ಮಹಿಷಾ ದಸರಾ ವಿರೋಧಿಸಲು ಇವರ್ಯಾರು?

ಮೈಸೂರು,ಸೆ.15(ಪಿಎಂ)-ಮಹಿಷಾ ದಸರಾ ಆಚರಣೆಗೆ ತಡೆ ಕೋರಿ ಬಿಜೆಪಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿ ಸಿದ ಹೋರಾಟಗಾರ ಪ.ಮಲ್ಲೇಶ್, ಹೀಗೆ ವಿರೋಧ ಮಾಡು ವುದು ಏಕೆ? ಮೈಸೂರು ಇವರ ಆಸ್ತಿಯೇ? ಎಂದು ಕಿಡಿಕಾರಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ದೇಶದ ಪ್ರತಿ ಪ್ರಜೆಗೆ ಒಂದು ಸಿದ್ಧಾಂತಕ್ಕೆ ಬದ್ಧವಾಗಿರುವ ಹಕ್ಕು ಇದ್ದೇ ಇರುತ್ತದೆ. ಮತ್ತೊಬ್ಬರು ಆ ಸಿದ್ಧಾಂತ ಒಪ್ಪದೇ ಇರಬಹುದು. ಅಹಿಂಸಾತ್ಮಕವಾಗಿ ಯಾರಿಗೂ ತೊಂದರೆ ಕೊಡದೇ ಆಚರಿಸಿದರೆ ಅದಕ್ಕೆ ವಿರೋಧ ಮಾಡುವುದು ಏಕೆ? ಮಹಿಷಾಸುರನ ಬಗ್ಗೆ ಚರಿತ್ರೆಯೇ ಇದೆ. ಬಿಜೆಪಿಯವರು ಹಿಂದೂ ಧರ್ಮ ಪ್ರಚಾರ ಮೂಲಕ ಇಡೀ ದೇಶದಲ್ಲಿ ಆರ್‍ಎಸ್‍ಎಸ್ ಪ್ರೇರಿತ ಸರ್ಕಾರ ಸ್ಥಾಪಿಸಲು ಹೊರಟಿದ್ದಾರೆ. ಇದರ ವಿರುದ್ಧ ಇನ್ನು ಆರು ತಿಂಗಳಲ್ಲಿ ಇಡೀ ದೇಶ ಎದ್ದು ನಿಲ್ಲಲಿದೆ ಎಂದು ಹೇಳಿದರು.

ಎನ್‍ಟಿಎಂ ಶಾಲೆ ಹೋರಾಟ ಸಂಬಂಧ ತಮ್ಮ ವಿರುದ್ಧವೇ ಕೆಲ ಆರೋಪ ಬಂದಿವೆ. ಹೋರಾಟದಲ್ಲಿ ಒಡಕು ಉಂಟಾಗಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾಲಿಗೆ ಕಳೆದು ಕೊಂಡವರಿಗೆ ಏನು ಹೇಳುವುದು? ನಾನು ಮೈಸೂರಿನ ಸಾರ್ವಜನಿಕ ಜೀವನಕ್ಕೆ ಬಂದು 60 ವರ್ಷವಾಯಿತು. ಈವರೆಗೆ ಯಾರೂ ಬೆರಳು ಮಾಡಿ ತೋರಿಸಿಲ್ಲ ಎಂದರು. ಹೋರಾಟಕ್ಕೆ ಸಂಬಂಧಿಸಿದಂತೆ ಇವರನ್ನೆಲ್ಲಾ ಮುಖ್ಯಮಂತ್ರಿಗಳ ಬಳಿ ಕರೆದು ಕೊಂಡು ಹೋಗಬೇಕಿತ್ತಂತೆ. ಆದರೆ ಅದು ಆಗಲಿಲ್ಲ. ನನ್ನ ವಿರುದ್ಧ ಮಾತನಾಡಿದವರ ಪೈಕಿ ಮಹೇಶ್ ಚಂದ್ರ ಗುರು ಒಂದು ಸಾರಿಯಷ್ಟೇ ಶಾಲೆ ಪರ ಹೋರಾಟಕ್ಕೆ ಬಂದಿದ್ದರು. ಇವರೆಲ್ಲಾ ಇಂದು ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.