ಸಂವಿಧಾನದ ವಿಶೇಷ ಸ್ಥಾನಮಾನ ದೊರೆತಾಗ ಮಾತ್ರ ಕೊಡವರ ಸಂಪ್ರದಾಯ ಉಳಿಯಲು ಸಾಧ್ಯ

ಮಡಿಕೇರಿ, ಆ.20- ಕೊಡವರ ಪದ್ಧತಿ, ಸಂಪ್ರದಾಯ, ಭೂಮಿ ಮತ್ತು ಆಚಾರ ವಿಚಾರಗಳು ಉಳಿಯಬೇಕಿದ್ದಲ್ಲಿ ಸಂವಿಧಾ ನದ ಆರ್ಟಿಕಲ್ 371(ಕೆ) ಅಡಿಯಲ್ಲಿ ವಿಶೇಷ ಸ್ಥಾನಮಾನಗಳು ದೊರೆಯಬೇಕಿದೆ. ಆ ದಿಸೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಹೋರಾಟ ರೂಪಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕರೆ ನೀಡಿದ್ದಾರೆ.

ಮಡಿಕೇರಿ ಹೊರವಲಯದ ಮೂರ್ನಾಡು ಸಮೀಪದ ಖಾಸಗಿ ರೆಸಾರ್ಟ್‍ನಲ್ಲಿ ಆಯೋ ಜಿಸಲಾಗಿದ್ದ ಕೊಡವರ ಬೇಡಿಕೆಗಳು ಮತ್ತು ಹಕ್ಕೋತ್ತಾಯಗಳ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ಉಳಿಯಬೇಕಿದ್ದರೆ ಕೊಡವರ ಸಂಸ್ಕøತಿಯೂ ಉಳಿಯಬೇಕು ಎಂದು ಪ್ರತಿ ಪಾದಿಸಿದರು. ಸಂವಿಧಾನದ 371ರ ಆರ್ಟಿಕಲ್ ಅನ್ನು ದೇಶದ ವಿವಿಧ ರಾಜ್ಯಗಳಿಗೆ ನೀಡಲಾಗಿದ್ದು, ಅದು ಇಂದು ಕ್ರಮವಾಗಿ ಆರ್ಟಿಕಲ್ “371 ಜೆ”ವರೆಗೆ ತಲುಪಿದೆ. ಹೀಗಾಗಿ ಆರ್ಟಿಕಲ್ ‘371 ಕೆ’ ಅನ್ನು ಕೊಡವರಿಗೆ ನೀಡಬೇಕು. ಸಿಎನ್‍ಸಿ ತನ್ನ ಬೇಡಿಕೆಯಲ್ಲಿ ಇದನ್ನು ಕೂಡ ಸೇರಿಸಿಕೊಂಡು ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.

ಕೊಡವರ ಆಚಾರ, ವಿಚಾರ, ಪದ್ದತಿ, ಪರಂಪರೆಗಳು ಬುಡಕಟ್ಟು ಜನಾಂಗವನ್ನು ಹೋಲುತ್ತದೆ. ಹೀಗಾಗಿ ಆ ಸಮುದಾಯ ಬುಡಕಟ್ಟು ಸ್ಥಾನಮಾನಕ್ಕೂ ಅರ್ಹವಾಗಿದೆ. ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಲು 28 ಭಾಷೆಗಳು ಸಾಲುಗಟ್ಟಿ ನಿಂತಿವೆ. ಅದ ರಲ್ಲಿ ಕೊಡವ ಭಾಷೆಯೂ ಒಂದು ಎಂದು ಹೇಳಿದ ಬಿ.ಕೆ. ಹರಿಪ್ರಸಾದ್, ಸುದೀರ್ಘ ಹೋರಾಟದಿಂದ ಮಾತ್ರವೇ ಸಂವಿ ಧಾನದ ಎಲ್ಲಾ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಹೇಳಿದರು.

ಎಸ್.ಟಿ. ಸ್ಥಾನಮಾನದ ಬಗ್ಗೆ ಕೊಡವ ಸಮುದಾಯದವರು ಕೀಳರಿಮೆ ಹೊಂದ ಬೇಡಿ ಎಂದು ಸಲಹೆ ನೀಡಿದ ಅವರು, ಕೊಡವ ಸಂಸ್ಕøತಿಯನ್ನು ಗೌರವಿಸಿ ಬೆಂಬಲಿಸುವ ವ್ಯಕ್ತಿಗಳಿಗೆ ಮಾತ್ರವೇ ಮತ ನೀಡಿ ಎಂದು ಕರೆ ನೀಡಿದರು.

ರಾಜ್ಯ ಬುಡಕಟ್ಟು ಕುರುಬ ಸಂಘರ್ಷ ಸಮಿತಿ ಮುಖಂಡ, ಹೈಕೋರ್ಟ್ ವಕೀಲ ಲಕ್ಕವಳ್ಳಿ ಮಂಜುನಾಥ್ ಮಾತನಾಡಿ, ಕೊಡವ ರಿಗೆ ಸಂವಿಧಾನ ಬದ್ದ ಹಕ್ಕುಗಳು ದೊರಕಿ ಸಲು ಸಿಎನ್‍ಸಿ ಸಂಘಟನೆ ಸುದೀರ್ಘ ಹೋರಾಟ ಮಾಡುತ್ತಿದೆ. ಕೊಡವ ಸಮು ದಾಯದ ಜನಸಂಖ್ಯೆ ಕಡಿಮೆ ಇದೆ. ಆದರೆ ಕೊಡವರ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಹೋರಾಟದ ಹಾದಿ, ಗುರಿ ನಿಖರವಾಗಿಯೂ, ತೀಕ್ಷ್ಣವಾಗಿಯೂ ಸಂವಿಧಾನ ಬದ್ಧವಾಗಿಯೂ ಇದೆ. ಈ ಹೋರಾಟಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ ಎಂದರು.

ಬೆಂಗಳೂರು ಸಂತ ಜೋಸೇಫ್ ಕಾಲೇ ಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪರಂದಂಡ ಸೋಮಯ್ಯ ಮಾತನಾಡಿ, ಕೊಡವ ಸಮುದಾಯಕ್ಕೆ ಅದರದ್ದೇ ಆದ ಕೀರ್ತಿ ಇದೆ. ಕೊಡವ ಸಮುದಾಯ ಬುಡಕಟ್ಟು ಸ್ಥಾನಮಾನಕ್ಕೆ ಅರ್ಹವಾಗಿದೆ ಎಂದರು.

ಹೈಕೋರ್ಟ್ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಮಾತನಾಡಿ, ಕೊಡವರ ಕುಲ ಶಾಸ್ತ್ರ ಅಧ್ಯಯನವನ್ನು ಶೈಕ್ಷಣಿಕ, ಆರ್ಥಿಕ ಮಾನದಂಡದಲ್ಲಿ ಮಾಡಲಾಗಿತ್ತು. ಇದರಿಂದ ಕೊಡವರಿಗೆ ಸಂವಿಧಾನದ ಸೂಕ್ತ ಸ್ಥಾನ ಮಾನಗಳು ದೊರಕುತ್ತಿರಲಿಲ್ಲ. ಈ ಕಾರಣ ದಿಂದ ಹೈಕೋರ್ಟ್‍ನಲ್ಲಿ ದಾವೆ ಹೂಡಿ ಹೊಸದಾಗಿ ಕುಲಶಾಸ್ತ್ರ ಅಧ್ಯಯನಕ್ಕೆ ಬೇಡಿಕೆ ಮುಂದಿಟ್ಟು, ಅಧ್ಯಯನದ ನ್ಯೂನತೆ ಗಳನ್ನು ಕೋರ್ಟ್‍ನ ಗಮನಕ್ಕೆ ತರಲಾ ಗಿತ್ತು. ಈ ಕಾರಣದಿಂದ ಹಳೆಯ ವರದಿಯ ಜಾರಿಗೆ ನ್ಯಾಯಾಲಯ ತಡೆ ನೀಡಿ ಹೊಸದಾಗಿ ಅಧ್ಯಯನ ನಡೆಸಲು ಸೂಚಿಸಿದೆ ಎಂದು ಮಾಹಿತಿ ನೀಡಿದರು. ಕೊಡವರ ಕುಲಶಾಸ್ತ್ರ ಅಧ್ಯಯನ ನಡೆಸಲು ಹಿಂದೇಟು ಹಾಕುತ್ತಿ ರುವ ಹಿಂದಿನ ಮರ್ಮವೇನು ಎಂದು ಪ್ರಶ್ನಿ ಸಿದ ಪೊನ್ನಣ್ಣ, ಅದಕ್ಕಾಗಿಯೇ ಕೋರ್ಟ್ ಮೊರೆ ಹೋಗಲಾಗಿದೆ ಎಂದು ಹೇಳಿದರು. ಕೊಡವರ ಕೋವಿ ಹಕ್ಕು, ಎಸ್.ಟಿ. ಸ್ಥಾನ ಮಾನದ ಕುರಿತು ಕುತಂತ್ರ ನಡೆಸಲಾಗು ತ್ತಿದೆ ಎಂದು ಅವರು ಆರೋಪಿಸಿದರು.

ಸಿಎನ್‍ಸಿ ಸಂಚಾಲಕ ನಂದಿನೆರವಂಡ ನಾಚಪ್ಪ ಮಾತನಾಡಿ, ಕೊಡವ ಲ್ಯಾಂಡ್, ಕೊಡವ ಭಾಷೆ, ಪದ್ದತಿ, ಪರಂಪರೆ, ಆಚಾರ ವಿಚಾರಗಳು ಸಂವಿಧಾನದ ಭದ್ರತೆಗೆ ಒಳಪಡ ಬೇಕು. ಬೇಟೆ ಮತ್ತು ಯುದ್ದವನ್ನೇ ಬದುಕ ನ್ನಾಗಿಸಿದ ಈ ಕೊಡವ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ದೊರಕಲೇಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭ ಕೊಡವರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಬಿ.ಕೆ. ಹರಿಪ್ರಸಾದ್ ಮತ್ತು ಎ.ಎಸ್. ಪೊನ್ನಣ್ಣ ಅವರಿಗೆ ‘ಕೊಡವ ರತ್ನ’ ಬಿರುದು, ಪಿ.ಎಸ್.ಸೋಮಯ್ಯ ಹಾಗೂ ಲಕ್ಕವಳ್ಳಿ ಮಂಜುನಾಥ್ ಅವರುಗಳಿಗೆ ನೆನ ಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾ ಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಬಿ.ಕೆ. ಹರಿಪ್ರಸಾದ್ ಮತ್ತು ಗಣ್ಯರು ಬಾಳೆ ಕಡಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವ್ಯಾಲಿ ಡ್ಯೂ ಕಲಾ ತಂಡ ಕೊಡವ ಸಾಂಪ್ರ ದಾಯಿಕ ಕೋಲಾಟ್, ಚೌರಿಯಾಟ್, ಕತ್ತಿಯಟ್ ನೃತ್ಯಗಳ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಕಾಳಪಂಡ ರವಿ ತಮ್ಮಯ್ಯ, ಐಲಪಂಡ ಪುಷ್ಪ ಪೂಣಚ್ಚ, ಪುಲ್ಲೇರ ಸ್ವಾತಿ, ಚಂಬಂಡ ಜನತ್ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಕೊಡವ ಕೊಡವತಿಯರು ಹಾಜರಿದ್ದರು.