ಉನ್ನತ ಶಿಕ್ಷಣದ ಪ್ರಗತಿಗೆ ತಂತ್ರಜ್ಞಾನದ ಸಮರ್ಪಕ ಬಳಕೆ ಅಗತ್ಯ

ಆನ್‍ಲೈನ್ ಬೋಧನೆ ಕುರಿತ ವೆಬಿನಾರ್ ಕಾರ್ಯಾಗಾರ ಉದ್ಘಾಟಿಸಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅಭಿಮತ
ಮೈಸೂರು,ಜೂ.16(ಪಿಎಂ)- ಅಭಿವೃದ್ಧಿ ಹೊಂದಿರುವ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಮಾತ್ರವೇ ಉನ್ನತ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಪ್ರಸ್ತುತದಲ್ಲಂತೂ ಆನ್‍ಲೈನ್ ಕಲಿಕೆ-ಬೋಧನೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅಭಿಪ್ರಾಯಪಟ್ಟರು.

ಮೈಸೂರು ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ‘ಐಕ್ಯೂಎಸಿ’ ಆಶ್ರಯದಲ್ಲಿ ಏರ್ಪಡಿಸಿದ್ದ ‘ಆನ್‍ಲೈನ್ ಬೋಧನೆಯಲ್ಲಿ ಉತ್ತಮ ಅಭ್ಯಾಸಗಳು’ ಕುರಿತ ಒಂದು ದಿನದ ವೆಬಿನಾರ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. `ಆನ್‍ಲೈನ್’ ಇಂದು ಎಲ್ಲಾ ಕ್ಷೇತ್ರಗಳನ್ನು ವ್ಯಾಪಿಸಿದ್ದು, ಆನ್‍ಲೈನ್ ಶಿಕ್ಷಣದಲ್ಲಿ ಅಧ್ಯಾಪಕರಿಗೆ ಬಹಳಷ್ಟು ಸವಾಲುಗಳಿವೆ. ಇದು ಕೊಠಡಿಯಲ್ಲಿ ಬೋಧಿಸುವುದಕ್ಕಿಂತ ಭಿನ್ನ. ಇದಕ್ಕೆ ವಿಶೇಷ ಕೌಶಲ್ಯ ಕರಗತ ಮಾಡಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳೂ ಆನ್‍ಲೈನ್ ಕಲಿಕೆಯಲ್ಲಿ ಪರಿಣಿತಿ ಸಾಧಿಸಿದರೆ ಉತ್ತಮ ಕಲಿಕೆ ಸಾಧ್ಯವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾ ಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಮಾತನಾಡಿ, ಪ್ರತಿಯೊಬ್ಬರು ಸವಾಲುಗಳ ನಡುವೆಯೇ ಮುನ್ನಡೆಯಬೇಕಾದ ಸಂಕೀರ್ಣ ಕಾಲಘಟ್ಟವಿದು. ಅನಿರೀಕ್ಷಿತ ಸವಾಲನ್ನು ಎದುರಿಸಲು ನಾವು ಸದಾ ಸಿದ್ಧರಿರಬೇಕು. ಇದಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಲ್ಲ ಎಂದರು.

ಬದಲಾದ ವ್ಯವಸ್ಥೆಗೆ ತಕ್ಕಂತೆ ಶಿಕ್ಷಣ ನೀಡಬೇಕಿದ್ದು, ಏಕಮುಖಕ್ಕಿಂತ ಬಹುಮುಖ ವಾದ ಅಧ್ಯಯನ ಇಂದಿನ ಅಗತ್ಯ. ತಂತ್ರಜ್ಞಾನಾಧಾರಿತ ಆನ್‍ಲೈನ್‍ನಲ್ಲಿ ಬೋಧನೆ ಪರಿಣಾಮಕಾರಿಯಾಗಿಸಲು ಈ ಕಾರ್ಯಾಗಾರ ಮಾರ್ಗದರ್ಶನ ಆಗಲಿದೆ ಎಂದರು.
ಕಾಲೇಜು ಸಮುಚ್ಛಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಪ್ರಾಸ್ತಾವಿಕ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆನ್‍ಲೈನ್ ಬೋಧನೆ ಉತ್ತಮ ವಿಧಾನ. ಈ ಹಿನ್ನೆಲೆಯಲ್ಲಿ ಅಧ್ಯಾಪಕರು ಆನ್‍ಲೈನ್ ಬೋಧನೆಯ ಕೌಶಲ್ಯ ಉತ್ತಮ ಪಡಿಸಿಕೊಳ್ಳುವುದು ಅಗತ್ಯವೆಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕಾಲೇಜು ಪ್ರಾಂಶುಪಾಲ ಡಾ.ಹೆಚ್.ಸಿ.ಹೊನ್ನಪ್ಪ ಮತ್ತಿತರರು ಹಾಜರಿದ್ದರು.