ಪ್ರಯಾಣಿಕರಿಲ್ಲದೆ ಟಾಂಗಾವಾಲ ಬದುಕು ಅತಂತ್ರ

ಮೈಸೂರು, ಮೇ 24(ವೈಡಿಎಸ್)- ಮೈಸೂರು ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದು ಮೈಸೂರು ದಸರಾ, ಮೈಸೂರು ಪಾಕ್, ಅರಮನೆ, ಮೃಗಾ ಲಯ, ಚಾಮುಂಡಿಬೆಟ್ಟ, ಚರ್ಚ್. ಹಾಗೆಯೇ ಟಕ್ ಟಕ್ ಶಬ್ದ ಮಾಡಿ ಕೊಂಡು ಓಡುವ ಟಾಂಗಾ ಗಾಡಿಗಳು…

ಆದರೆ, ಲಾಕ್‍ಡೌನ್ ಆರಂಭವಾದಾ ಗಿನಿಂದ ಟಾಂಗಾವಾಲಗಳಿಗೆ ಶುರುವಾದ ಆರ್ಥಿಕ ಸಂಕಷ್ಟ, ಈಗ ಲಾಕ್‍ಡೌನ್ ಸಡಿಲಿಕೆ ಯಾದರೂ ನಿವಾರಣೆ ಆಗಿಲ್ಲ. ಪ್ರವಾಸಿ ಗರೇ ಇಲ್ಲದ್ದರಿಂದ ಹಾಗೂ ಬೆಳಿಗ್ಗೆಯಿಂದ ಸಂಜೆವರೆಗೂ ಕಾದು ಕುಳಿತರೂ ಒಬ್ಬರೂ ಟಾಂಗಾದಲ್ಲಿ ಪ್ರಯಾಣಿಸಲು ಬಾರದ ಹಿನ್ನೆಲೆಯಲ್ಲಿ ಸಂಜೆ ಬರಿಗೈಲಿ ಮನೆಗೆ ತೆರಳಬೇಕಾದ ಸ್ಥಿತಿ ಬಂದೊದಗಿದೆ.

ಈ ಮೊದಲು ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಚರ್ಚ್ ಮತ್ತಿತರ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿ ಸಲು ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮೈಸೂರಿಗೆ ಬರು ತ್ತಿದ್ದರಿಂದ ಟಾಂಗಾವಾಲಗಳಿಗೂ ಆದಾಯ ವಾಗುತ್ತಿತ್ತು. ಎರಡು ತಿಂಗಳ ಹಿಂದೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಜಾರಿಯಾಗಿದೆ. ಪ್ರೇಕ್ಷಣೀಯ ಸ್ಥಳಗಳಲ್ಲಿ ಜನರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮತ್ತೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿದರೂ ಕೊರೊನಾ ಭೀತಿಯಿಂದ ಪ್ರವಾಸಿಗರು ಬರಲು ಹೆದರುತ್ತಾರೆ. ಮೊದಲಿ ನಂತೆ ಪ್ರವಾಸಿಗರು ಮೈಸೂರಿಗೆ ಬರಬೇಕಾ ದರೆ ವರ್ಷವಾದರೂ ಬೇಕು. ಇದನ್ನೇ ನಂಬಿರುವ ಸಾವಿರಾರು ಕುಟುಂಬಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಶಾರದಾದೇವಿ ನಗರ ನಿವಾಸಿ, ಟಾಂಗಾ ವಾಲ ಅಕ್ರಂ ಬೇಸರ ವ್ಯಕ್ತಪಡಿಸಿದರು.

ನಮ್ಮ ತಾತ ಮುತ್ತಾತರ ಕಾಲದಿಂದಲೂ ಟಾಂಗಾ ಜೊತೆಗೆ ಬದುಕು ಸಾಗಿಸಿಕೊಂಡು ಬಂದಿದ್ದಾರೆ. ಹಾಗಾಗಿ ನಾನು ಇದೇ ವೃತ್ತಿಗೆ ಬಂದೆ. 30 ವರ್ಷದಿಂದ ಟಾಂಗಾ ಗಾಡಿ ಓಡಿಸುತ್ತಿದ್ದೇನೆ. ಕೊರೊನಾ ಸೋಂಕು ದೇಶ ಪ್ರವೇಶಿಸುವುದಕ್ಕೂ ಮುನ್ನ ಹೆಚ್ಚಿನ ಸಂಖ್ಯೆ ಯಲ್ಲಿ ಪ್ರವಾಸಿಗರು ಮೈಸೂರಿಗೆ ಬರುತ್ತಿದ್ದರು. ಅವರನ್ನು ಟಾಂಗಾ ಗಾಡಿಯಲ್ಲಿ ಕೂರಿಸಿ ಕೊಂಡು ಮೈಸೂರು ಅರಮನೆ, ಚರ್ಚ್, ಮೃಗಾಲಯಗಳಿಗೆ ಕರೆದೊಯ್ಯುತ್ತಿದ್ದೆ. ಪ್ರತಿ ದಿನ 500-600 ರೂ. ಸಂಪಾದನೆಯಾಗು ತ್ತಿತ್ತು. ಅದರಲ್ಲಿ ಹುಲ್ಲು, ಹುರುಳಿ, ಬೂಸಾ ಎಂದು ಕುದುರೆಗೆ 300 ರೂ. ಖರ್ಚಾದರೂ 300 ರೂ. ಉಳಿಯುತ್ತಿತ್ತು. ಅದರಲ್ಲಿಯೇ ಕುಟುಂಬ ನಿರ್ವಹಣೆ ನಡೆಯುತ್ತಿತ್ತು. ಇಂದು ಖರ್ಚಿಗೆ ಹಣವಿಲ್ಲದೆ ಪರದಾಡುವಂತಾ ಗಿದೆ ಎಂದು `ಮೈಸೂರು ಮಿತ್ರ’ನೊಂದಿಗೆ ಅಳಲು ತೋಡಿಕೊಂಡರು.