ಮಾತುಕತೆಗೆ ಸಾರಿಗೆ ಸಚಿವ ಸವದಿ ಮುಕ್ತ ಆಹ್ವಾನ

ಬೆಂಗಳೂರು, ಡಿ.12-ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ಮುಕ್ತ  ಮಾತುಕತೆಗೆ ಬರುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಆಹ್ವಾನ ನೀಡಿದ್ದಾರೆ.

ಯಾವುದೇ ಬೇಡಿಕೆ ಇದ್ದರೂ ಮುಕ್ತ ಮಾತು ಕತೆಯ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಮನವಿ ಮಾಡಿರುವ ಅವರು, ನಿನ್ನೆ ಮತ್ತು ಇಂದು ಸಾರಿಗೆ ಬಸ್‍ಗಳ ಸಂಚಾರ ಸ್ಥಗಿತಗೊಂಡಿ ರುವುದು ಹಾಗೂ ಬಸ್‍ಗಳಿಗೆ ಕಲ್ಲು ತೂರಾಟ ನಡೆಸುವುದು, ಅಹಿತಕರ ಘಟನೆಗಳು ನಡೆದಿರುವುದು ದುರ್ದೈವದ ಸಂಗತಿ ಎಂದು ವಿಷಾದಿಸಿರುವ ಅವರು, 1.30 ಲಕ್ಷ ಸಾರಿಗೆ ನೌಕರರ ಹಿತಾಸಕ್ತಿ ಕಾಪಾಡಲು ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಸಾರಿಗೆ ಸಿಬ್ಬಂದಿ ಬಗ್ಗೆ ನನಗೆ ಮತ್ತು ಸರ್ಕಾರಕ್ಕೆ ಸಹಾನುಭೂತಿ ಇದೆ. ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದರೂ, ಎಲ್ಲಾ ಸಿಬ್ಬಂದಿಗೆ ಯಾವುದೇ ಕಡಿತವಿಲ್ಲದೆ ಸಂಬಳ ನೀಡಿರು ವುದೇ ಅದಕ್ಕೆ ನಿದರ್ಶನ. ಕೋವಿಡ್‍ನಿಂದಾಗಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ನೌಕರರ ಕುಟುಂಬದವರಿಗೆ 15 ದಿನದೊಳಗೆ ತಲಾ 30 ಲಕ್ಷ ರೂ. ಪರಿಹಾರ ನೀಡುವುದಾಗಿ

ನಾನು ಈಗಾಗಲೇ ಭರವಸೆ ನೀಡಿದ್ದೇನೆ. ಉಳಿದ ಬೇಡಿಕೆಗಳ ಬಗ್ಗೆ ಚರ್ಚಿಸಿ ಮಾರ್ಗೋಪಾಯ ಕಂಡುಹಿಡಿಯಲು ಮಾತುಕತೆ ನಡೆಸಲು ಸರ್ಕಾರ ಸದಾ ಸಿದ್ಧವಿದೆ. ಆದ್ದರಿಂದ ಕೋಟ್ಯಾಂತರ ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಬೇಕೆಂದು ಅವರು ಮನವಿ ಮಾಡಿದ್ದಾರೆ.

ಸಾರಿಗೆ ಸಂಸ್ಥೆಗಳ ಯಾವುದೇ ಒಕ್ಕೂಟಕ್ಕೆ ಸೇರಿಲ್ಲದವರು ಏಕಾಏಕಿ ಯಾವುದೇ ಮುನ್ಸೂಚನೆ ನೀಡದೇ ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಕರೆ ಕೊಟ್ಟಿರುವುದು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಬಂದ ಕೆಲವು ಸಿಬ್ಬಂದಿಗೆ ತೊಂದರೆ ನೀಡಿರುವುದು, ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸಿರುವುದು ದುರದೃಷ್ಟಕರ. ಇಂತಹ ಬೆಳವಣಿಗೆಯಿಂದ ಸಾರಿಗೆ ನೌಕರರಿಗೆ ದೊಡ್ಡ ಮಟ್ಟದ ಹಾನಿಯಾಗುವುದ ಲ್ಲದೇ ಸಾರ್ವಜನಿಕರಿಗೆ ಅನಾವಶ್ಯಕವಾಗಿ ತೊಂದರೆಯಾಗುತ್ತದೆ. ಸಾರಿಗೆ ಸಿಬ್ಬಂದಿ ನನ್ನ ಕುಟುಂಬವಿದ್ದಂತೆ. ಅವರ ಸಂಕಷ್ಟಗಳಿಗೆ ಸ್ಪಂದಿಸಲು ನಾನು ಸದಾ ಸಿದ್ಧ. ಮುಖ್ಯಮಂತ್ರಿಗಳೂ ಕೂಡ ಸಾರಿಗೆ ನೌಕರರ ಬೇಡಿಕೆ ಬಗ್ಗೆ ಉದಾರವಾಗಿ ನಡೆದು ಕೊಂಡಿದ್ದಾರೆ. ನನ್ನ ಬಳಿ ಮಾತುಕತೆಗೆ ಬರಲು ನೌಕರರಿಗೆ ಮುಕ್ತ ಅವಕಾಶವಿದೆ ಎಂದು ಲಕ್ಷ್ಮಣ ಸವದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.