ಸಂಕಷ್ಟದಲ್ಲಿರುವವರಿಗೆ ಆಹಾರ ಪದಾರ್ಥ ವಿತರಿಸುವ ವಿಷಯದಲ್ಲಿ ಎಚ್ಚರಿಕೆ ಗಂಟೆ…!

ಮೈಸೂರು, ಏ.23(ಎಸ್‍ಬಿಡಿ)- ದಾನಿಗಳು ಆಹಾರ ಇನ್ನಿತರ ವಸ್ತುಗಳನ್ನು ವಿತ ರಿಸುವಾಗ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಲಾಕ್‍ಡೌನ್ ಪರಿಸ್ಥಿತಿಯನ್ನು ಸಮರ್ಥ ವಾಗಿ ನಿಬಾಯಿಸುವಲ್ಲಿ ಸರ್ಕಾರಕ್ಕೆ ದಾನಿ ಗಳು ನೆರವಾಗಿದ್ದಾರೆ. ಸಂಕಷ್ಟದಲ್ಲಿರುವ ಎಲ್ಲರಿಗೂ ಸ್ಪಂದಿಸಲು ಸರ್ಕಾರಕ್ಕೆ ತಕ್ಷ ಣಕ್ಕೆ ಸಾಧ್ಯವಿಲ್ಲ. ಹಾಗಾಗಿ ಹಲವಾರು ರಾಜಕೀಯ ನಾಯಕರು, ಮುಖಂಡರು, ಸಂಘ ಸಂಸ್ಥೆಗಳು, ಉದ್ಯಮಿಗಳು ಸೇರಿದಂತೆ ಸಾವಿರಾರು ದಾನಿಗಳು ಸ್ವಯಂ ಪ್ರೇರಿತವಾಗಿ ಸಹಾಯ ಹಸ್ತ ಚಾಚಿದ್ದಾರೆ.

ಪಡಿತರ ಚೀಟಿಯಿಲ್ಲದೆ ಸರ್ಕಾರದ ಸೌಲಭ್ಯದಿಂದಲೂ ವಂಚಿತರಾದವರಿಗೆ ದಾನಿಗಳೇ ದೇವರಾಗಿದ್ದಾರೆ. ಸರ್ಕಾರದಿಂದ ಆರಂಭಿಸಿರುವ ನಿರಾಶ್ರಿತರ ಕೇಂದ್ರಗಳೂ ದಾನಿಗಳ ಸಹಕಾರದಿಂದಲೇ ನಡೆಯುತ್ತಿವೆ. ನಿತ್ಯ ಅನ್ನ ಯಜ್ಞ ನಡೆಯುತ್ತಿದೆ. ಬಡವರ ಬಳಿ ಹೋಗಿ ದಿನಸಿ ಇನ್ನಿತರ ವಸ್ತುಗಳ ಕಿಟ್ ನೀಡುತ್ತಿದ್ದಾರೆ. ಸರ್ಕಾರದ ವತಿಯಿಂದ ಹಾಲನ್ನೂ ಉಚಿತವಾಗಿ ಹಂಚಲಾಗುತ್ತಿದೆ. ಸದ್ಯಕ್ಕೆ ಬಡವರು ಹಸಿವಿನಿಂದ ಬಳಲುವ ದುಸ್ಥಿತಿ ಎದುರಾಗಿಲ್ಲ. ಆದರೆ ಹೀಗೆಯೇ ಎಚ್ಚರ ತಪ್ಪಿ ನಡೆದುಕೊಂಡರೆ ಅಪಾಯ ವಂತೂ ಕಟ್ಟಿಟ್ಟ ಬುತ್ತಿ. ಮಹಾಮಾರಿ ಕೊರೊನಾಗೆ ನಿರ್ಧಿಷ್ಟ ಔಷಧವಿಲ್ಲ. ಸೋಂಕು ವೇಗವಾಗಿ ಹರಡುವಿಕೆ ಬಗ್ಗೆಯೂ ಅಧ್ಯಯನ ನಡೆಯುತ್ತಲೇ ಇದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ತಕ್ಷಣದ ಪರಿಹಾರ. ಒಂದಷ್ಟು ಮುಂಜಾಗ್ರತೆ ವಹಿಸಿ, ದೈಹಿಕ ಅಂತರ ಕಾಯ್ದುಕೊಂಡರೆ ಸೋಂಕು ಹರಡದಂತೆ ತಡೆಯಬಹುದು. ಹಾಗಾಗಿಯೇ ದೇಶದಲ್ಲಿ ಲಾಕ್‍ಡೌನ್ ಜಾರಿಗೊಳಿಸಿ, ಎಲ್ಲರೂ ಮನೆಯಲ್ಲೇ ಇರುವಂತೆ ಕೋರಲಾಗಿದೆ. ಇವೆಲ್ಲಾ ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವೇ. ಆದರೆ ಇದನ್ನೆಲ್ಲಾ ಪಾಲಿಸಬೇಕೆಂಬ ಜವಾಬ್ದಾರಿ ಎಲ್ಲರಲ್ಲೂ ಕಾಣಿಸುತ್ತಿಲ್ಲ.

ಹಸಿದವರಿಗೆ ಅನ್ನ ನೀಡುವುದು ಮಾನವೀಯ ಧರ್ಮ. ಒಬ್ಬರಿಗೊಬ್ಬರು ಸಹಕಾರಕ್ಕೆ ನಿಲ್ಲದಿದ್ದರೆ ಮನುಷ್ಯ ಜನ್ಮಕ್ಕೆ ಅರ್ಥವೇ ಇರುವುದಿಲ್ಲ. ಈ ಭಾವನೆಯಿಂದಲೇ ಮೈಸೂರಿನ ನೂರಾರು ದಾನಿಗಳು ನಿರಂತರವಾಗಿ ಬಡವರಿಗೆ ನೆರವಾಗುತ್ತಿದ್ದಾರೆ. ಆದರೆ ಈ ವೇಳೆ ಎಚ್ಚರಿಕೆ ವಹಿಸಲೇಬೇಕು. ಸ್ಥಳೀಯರ ಸಹಕಾರದಿಂದಲೇ ಜಾಗ್ರತೆ ವಹಿಸಬೇಕು. ಕಡ್ಡಾಯ ವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲರೂ ಮಾಸ್ಕ್ ಧರಿಸಿಯೇ ಬರುವಂತೆ ಸೂಚಿಸಬೇಕು. ವಿತರಣೆ ಮಾಡುವವರೂ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್, ಗ್ಲೌಸ್ ಧರಿಸಿರಬೇಕು. ಈ ಕಾರ್ಯ ದಾನಿಗಳ ಹೆಸರಲ್ಲೇ ಜಿಲ್ಲಾಡಳಿತದ ಮೂಲಕ ನಡೆದರೆ ತುಂಬಾ ಒಳ್ಳೆಯದು. ಈ ನಿಟ್ಟಿನಲ್ಲಿ ಮೈಸೂರು ತಾಲೂಕು ಆಡಳಿತ ಮಾದರಿ ಯಾಗಿದೆ. ಪಡಿತರ ಚೀಟಿ ಇಲ್ಲದ ಬಡವರಿಗೆ ನೆರವಾಗಲು ದಾನಿಗಳಿಂದ ವಸ್ತುಗಳನ್ನು ಸಂಗ್ರಹಿಸಲಾಗಿದೆ. ರೈತರು ಜಯಪುರದಲ್ಲಿ ಗುರುವಾರ ಟನ್‍ಗಟ್ಟಲೆ ಹಣ್ಣು, ತರಕಾರಿ, ಧಾನ್ಯಗಳನ್ನು ಸರ್ಕಾರಕ್ಕೆ ಕೊಡುಗೆ ನೀಡಿದ್ದಾರೆ. ಸಂಗ್ರಹವಾದ ವಸ್ತುಗಳನ್ನು ಅವಶ್ಯಕತೆಯಿದ್ದವರಿಗೆ ನೀಡಲು ಯೋಜನೆ ರೂಪಿಸಿಕೊಂಡಿದ್ದಾರೆ. ಹೀಗೆ ವ್ಯವಸ್ಥಿತ ವಾಗಿದ್ದರೆ ಬಡವರಿಗೆ ನೆರವಾಗುವುದರ ಜೊತೆಗೆ ಸೋಂಕಿನ ಭೀತಿಯಿಂದಲೂ ದೂರವಿರಬಹುದು ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.