ಮೈಸೂರಲ್ಲಿ ಯುಜಿ ಕೇಬಲ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿ

ಬನ್ನಿಮಂಟಪದ ಜೋಡಿ ತೆಂಗಿನಮರ ರಸ್ತೆ, ಮೇದರ್ ಬ್ಲಾಕ್, ಯಾದವಗಿರಿ, ಮಂಜುನಾಥಪುರ ಬಡಾವಣೆಗಳಲ್ಲಿ ಬಿರುಸಿನ ಕಾಮಗಾರಿ
ಮೈಸೂರು, ಸೆ.17(ಆರ್‍ಕೆ)- ಕೋವಿಡ್-19 ನಡುವೆಯೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಚೆಸ್ಕಾಂ)ವು ಯುಜಿ ಕೇಬಲ್ ಅಳವಡಿಸುವ ಯೋಜನೆ ಯನ್ನು ತೀವ್ರಗತಿಯಿಂದ ಅನುಷ್ಠಾನಗೊಳಿಸುತ್ತಿದೆ. ಮೊದಲ ಹಂತದಲ್ಲಿ ಶೇ.50ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು, ಮೈಸೂರಿನ ಎನ್.ಆರ್ ಉಪ ವಿಭಾಗದಿಂದ ಬನ್ನಿಮಂಟಪ, ಸಯ್ಯಾಜಿರಾವ್ ರಸ್ತೆ, ಯಾದವಗಿರಿ, ಮೇದರ್ ಬ್ಲಾಕ್, ಮಂಜುನಾಥಪುರ, ಶಿವ ರಾತ್ರೀಶ್ವರ ನಗರ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ವಿದ್ಯುತ್ ಸಂಪರ್ಕ ಜಾಲವನ್ನು ಭೂಮಿ ಒಳಗೆ ಅಳವಡಿಸುವ ಕಾರ್ಯ ಚುರುಕುಗೊಂಡಿದೆ.

ಮೈಸೂರು ನಗರದಾ ದ್ಯಂತ(ರಿಂಗ್ ರೋಡ್ ಒಳಗೆ) ಒಟ್ಟು 600 ಕೋಟಿ ರೂ. ವೆಚ್ಚದಲ್ಲಿ ಯುಜಿ (ಅಂಡರ್ ಗ್ರೌಂಡ್) ಕೇಬಲ್ ಅಳ ವಡಿಸಲು ಉದ್ದೇಶಿಸಿರುವ ಚೆಸ್ಕಾಂ, ಮೊದಲನೇ ಹಂತ ದಲ್ಲಿ 300 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಏಷಿಯನ್ ಫ್ಯಾಬ್‍ಟೆಕ್ ಲಿಮಿಟೆಡ್ (ಎಎಫ್‍ಟಿಎಲ್) ಮತ್ತು ಎಲ್ ಅಂಡ್ ಟಿ ಸಂಸ್ಥೆಗಳು ಕೇಬಲ್ ಅಳವಡಿಸುವ ಕಾರ್ಯವನ್ನು ಕೈಗೊಂಡಿದ್ದು, ಈಗಾಗಲೇ ಶೇ.50ರಷ್ಟು ಕೆಲಸ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ 500 ಕಿ.ಮೀ.ವರೆಗೆ ಯುಜಿ ಕೇಬಲ್ ಅಳವಡಿಸಲಿದ್ದು, ಪ್ರತೀ ದಿನ 250ರಿಂದ 300 ಮಂದಿ ಕಾರ್ಮಿಕರು ರಸ್ತೆ ಬದಿ ಅಗೆದು ಕೇಬಲ್ ಅಳವಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೈಟೆನ್ಷನ್ 11 ಕೆವಿ ಮಾರ್ಗ, ಲೋ ಟೆನ್ಷನ್ ಲೈನ್‍ಗಳಿಂದ ಮನೆ, ಉದ್ದಿಮೆಗಳಿಗೆ ವಿದ್ಯುತ್ ಪೂರೈಸಲುದ್ದೇಶಿಸಿದ್ದು, ಅದಕ್ಕಾಗಿ ಅಲ್ಲಲ್ಲಿ ಫೀಡರ್ ಬಾಕ್ಸ್‍ಗಳನ್ನು ಅಳವಡಿಸಲಾಗುತ್ತಿದೆ. ಕಂಬಗಳ ಆಧಾರದಲ್ಲಿ ವಿದ್ಯುತ್ ಕೇಬಲ್ ಅಳವಡಿಸಿರುವ ಹಳೇ ಪದ್ಧತಿಯಿಂದ ಮಳೆ, ಗಾಳಿ, ಬಿಸಿಲು, ಗುಡುಗು, ಮಿಂಚಿನಂತಹ ನೈಸರ್ಗಿಕ ವಿಪತ್ತುಗಳಿಂದ ವೈಯರ್‍ಗಳು ತುಂಡರಿಸಿ ಬಿದ್ದು ಪ್ರಾಣಾಪಾಯ ಸಂಭವಿಸುವುದು, ನಿರ್ವಹಣಾ ದುಬಾರಿ ವೆಚ್ಚ ತಪ್ಪಿಸುವುದು ಯುಜಿ ಕೇಬಲ್ ಯೋಜನೆಯ ಪ್ರಮುಖ ಉದ್ದೇಶ ಎಂದು ಚೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಮೈಸೂರು ಅರಮನೆ ಸುತ್ತಲಿನ ಪ್ರದೇಶ, ರಮಾವಿಲಾಸ ರಸ್ತೆ, ಹಾರ್ಡಿಂಗ್ ಸರ್ಕಲ್, ಚಾಮರಾಜ ಜೋಡಿ ರಸ್ತೆ, ದೇವರಾಜ ಅರಸು ರಸ್ತೆ, ದೊಡ್ಡಕೆರೆ ಮೈದಾನ, ಡಿಸಿ ಕಚೇರಿ, ಜಿಲ್ಲಾ ಪಂಚಾಯ್ತಿ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯುಜಿ ಕೇಬಲ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಕೋವಿಡ್-19 ಲಾಕ್‍ಡೌನ್ ನಿರ್ಬಂಧದಿಂದಾಗಿ ಕೆಲ ತಿಂಗಳ ಕಾಲ ಸ್ಥಗಿತಗೊಂಡಿದ್ದ ಕಾಮಗಾರಿ ಈಗ ಪುನಾರಂಭಗೊಂಡಿದ್ದು, ಮೂರು ತಿಂಗಳೊಳಗಾಗಿ ಮೊದಲ ಹಂತದ ಯೋಜನೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.