ಇಂದಿನಿಂದ ಡ್ರಗ್ ಕೆಮಿಸ್ಟ್ರಿ ಕುರಿತ ತರಬೇತಿ ಕಾರ್ಯಕ್ರಮ

ಮೈಸೂರು: ಜೆಎಸ್‍ಎಸ್ ಫಾರ್ಮಸಿ ಕಾಲೇಜು ವತಿಯಿಂದ ನ.13ರಿಂದ `ಡ್ರಗ್ ಕೆಮಿಸ್ಟ್ರಿ’ ಕುರಿತ 1 ತಿಂಗಳ ಅವಧಿಯ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯ ಕ್ರಮದ ಸಂಚಾಲಕ ಹಾಗೂ ಕಾಲೇಜಿನ ಪ್ರಾಧ್ಯಾಪಕ ಡಾ.ಜಿ.ವಿ. ಪೂಜಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ ನಡೆ ಯುವ ಈ 1 ತಿಂಗಳ ತರಬೇತಿ ಕಾರ್ಯಕ್ರಮಕ್ಕೆ ಕಾಲೇಜಿನ ಆರ್‍ಎ ಸೆಮಿನಾರ್ ಹಾಲ್‍ನಲ್ಲಿ ನ.13ರಂದು ಬೆಳಿಗ್ಗೆ 10.30ಕ್ಕೆ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಸಚಿವ ಡಾ.ಬಿ.ಮಂಜುನಾಥ್ ಚಾಲನೆ ನೀಡಲಿದ್ದಾರೆ ಎಂದರು. ಅತಿಥಿ ಯಾಗಿ ಬೆಂಗಳೂರಿನ ಜಸ್ತ್ರ ಇನೋವೇಷನ್ಸ್‍ನ ಮುಖ್ಯ ವಿಜ್ಞಾನಿ ಡಾ.ಗಿರಿನಾಥ್ ಪಿಳ್ಳೈ ಭಾಗವಹಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್‍ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜಿನ ಔಷಧ ರಸಾಯನಶಾಸ್ತ್ರ ವಿಭಾಗವನ್ನು `ಡ್ರಗ್ ಕೆಮಿಸ್ಟ್ರಿ’ ತರಬೇತಿ ಕೇಂದ್ರವಾಗಿ ಗುರುತಿಸಿ ಭಾರತ ಸರ್ಕಾರದ ಆರೋಗ್ಯ ಸಂಶೋ ಧನಾ ಇಲಾಖೆ 2015ರಲ್ಲಿ 5 ವರ್ಷದ ಅವಧಿಗೆ 50 ಲಕ್ಷ ರೂ. ಅನು ದಾನ ನೀಡಿದೆ. ಇದರಡಿಯಲ್ಲಿ ಈಗಾಗಲೇ 3 ತರಬೇತಿ ಕಾರ್ಯಕ್ರಮ ನಡೆಸಲಾಗಿದೆ ಎಂದರು. ಇದೇ ಅನುದಾನದಲ್ಲಿ ಕಾಲೇಜಿನಲ್ಲಿ ನಡೆಯು ತ್ತಿರುವ 4ನೇ ತರಬೇತಿ ಕಾರ್ಯಕ್ರಮ ಇದಾಗಿದೆ.

ತರಬೇತಿ ನೀಡಲು ಔಷಧ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಸಂಶೋಧಕರು ಹಾಗೂ ಉಪನ್ಯಾಸಕರು ಸೇರಿದಂತೆ ಒಟ್ಟು 10 ಮಂದಿಯನ್ನು ಆಯ್ಕೆ ಮಾಡಿದ್ದು, ಈ ಪೈಕಿ ರಾಜ್ಯದ ವಿವಿಧ ಭಾಗಗಳಿಂದ ಐವರು, ಆಂಧ್ರ ಪ್ರದೇಶದಿಂದ ನಾಲ್ವರು ಹಾಗೂ ಮಹಾರಾಷ್ಟ್ರದಿಂದ ಒಬ್ಬರು ಆಯ್ಕೆಗೊಂಡಿದ್ದಾರೆ. ಇವರಿಗೆ 1 ತಿಂಗಳ ಅವಧಿಯಲ್ಲಿ ಔಷಧೋದ್ಯಮ ಹಾಗೂ ಶೈಕ್ಷಣಿಕ ಕ್ಷೇತ್ರದ 30 ಮಂದಿ ವಿಜ್ಞಾನಿಗಳು ಹಾಗೂ ಪ್ರಾಧ್ಯಾಪಕರು ತರಬೇತಿ ನೀಡಲಿದ್ದಾರೆ ಎಂದರು.