ಉಕ್ಕಿ ಹರಿಯುತ್ತಿರುವ ಕಾವೇರಿ ದಡದಲ್ಲಿ ಜನಜಾತ್ರೆ

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯ ದಿಂದ ಭಾರೀ ಪ್ರಮಾಣದ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಉಕ್ಕಿ ಹರಿಯುತ್ತಿರುವ ನಾಡಿನ ಜೀವನದಿ ಕಾವೇರಿಯನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಶ್ರೀರಂಗಪಟ್ಟಣ ಹಾಗೂ ತಿ.ನರಸೀಪುರದತ್ತ ಜನಜಂಗುಳಿಯೇ ಹರಿದು ಬರುತ್ತಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕವಲೊಡೆದು ವಿಶಾಲವಾಗಿ ಹರಿಯುತ್ತಿರುವ ಕಾವೇರಿ ನದಿಯ ಸೊಬಗನ್ನು ಸವಿಯಲು ಸೋಮವಾರ ಬೆಳಗಿನಿಂದ ಸಂಜೆಯವರೆಗೂ ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ಇನ್ನಿತರೆಡೆಗಳಿಂದ ಜನರು ಭಾರೀ ಸಂಖ್ಯೆಯಲ್ಲಿ ಆಗಮಿಸಿ, ವಿವಿಧ ಸ್ಥಳಗಳಲ್ಲಿ ನಿಂತು ನದಿಯ ರಭಸವನ್ನು ನೋಡಿ ಸಂಭ್ರಮಿಸಿದರು. ರಂಗನತಿಟ್ಟು ಪಕ್ಷಿಧಾಮಕ್ಕೆ ಹೋಗುವ ರಸ್ತೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ, ಶ್ರೀರಂಗನಾಥಸ್ವಾಮಿ ದೇವಾಲಯದ ಹಿಂಭಾಗದಲ್ಲಿ ರುವ ರೈಲ್ವೆ ಸೇತುವೆ, ಹಳೆಯ ಸೇತುವೆ ಹಾಗೂ ಬಸ್ ನಿಲ್ದಾಣದ ಸಮೀಪವಿರುವ ವೆಲ್ಲೆಸ್ಲಿ ಸೇತುವೆ, ಬೆಂಗಳೂರು-ಮೈಸೂರು ರಸ್ತೆ ಸೇತುವೆ ಮೇಲೆ ನೂರಾರು ಮಂದಿ ನಿಂತು, ಉಕ್ಕಿ ಹರಿವ ಕಾವೇರಿ ಕಂಡು ಅಚ್ಚರಿಗೊಂಡರು.ಮುನ್ನೆಚ್ಚರಿಕಾ ಕ್ರಮವಾಗಿ ಕಾವೇರಿ ನದಿಯ ದಡದತ್ತ ಜನರು ಹೋಗುವುದನ್ನು ನಿರ್ಬಂಧಿಸಲಾಗಿದೆ. 150 ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ವೆಲ್ಲೆಸ್ಲಿ ಸೇತುವೆಯ ಮೇಲೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ರಭಸವಾಗಿ ಹರಿಯುತ್ತಿರುವ ಕಾವೇರಿ ನದಿ ವೆಸ್ಲಿ ಸೇತುವೆಯ ಕಲ್ಲಿನ ಕಂಬವನ್ನು ಸೀಳಿ ಮುನ್ನುಗ್ಗುವ ದೃಶ್ಯ ರಮಣೀಯವಾಗಿದೆ. ಇದಲ್ಲದೆ ಗೋಸಾಯ್‍ಘಾಟ್, ನಿಮಿಷಾಂಬ ದೇವಾಲಯದ ಬಳಿ ಹಾಗೂ ಕರಿಘಟ್ಟದ ಸೇತುವೆಯ ಮೇಲೂ ಜನರು ಅಧಿಕ ಸಂಖ್ಯೆಯಲ್ಲಿ ಕಾವೇರಿ ನದಿ ನೋಡಲು ಮುಗಿ ಬೀಳುತ್ತಿದ್ದಾರೆ.

ಸೆಲ್ಫಿ ಕ್ರೇಜ್: ಉಕ್ಕಿ ಹರಿಯುತ್ತಿರುವ ಜೀವನದಿ ಕಾವೇರಿಯನ್ನು ನೋಡಲು ಬರುತ್ತಿರುವ ಜನರು ರಭಸವಾಗಿ ಹರಿಯುತ್ತಿರುವ ನೀರಿನ ದೃಶ್ಯ ಕಾಣುವಂತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಇದು ಪೊಲೀಸರಿಗೆ ತೀವ್ರ ತಲೆನೋವಾಗಿ ಪರಿಣಮಿಸುತ್ತಿದೆ. ಅದರಲ್ಲಿಯೂ ಕಾಲೇಜು ವಿದ್ಯಾರ್ಥಿಗಳು, ಯುವ ಸಮೂಹ ಬೋರ್ಗರೆಯುವ ಕಾವೇರಿ ನದಿಯ ಮುಂದೆ ಸೆಲ್ಫಿ ತೆಗೆದುಕೊಂಡು ಚೆಲ್ಲಾಟವಾಡುತ್ತಿರುವ ದೃಶ್ಯ ಕಂಡು ಬಂದಿತು.

ಇನ್ನು ನೋಡುತ್ತೀವೋ ಇಲ್ಲವೋ: ಕಳೆದ ನಾಲ್ಕೈದು ವರ್ಷದಿಂದ ಬರಗಾಲ, ಮಳೆಯ ಕೊರತೆಯಿಂದಾಗಿ ಕಾವೇರಿಯ ಒಡಲು ಬರಿದಾಗಿತ್ತು. ಅಲ್ಪ ಪ್ರಮಾಣದ ನೀರಷ್ಟೇ ನದಿಯಲ್ಲಿ ಹರಿದಿತ್ತು. ಆದರೆ ಕಳೆದ ಒಂದು ವಾರದಿಂದ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಯನ್ನು ಕಾಣಲು ಹಿರಿಯ ಜೀವಗಳು ಹಾತೊರೆಯುತ್ತಿವೆ. ಮಕ್ಕಳು, ಮೊಮ್ಮಕ್ಕಳೊಂದಿಗೆ ನದಿಯ ದಡದತ್ತ ಬಂದಿದ್ದ ಸಮೀಪದ ಗ್ರಾಮದ ಹಲವಾರು ಹಿರಿಯ ಜೀವಗಳು, ಇನ್ನೊಮ್ಮೆ ಇಂತಹ ದೃಶ್ಯ ನೋಡುತ್ತೀವೋ ಇಲ್ಲವೋ ಗೊತ್ತಿಲ್ಲ. ಅದಕ್ಕಾಗಿ ಬಂದಿದ್ದೇವೆ ಎಂದು ನಮಿಸುತ್ತಿದ್ದ ದೃಶ್ಯ ಕಂಡು ಬಂದಿತು.