ಕೋಮುವಾದದ ಕನ್ನಡಕ ಕಳಚಿಟ್ಟರೆ ಟಿಪ್ಪು ನೈಜ ವ್ಯಕ್ತಿತ್ವ ಕಾಣಬಹುದು

ಬೆಂಗಳೂರು: ‘ಟಿಪ್ಪು ವಿರೋಧಿಗಳಿಗೆ ನಿಜವಾದ ಟಿಪ್ಪು ಸುಲ್ತಾನ್ ಕಾಣಬೇಕಾದರೆ ಕೋಮುವಾದದ ಕನ್ನಡಕ ಕಳಚಿಟ್ಟು ನೋಡಬೇಕಾಗುತ್ತದೆ ಎಂದು ಬಿಜೆಪಿ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.

ಟಿಪ್ಪು ಸುಲ್ತಾನ್‍ನ ಅಪ್ರತಿಮ ಸೇವೆಯನ್ನು ಕೊಂಡಾಡಿ ರುವ ಅವರು ಟ್ವೀಟ್ ಮೂಲಕ ಮತ್ತು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಯಂತಿ ವಿರೋಧಿ ಸುತ್ತಿರುವ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ದಲ್ಲಿ ಅವರು ಪ್ರಕಟಿಸಿದ ಪುಸ್ತಕವನ್ನು ಬಿಜೆಪಿ ನಾಯಕರು
ಓದಿದರೆ ತಿಳಿಯುತ್ತದೆ. ಅಷ್ಟೇ ಏಕೆ ಶೆಟ್ಟರ್ ಪತ್ರ ಬರೆದು ಟಿಪ್ಪುವನ್ನು ಹೊಗಳಿ ಅವರ ಸಾಧನೆಯನ್ನು ರಾಜ್ಯದ ಜನತೆ ಮುಂದಿಟ್ಟಿದ್ದಾರೆ. ‘ಟಿಪ್ಪು ಯುದ್ಧದ ವೇಳೆ ಜನರನ್ನು ಸಾಯಿಸಿದ್ದ, ಲೂಟಿ ಮಾಡಿದ್ದ ಎನ್ನುವುದು ವಿರೋಧಿಗಳ ಆರೋಪ. ಟಿಪ್ಪು ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿ ಇರಲಿಲ್ಲ. ಟಿಪ್ಪು ಪ್ರಜಾತಾಂತ್ರಿಕವಾಗಿ ಆಯ್ಕೆಯಾದವನಲ್ಲ. ಆತ ಒಬ್ಬ ರಾಜ. ಆ ಕಾಲದಲ್ಲಿ ಯುದ್ಧ ಧರ್ಮಕ್ಕೆ ತಕ್ಕಂತೆ ನಡೆದುಕೊಂಡಿದ್ದ ಎಂದು ಸಮರ್ಥಿಸಿಕೊಂಡಿದ್ದಾರೆ.

‘ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಒಂದು ಸಂಸ್ಥಾನದ ರಾಜ ಎನ್ನುವ ವಾದ ಹುಟ್ಟಿಕೊಂಡಿದೆ. ಇಂತಹ ಮೊಂಡುವಾದ ಮಾಡುವವರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಸಿಂಧೂರ ಲಕ್ಷ್ಮಣ, ರಾಣಿ ಅಬ್ಬಕ್ಕ ದೇವಿ ಸೇರಿದಂತೆ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದವರನ್ನು ಯಾವ ಗುಂಪಿಗೆ ಸೇರಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

‘ರಾಜ್ಯ ಸರ್ಕಾರ ಆಚರಿಸುತ್ತಿರುವುದು ಯಾವುದೇ ಒಂದು ಧರ್ಮಕ್ಕೆ ಸೇರಿದ ನಾಯಕನ ಜಯಂತಿಯಲ್ಲ. ಒಬ್ಬ ದೇಶಪ್ರೇಮಿ, ಜಾತ್ಯತೀತ ಮತ್ತು ಜನಪರ ಅರಸನಾಗಿದ್ದ ಟಿಪ್ಪುವಿನ ಜಯಂತಿ ಆಚರಿಸುತ್ತಿದ್ದೇವೆ. ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು, ಟಿಪ್ಪುವಿಗೆ ಮಾತ್ರವಲ್ಲ, ಈ ನಾಡಿಗೆ ಬಗೆದ ದ್ರೋಹ. ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರು ಗೋಮುಖ ವ್ಯಾಘ್ರಗಳು ಎಂದು ಹರಿಹಾಯ್ದಿದ್ದಾರೆ.

ಟಿಪ್ಪು ರಾಜ. ಎಲ್ಲ ರಾಜರಂತೆ ಆತ ತನ್ನ ನೆಲದ ಹಿತಕ್ಕಾಗಿ ದುಡಿದಿದ್ದಾನೆ. ಅಷ್ಟನ್ನು ಮಾತ್ರ ಗಮನಿಸದೆ ಆತನನ್ನು ಹಿಂದೂ ವಿರೋಧಿ ಎಂದು ಬಣ್ಣಿಸುತ್ತಿರುವ ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಬಿಜೆಪಿಯವರಿಗೆ ವಿಷಯವಿಲ್ಲ. ಸುಮ್ಮನೇ ಮಾತನಾಡುತ್ತಾರೆ. ಇದೇ ಯಡಿಯೂರಪ್ಪ, ಅಶೋಕ, ಜಗದೀಶ ಶೆಟ್ಟರ್ ಈ ಹಿಂದೆ ಟಿಪ್ಪುರನ್ನು ಹಾಡಿ ಹೊಗಳಿದ್ದರು. ಈಗೇಕೇ ವಿರೋಧ ಮಾಡುತ್ತಿದ್ದಾರೆ? ಬಿಜೆಪಿಗರ ಮಾತನ್ನ ಜನ ಒಪ್ಪಲ್ಲ. ಟಿಪ್ಪು ಸುಲ್ತಾನ್ ಮತಾಂಧನಾಗಿರಲಿಲ್ಲ. ಟಿಪ್ಪು ಎಲ್ಲಾ ಸಮುದಾಯದ ಪರ ಇದ್ದರು. ಸಿಎಂ ಆರೋಗ್ಯದ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಬರ್ತಿಲ್ಲ ಅನ್ನೋದನ್ನ ಕೇಳಿದ್ದೇನೆ ಎಂದರು.

ಸಿದ್ದರಾಮಯ್ಯನವರಿಗೆ ಸನ್ಮಾನ ಮಾಡಿದ ನಂತರ ಇದೇ ಸಂದರ್ಭದಲ್ಲಿ ಮಾತನಾಡಿದ ಜಮೀರ್ ಅಹಮದ್‍ಖಾನ್, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಟಿಪ್ಪು ಕಾರ್ಯಕ್ರಮದಿಂದ ದೂರ ಉಳಿಯುತ್ತಿರುವುದಕ್ಕೆ ರಾಜಕೀಯ ಬಣ್ಣ ಕಟ್ಟುವುದು ಬೇಡ. ಮುಖ್ಯಮಂತ್ರಿಯವರಿಗೆ ಆರೋಗ್ಯ ಸರಿಯಿಲ್ಲ. ಅದೇ ಕಾರಣಕ್ಕೆ ಅವರು ಹಾಜರಾಗುತ್ತಿಲ್ಲ. ಇದನ್ನ ಅವರು ಈಗಾಗಲೇ ಹೇಳಿದ್ದಾರೆ ಎಂದರು.