ಬೆಂಗಳೂರಿನಲ್ಲಿ ನಮ್ಮದೇನು ಕೆಲಸ,  ನಮ್ಮ ಮೊಬೈಲ್ ಕರೆನ್ಸಿ ಖಾಲಿಯಾಗಿದೆ

ಬಸನಗೌಡ ಯತ್ನಾಳ ಮಾರ್ಮಿಕ ನುಡಿ

ವಿಜಯಪುರ, ಜ. 12-ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮದೇ ಶೈಲಿಯಲ್ಲಿ ಮತ್ತೆ ಚಾಟಿ ಬೀಸಿದ್ದಾರೆ. ವಿಜಯಪುರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರಿಗೆ ಕೃತಜ್ಞತಾ ಸಮಾವೇಶ ಜನಸೇವಕ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು.

ಈ ವೇಳೆ ಬೆಂಗಳೂರಿಗೆ ಹೋಗಲ್ವಾ? ಸಚಿವ ಸಂಪುಟದಲ್ಲಿ ಸೇರ್ಪಡೆಗೆ ಕರೆ ಬಂದಿದೆಯಾ? ಎಂಬ ಪ್ರಶ್ನೆಗೆ ಯತ್ನಾಳ್ ತಮ್ಮದೇ ಧಾಟಿಯಲ್ಲಿ ಮತ್ತೆ ಚಾಟಿ ಬೀಸಿದರು. ಬೆಂಗಳೂರಿನಲ್ಲಿ ನಮ್ಮದೇನೈತ್ರಿ ಕೆಲಸ. ನಮ್ಮ ಮೊಬೈಲ್ ಕರೆನ್ಸಿ ಖಾಲಿಯಾಗಿದೆ. ಎಲ್ಲಾ ಕರೆನ್ಸಿಯೇ ಕಟ್ ಆಗಿದೆ. ಏನ್ ಮಾಡೋದು ಎಂದು ಯತ್ನಾಳ್ ಚಾಟಿ ಬೀಸಿದರು.

ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸ್ಥಾನ ನೀಡುವ ಮೂಲಕ ಬಿಜೆಪಿ ಶಾಸಕರಲ್ಲಿ ಉಂಟಾಗಿರುವ ಅಸಮಾಧಾನ ಹೋಗಲಾಡಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿತ್ತು. ಆದರೆ, ಯತ್ನಾಳ್ ಅವರಿಗೆ ಈವರೆಗೂ ಕರೆ ಬಂದಿಲ್ಲ ಎಂದು ಯತ್ನಾಳ್ ಅವರೇ ಹೇಳುವ ಮೂಲಕ ಮತ್ತು ತಮ್ಮ ಮೊಬೈಲ್ ಕರೆನ್ಸಿ ಖಾಲಿಯಾಗಿದೆ ಎನ್ನುವ ಮೂಲಕ ಗೂಡಾರ್ಥದ ಹೇಳಿಕೆ ನೀಡಿದ್ದಾರೆ.

ಕಾಯಿರಿ ಎಂದ ಡಿಸಿಎಂ ಗೋವಿಂದ ಕಾರಜೋಳ: ಈ ಮಧ್ಯೆ ಕಾರ್ಯಕ್ರಮ ಮುಗಿದ ಬಳಿಕ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಗುತ್ತಾ ಎಂಬ ಪ್ರಶ್ನೆಗೆ ಸಿಗಬಹುದು ಎಂದು ಹೇಳಿದರು. ನಂತರ ನಾಳೆಯವರೆಗೆ ಕಾಯಿರಿ ಎಂದು ಹೇಳುವ ಮೂಲಕ ಯಾವುದೇ ಸ್ಪಷ್ಟ ಮಾಹಿತಿ ನೀಡದೆ ನಿರ್ಗಮಿಸಿದರು.

ಯತ್ನಾಳ್ ಬೆಂಬಲಿಗರಿಗೆ ನಿರಾಸೆ: ನಾಳೆ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಜನಸೇವಕ ಕಾರ್ಯಕ್ರಮವನ್ನು ತುರ್ತಾಗಿ ಮುಗಿಸಿದ ಡಿಸಿಎಂ ಗೋವಿಂದ ಕಾರಜೋಳ, ಸಚಿವ ವಿ. ಸೋಮಣ್ಣ ಮತ್ತು ಇತರ ಬಿಜೆಪಿ ಮುಖಂಡರು ಸಭೆಯಲ್ಲಿ ಕೇವಲ ನಾಲ್ಕು ಜನರಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸುಮಾರು 20 ನಿಮಿಷ ತಡವಾಗಿ ಆಗಮಿಸಿದ ಯತ್ನಾಳ್ ಕಾರ್ಯಕ್ರಮ ಆವರಣ ಪ್ರವೇಶಿಸುತ್ತಿದ್ದಂತೆ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಗ್ರಾ. ಪಂ. ಸದಸ್ಯರು ಕೇಕೆ ಹಾಕಿ, ಕರತಾಡನದ ಮೂಲಕ ಸ್ವಾಗತ ಕೋರಿದರು.

ಆದರೆ, ಯತ್ನಾಳ್ ಮಾತನ್ನು ಆಲಿಸಲು ಕುಳಿತಿದ್ದವರಿಗೆ ನಿರಾಸೆಯಾಯಿತು. ಕಾರ್ಯಕ್ರಮ ದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಸಚಿವ ವಿ.ಸೋಮಣ್ಣ, ಬಿಜೆಪಿ ರಾಜ್ಯ ಕಾರ್ಯದರ್ಶಿ ತುಳಸಿ ಮುನಿರಾಜು, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್, ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತ್ರ ಮಾತನಾಡಿದರು. ಆದರೆ, ಯತ್ನಾಳ್ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರಿಗೆ ವೇದಿಕೆಯ ಮೇಲೆ ಮಾತನಾಡಲು ಅವಕಾಶ ಇರಲಿಲ್ಲ. ಡಿಸಿಎಂ ಮತ್ತು ಸಚಿವ ವಿ.ಸೋಮಣ್ಣ ತುರ್ತಾಗಿ ಬೆಂಗಳೂರಿಗೆ ತೆರಳಬೇಕಿದ್ದರಿಂದ ಸಭೆಯಲ್ಲಿ ಚುಟುಕು ಭಾಷಣ ಮಾಡಿ ನಿರ್ಗಮಿಸಿದರು. ಹೀಗಾಗಿ ಬಿಜೆಪಿ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಭಾಷಣಕ್ಕೆ ಕಾತರರಾಗಿದ್ದ ಯತ್ನಾಳ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರಿಗೆ ನಿರಾಸೆಯಾಯಿತು