಕೊಂಡು ವಾಸಿಸುವ ಈ ಕಾರ್ಮಿಕರು, ಸೂಪರ್‍ವೈಸರ್ ಹೇಳಿದ ಗದ್ದೆಗಳಿಗೆ ತೆರಳಿ ಕಬ್ಬು ಕಡಿಯುವುದು ವಾಡಿಕೆ. ಇವುಗಳಲ್ಲಿ ಒಂದು ತಂಡ ಅಂಕನಹಳ್ಳಿ ಗ್ರಾಮದ ಪಟೇಲ್ ವೆಂಕಟೇಶ್ ಎಂಬುವರ ಗದ್ದೆಗೆ ಹೊಂದಿಕೊಂಡಂತೆ ಟೆಂಟ್ ಹಾಕಿಕೊಂಡು ವಾಸಿಸುತ್ತಿತ್ತು. ಈ ತಂಡದ ಒಬ್ಬರ ಹುಟ್ಟುಹಬ್ಬದ ಕಾರಣದಿಂದ ಇಂದು ಕಬ್ಬು ಕಡಿಯುವ ಕೆಲಸಕ್ಕೆ ರಜೆ ತೆಗೆದುಕೊಂಡಿದ್ದರು. ಮೃತ ಮಕ್ಕಳ ಪೋಷಕರು ಟೆಂಟ್‍ನಲ್ಲಿ ಮಕ್ಕಳನ್ನು ಬಿಟ್ಟು ಕೆಲವು ಪದಾರ್ಥಗಳನ್ನು ಖರೀದಿಸಲು ಅಂಗಡಿ ಬೀದಿಗೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಮಕ್ಕಳು ಟೆಂಟ್‍ನಲ್ಲಿ ಇರಲಿಲ್ಲ. ಅವರನ್ನು ಹುಡುಕಿಕೊಂಡು ಹೋದಾಗ ಟೆಂಟ್‍ಗೆ ಹೊಂದಿಕೊಂಡಂತಿರುವ ಪಟೇಲ್ ವೆಂಕಟೇಶ್ ಅವರ ಜಮೀನಿನ ಕೃಷಿ ಹೊಂಡದಲ್ಲಿ ಮೂವರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಹೊಂಡದಲ್ಲಿ ಜಾಸ್ತಿ ನೀರೇನೂ ಇರಲಿಲ್ಲ. ಆದರೆ ಕೆಸರು ಇದ್ದು, ಅದರಲ್ಲೂ ಹೊಂಡಕ್ಕೆ ಬಿದ್ದದ್ದು ಪುಟ್ಟ ಮಕ್ಕಳಾದ್ದರಿಂದ ಮುಳುಗಿ ಸಾವನ್ನಪ್ಪಿವೆ. ನಮ್ಮ ಜಮೀನಿನಲ್ಲಿ ಇಂತಹ ಘಟನೆ ನಡೆದಿರುವುದು ಮನಸ್ಸಿಗೆ ತುಂಬಾ ನೋವ ನ್ನುಂಟು ಮಾಡಿದೆ ಎಂದು ಪಟೇಲ್ ವೆಂಕಟೇಶ್ ತಮ್ಮ ಅಳಲು ತೋಡಿಕೊಂಡರು.

ಪುಟ್ಟ ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವುದನ್ನು ಕಂಡು ಗ್ರಾಮಸ್ಥರು ಮರುಗಿದರು. ಮಕ್ಕಳ ಪೋಷಕರು ಮಾತ್ರವಲ್ಲದೆ ಬಳ್ಳಾರಿಯಿಂದ ಕಬ್ಬು ಕಡಿಯಲು ಬಂದಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಕಾವೇರಿಯ ತಂದೆ ಕೃಷ್ಣಾನಾಯಕ ನೀಡಿದ ದೂರನ್ನು ದಾಖಲಿಸಿಕೊಂಡು ಬನ್ನೂರು ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಅಡಿಷನಲ್ ಎಸ್ಪಿ ಶಿವಕುಮಾರ್, ನಂಜನಗೂಡು ಡಿವೈಎಸ್‍ಪಿ ಪ್ರಭಾಕರ ರಾವ್ ಶಿಂಧೆ, ಬನ್ನೂರು ಸಬ್ ಇನ್ಸ್‍ಪೆಕ್ಟರ್ ಪುನೀತ್ ಭೇಟಿ ನೀಡಿದ್ದರು.