ನಾಳೆ ಅರಮನೆಯ ಶ್ರೀ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಮೈಸೂರು, ಮಾ.9- ಅರಮನೆ ಮುಜರಾಯಿ ದೇವಸ್ಥಾನಗಳ ವ್ಯವಸ್ಥಾಪಕರ ಕಾರ್ಯಾಲಯದ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಅರಮನೆಯ ಆವರಣದಲ್ಲಿರುವ ಶ್ರೀ ತ್ರಿನೇಶ್ವರ ಸ್ವಾಮಿ ದೇವಾಲಯದಲ್ಲಿರುವ ಮೂಲ ದೇವರಿಗೆ ಚಿನ್ನದ ಕೊಳಗ(ಮುಖವಾಡ)ವನ್ನು ಮಾ.11ರಂದು ಧರಿಸಲಾಗುವುದು.

ಭಕ್ತಾದಿಗಳ ಅನುಕೂಲಕ್ಕಾಗಿ ಅಂದು ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ವಿದ್ದು, ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ದರ್ಶನಕ್ಕೆ ಆಗಮಿಸುವ ಭಕ್ತಾದಿಗಳ ವಾಹನಗಳ ನಿಲುಗಡೆಗಾಗಿ ವರಹಾದ್ವಾರದ ಪಾರ್ಕಿಂಗ್, ಅಂಬಾವಿಲಾಸ ಪಾರ್ಕಿಂಗ್ ಮತ್ತು ಕಾಡಾ ಕಚೇರಿಯ ಕಾಂಪೌಂಡ್ ಬಳಿ ವ್ಯವಸ್ಥೆ ಮಾಡಲಾಗಿದೆ. ಅದೇ ದಿನದಂದು ರಾಮಾನುಜ ರಸ್ತೆಯಲ್ಲಿರುವ ಶ್ರೀ ಕಾಮಕಾಮೇಶ್ವರಿ ದೇವಾಲಯದಲ್ಲಿಯೂ ಮಹಾ ಶಿವರಾತ್ರಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮತ್ತು ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಅರಮನೆ ಮುಜರಾಯಿ ಸಂಸ್ಥೆಗಳ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.