ಅಕ್ರಮ ಬಿಪಿಎಲ್ ಕಾರ್ಡ್ ಹಿಂತಿರುಗಿಸಲು 15 ದಿನದ ಕಡೇ ಅವಕಾಶ

ಬೆಂಗಳೂರು,ಫೆ.14-ಆರ್ಥಿಕವಾಗಿ ಸ್ಥಿತಿವಂತರಾದವರು ಅನಧಿಕೃತವಾಗಿ ಪಡೆದುಕೊಂಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸ್ವಯಂಪ್ರೇರಣೆಯಿಂದ ಇಲಾಖೆಗೆ ಹಿಂದಿರು ಗಿಸಲು ಮತ್ತೊಮ್ಮೆ 15 ದಿನಗಳ ಕಾಲಾವಕಾಶ ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬ ಗಳಿಗೆ ನೀಡುವ ಬಿಪಿಎಲ್ ಪಡಿತರ ಚೀಟಿಯನ್ನು ಆರ್ಥಿಕವಾಗಿ ಸದೃಢ ವಾಗಿರುವ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿರುವು ದನ್ನು ಸರ್ಕಾರ ಗಂಭೀರವಾಗಿ ಪರಿಗಣಿ ಸಿದೆ. ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದ್ದು, ಈಗಾಗಲೇ ಹಲವು ಬಾರಿ ಪಡಿತರ ಕಾರ್ಡ್‍ಗಳನ್ನು ಹಿಂದಿರುಗಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೂ ಶೇ.55ರಿಂದ 60ರಷ್ಟು ಮಂದಿ ಮಾತ್ರ ಕಾರ್ಡ್ ವಾಪಸ್ ನೀಡಿದ್ದು, ಉಳಿದವರಿಗೆ ಮತ್ತೊಂದು ಕಡೇ ಅವಕಾಶ ನೀಡಲು ಇಲಾಖೆ ತೀರ್ಮಾನಿಸಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅಧ್ಯಕ್ಷತೆಯಲ್ಲಿ ನಡೆದ ಆಹಾರ ಇಲಾಖೆ ಅಧಿಕಾರಿ ಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡು ಪಡೆದವರು 15 ದಿನ ಗಳೊಳಗೆ ಅದನ್ನು ಹಿಂದಿರುಗಿಸುವಂತೆ ಸೂಚಿಸಬೇಕು. ನಿಗದಿತ ಸಮಯದಲ್ಲಿ ಕಾರ್ಡುಗಳನ್ನು ವಾಪಸ್ ಕೊಡದಿ ರುವವರನ್ನು ಆಧಾರ್ ದೃಢೀಕರಣದ ಮೂಲಕ ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಲ್ಲ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಸರ್ಕಾರಿ, ಅರೆ ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರು, ಟ್ರಾಕ್ಟರ್ ಇನ್ನಿತರೆ ವಾಹನ ಹೊಂದಿದವರು ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಲ್ಲ. ಅವರ ಬಳಿ ಇರುವ ಕಾರ್ಡ್ ವಾಪಸ್ ನೀಡದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.