ಆಳುವವರು ಯಾರಿದ್ದರೂ ಇವರ ಬಾಳೆಲ್ಲಾ ಗೋಳು!

ಹನೂರು, ಜೂ.30(ಸೋಮು)-ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಆದರೆ, ಸ್ವಾತಂತ್ರ್ಯದ ಬಳುವಳಿ ಮಾತ್ರ ಬಡ ಜನರ ಬಾಗಿಲಿಗೆ ಬಂದಿಲ್ಲ ಎಂಬುದು ದುರಾದೃಷ್ಟಕರ ಸಂಗತಿ.

ಅರಣ್ಯ ಪ್ರದೇಶದ ಗ್ರಾಮಗಳ ಜನರು ಇನ್ನೂ ಸಮರ್ಪಕ ರಸ್ತೆ ಸಂಪರ್ಕ ಹಾಗೂ ಸಾರಿಗೆ ಸೌಕರ್ಯವಿಲ್ಲದೆ ನರಳುತ್ತಿದ್ದಾರೆ. ಅವರಿಗೆ ಇದುವರೆಗೆ ದೊರೆತಿರುವುದು ಬರೀ ಭರವಸೆ… ಭರವಸೆ… ಅಷ್ಟೇ. ನಿತ್ಯವೂ ಒಂದಲ್ಲಾ ಒಂದು ಕಾರಣಕ್ಕೆ ಇಂತಹ ಗ್ರಾಮಗಳ ಗ್ರಾಮಸ್ಥರು ಸಂಕಷ್ಟ ಪರಿಸ್ಥಿತಿಗೀಡಾಗುತ್ತಿದ್ದಾರೆ. ಆಹಾರ ಪದಾರ್ಥ ಗಳು, ಔಷಧೋಪಚಾರಕ್ಕಾಗಿ ಮೈಲಿಗಳವರೆಗೆ ಕಾಲು ನಡಿಗೆಯಲ್ಲೇ ಸಾಗಬೇಕಿದೆ. ಅದು ದುರ್ಗಮ ಹಾದಿಯಲ್ಲಿ. ಕಾಡು ಮೃಗಗಳ ದಾಳಿಯ ಭೀತಿಯ ನಡುವೆ ತತ್ತರಿಸಿ ಹೋಗುತ್ತಿದ್ದಾರೆ. ಅದರಲ್ಲೂ ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಪರಿಸ್ಥಿತಿ ಹೇಳತೀರದಾಗಿದೆ. ಅನಾರೋಗ್ಯಕ್ಕೀಡಾದವರ ಪರಿಸ್ಥಿತಿಯಂತೂ ದೇವರೇ ಬಲ್ಲ. ನಿನ್ನೆ ಸರಿರಾತ್ರಿ ಹೆರಿಗೆ ನೋವಿನಿಂದ ಗರ್ಭಿಣಿ ಯೊಬ್ಬರು ನರಳಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲದೆ, ಕೊನೆಗೆ ಡೋಲಿಯಲ್ಲೇ ಗ್ರಾಮಸ್ಥರು ಸಾಗಿಸಿ ಆಸ್ಪತ್ರೆಗೆ ಸೇರಿಸಿ ಬಡಜೀವ ಬದುಕಿಸಿದ್ದಾರೆ. ಈ ಘಟನೆ ನಡೆದಿರುವುದು ಮಹದೇಶ್ವರ ಬೆಟ್ಟ ದಟ್ಟಾರಣ್ಯದ ದೊಡ್ಡಾಣೆ ಗ್ರಾಮದಲ್ಲಿ.

ಹೆರಿಗೆ ನೋವಿನಿಂದ ನರಳುತ್ತಿದ್ದ ತುಂಬು ಗರ್ಭಿಣಿಯನ್ನು ಗ್ರಾಮಸ್ಥರೇ 8 ಕಿಮೀ ದೂರ ಬಟ್ಟೆಯ ಡೋಲಿಯಲ್ಲಿ ಹೊತ್ತು ಸಾಗಿ ಆಸ್ಪತ್ರೆಗೆ ದಾಖಲಿಸಿದ ದಯಾನೀಯ ಸ್ಥಿತಿ ವರದಿಯಾಗಿದೆ. ಗ್ರಾಮದ ವಾಸಿ ತುಂಬು ಗರ್ಭಿಣಿ ಶಕುಂತಲಾ ಅವರಿಗೆ ಸರಿರಾತ್ರಿ 2 ಗಂಟೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ ಅರಣ್ಯ ಇಲಾಖೆ ಇತ್ತೀಚೆಗೆ ಆರಂಭಿಸಿರುವ ಜನವನ ಸಾರಿಗೆ ಸಿಬ್ಬಂದಿಗೆ ಗ್ರಾಮಸ್ಥರು ಕರೆ ಮಾಡಿದ್ದಾರೆ. ಆದರೆ ಅವುಗಳ ಚಾಲಕರು, ಅಧಿಕಾರಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಕೊನೆಗೆ ದೊಡ್ಡಾಣೆಯಿಂದ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗರ್ಭಿಣಿಯನ್ನು ಡೋಲಿಯಲ್ಲಿ ಹೊತ್ತು ತಂದಿದ್ದಾರೆ. ಆರೋಗ್ಯ ಕೇಂದ್ರ ತಲುಪಲು ಇವರು ಪಟ್ಟ ಪಾಡು ಅಷ್ಟಿಷ್ಟಲ್ಲ, ದಟ್ಟಾರಣ್ಯದಲ್ಲಿ 8 ಕಿಮೀ ದೂರ ಗರ್ಭಿಣಿಯನ್ನು ಹೊತ್ತು ಚಳಿಯಲ್ಲಿ ನಡುಗುತ್ತಾ ಸಾಗಿ ಕೊನೆಗೆ ಆಸ್ಪತ್ರೆಗೆ ತಲುಪಿದ್ದಾರೆ. ಮಧ್ಯರಾತ್ರಿ 2 ಗಂಟೆಗೆ ಹೊರಟು ಬೆಳಗ್ಗೆ 6 ಗಂಟೆಗೆ ಆಸ್ಪತ್ರೆಗೆ ತಲುಪಿದ ಅವರೆಲ್ಲಾ ಸುಸ್ತಾಗಿ, ಒಂದು ಕಡೆ ಕುಳಿತು ಧಣಿವಾರಿಸಿಕೊಂಡಿದ್ದಾರೆ. ಮಹದೇಶ್ವರಬೆಟ್ಟ ಅರಣ್ಯದ ಗ್ರಾಮಸ್ಥರ ಅನುಕೂಲಕ್ಕಾಗಿ ಅರಣ್ಯ ಇಲಾಖೆ ಜನವನ ಸಾರಿಗೆ ವ್ಯವಸ್ಥೆ ಜಾರಿಗೊಳಿಸಿದೆ. ಆ ಮೂಲಕ ಗರ್ಭಿಣಿಯರು, ಅನಾರೋಗ್ಯಪೀಡಿತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ತುರ್ತು ಬಳಕೆಗೆ ಕಲ್ಪಿಸುವುದಾಗಿ ಹೇಳಿಕೊಂಡಿದೆ. ಆದರೆ ಇಂತಹ ಸಂಕಷ್ಟಕ್ಕೆ ಜನವನ ಸಾರಿಗೆ ಸೌಲಭ್ಯ ಇದ್ದೂ ಇಲ್ಲದಂತಾಗಿದೆ. ಇನ್ನು ಮುಂದಾದರೂ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಹೊಸ ಸಾರಿಗೆ ಸೌಕರ್ಯ ಸಾರ್ಥಕವಾಗುವಂತೆ ಕ್ರಮ ಕೈಗೊಳ್ಳಲಿ ಎಂದು ದೊಡ್ಡಾಣೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.