ಆಡಳಿತದಲ್ಲಿ ಹಸ್ತಕ್ಷೇಪ ಮಾಡಲ್ಲ

  • ರಾಜ್ಯ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ
  • ಕುಮಾರಸ್ವಾಮಿ ‘ಟಚ್’ ಹೇಳಿಕೆ ಅರ್ಥ ಗೊತ್ತಿಲ್ಲ
  •  ಮತ್ತೊಂದು ಬಜೆಟ್‍ನ ಅವಶ್ಯಕತೆ ಇಲ್ಲ

ಬೆಂಗಳೂರು: ಸರ್ಕಾರದ ಆಡಳಿತಾತ್ಮಕ ವಿಷಯ ದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.

ತಾವು ಮಂಡಿಸಿರುವ 2018-19ನೇ ಸಾಲಿನ ಮುಂಗಡ ಪತ್ರದಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳಿದ್ದು, ಅವುಗಳನ್ನೇ ಮುಂದುವರೆಸಬೇಕು. ಒಂದು ವರ್ಷ ನನ್ನನ್ನು ಯಾರೂ ಟಚ್ ಮಾಡಲಾಗದು ಎಂಬ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿಕೆ ಬಗ್ಗೆ ಅವರನ್ನೇ ಕೇಳಿ. ಅವರ ಹೇಳಿಕೆ ನನಗೆ ಅರ್ಥ ಆಗಿಲ್ಲ. ಅರ್ಥ ಆಗುವುದೂ ಬೇಡ ಎಂದು ಮಾರ್ಮಿಕವಾಗಿ ನುಡಿದರು.

ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಯ್ಕೆ ಸಂಬಂಧ ವರಿಷ್ಠರು ತೀರ್ಮಾನಿಸಲಿದ್ದಾರೆ, ನನಗೆ ಈ ಬಗ್ಗೆ ಆಸಕ್ತಿ ಇಲ್ಲ. ಸಂಪುಟ ವಿಸ್ತರಣೆ ಈಗಲೇ ಆಗುವುದಿಲ್ಲ, ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಬಳಿಕ ಆಗಲಿದೆ. ಲೋಕಸಭೆ ಚುನಾವಣೆಗೆ ಸಿದ್ಧಗೊಳ್ಳಲು ಈಗ ರೆಸ್ಟ್‍ಗಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದರು.

2018-19 ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, ಮತ್ತೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಅಗತ್ಯವಿಲ್ಲ. ಈಗ ಘೋಷಿಸಿರುವ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಬೇಕು. ಪರಿಶಿಷ್ಟ ಜಾತಿ, ಪಂಗಡದ ನೌಕರರಿಗೆ ಮುಂಬಡ್ತಿ ವಿಧೇಯಕಕ್ಕೆ ಅಂಕಿತ ಹಾಕಿರುವುದಕ್ಕೆ ರಾಷ್ಟ್ರಪತಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಿದ್ದರಾಮಯ್ಯ ಹೇಳಿದರು.