ಶ್ರೀಗಂಧದ ತುಂಡುಗಳ ಸಾಗಣೆ: ಇಬ್ಬರ ಬಂಧನ

ಹನೂರು, ಮಾ.20- ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಹನೂರು ಪೊಲೀಸರು ಬಂಧಿಸಿದ್ದಾರೆ.

ಹನೂರು ಪೊಲೀಸ್ ಠಾಣಾ ಸರಹದ್ದಿನ ಜೊರೇದೊಡ್ಡಿ ಗ್ರಾಮದ ನಿವಾಸಿಗಳಾದ ವೆಂಕಟೇಶ್ (30), ರವಿ(32) ಬಂಧಿತ ಆರೋಪಿಗಳು. ಇವರಿಂದ 10 ಕೆಜಿ ಶ್ರೀಗಂಧ ತುಂಡುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ವಿವರ: ಆರೋಪಿಗಳಾದ ವೆಂಕಟೇಶ್ ಹಾಗೂ ರವಿ ಗುರುವಾರ ಸಂಜೆ ಚೀಲದಲ್ಲಿ 10 ಕೆಜಿ ಶ್ರೀಗಂಧದ ಮರದ ತುಂಡುಗಳನ್ನು ತುಂಬಿಕೊಂಡು ಬೇರೆಡೆ ಸಾಗಿಸಲು ಜೊರೇ ದೊಡ್ಡಿ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಇನ್ಸ್‍ಪೆಕ್ಟರ್ ರವಿ ನಾಯಕ್ ಹಾಗೂ ಎಸ್‍ಐ ನಾಗೇಶ್ ಹಾಗೂ ಸಿಬ್ಬಂದಿ ಕಂಡ ಆರೋಪಿಗಳು ಓಡಲು ಯತ್ನಿಸಿದ್ದಾರೆ. ಈ ವೇಳೆ ಇಬ್ಬರನ್ನು ಬೆನ್ನತ್ತಿ ಬಂಧಿಸಿ, ಶ್ರೀಗಂಧವನ್ನು ವಶಕ್ಕೆ ಪಡೆದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್, ಕೊಳ್ಳೇಗಾಲ ಡಿವೈಎಸ್‍ಪಿ ನವೀನ್ ಕುಮಾರ್ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮುಖ್ಯಪೇದೆ ರಾಮದಾಸ್, ಪೇದೆಗಳಾದ ಕಾಮರಾಜ್, ಲಿಯಾಖತ್ ಅಲಿಖಾನ್, ಮಖಂದರ್, ಮಾದೇವ, ಪ್ರದೀಪ್ ಕುಮಾರ್, ವೀರಭದ್ರ, ರಾಮಶೆಟ್ಟಿ, ರಾಜು ಹಾಗೂ ಇನ್ನಿತರರಿದ್ದರು.