‘ವಿಶ್ವ ಶ್ರವಣ ದಿನ’ ಕಿವಿ ಆರೈಕೆ ಕುರಿತು ಜನಜಾಗೃತಿ

ಮೈಸೂರು,ಮಾ.25(ಎಂಟಿವೈ)- `ವಿಶ್ವ ಶ್ರವಣ ದಿನ’ ಹಿನ್ನೆಲೆಯಲ್ಲಿ ಕಿವಿ ಆರೈಕೆ ಕುರಿತಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವಿವಿಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮೈಸೂರಿನ ನಜರ್‍ಬಾದ್‍ನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಿಂದ ಜಾಥಾ ನಡೆಸಿ ಜನಜಾಗೃತಿ ಮೂಡಿಸಿದರು.

ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್ ಚಾಲನೆ ನೀಡಿದರು. ನಜರಬಾದ್‍ನ ವಿವಿಧ ರಸ್ತೆಗಳಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಭಿತ್ತಿ ಫಲಕ ಪ್ರದರ್ಶಿಸಿ ಗಮನ ಸೆಳೆದರು.

ಕಿವಿಯ ಸೋಂಕಿಗೆ ಆರಂಭದಲ್ಲಿಯೇ ಚಿಕಿತ್ಸೆ ಪಡೆಯಿರಿ. ತರಬೇತಿ ಪಡೆಯದ ವ್ಯಕ್ತಿ ಅಥವಾ ರಸ್ತೆಬದಿ ಮಾರಾಟಗಾರ, ನಕಲಿ ವೈದ್ಯರಿಂದ ಕಿವಿ ಸ್ವಚ್ಛಗೊಳಿಸುವು ದನ್ನು ಕೈಬಿಡಿ. ಟಿ.ವಿ, ರೇಡಿಯೊ, ಪಟಾಕಿ ಶಬ್ದಗಳು, ಜೋರಾದ ಸಂಗೀತ ಇತ್ಯಾದಿ ಗಳಿಂದ ನಿಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಿ. ಕಿವಿಗಳಿಗೆ ಕೊಳಕು ನೀರು ಪ್ರವೇಶಿಸುವುದನ್ನು ತಡೆಯಿರಿ ಮತ್ತು ನಿಮ್ಮ ಕಿವಿಯಲ್ಲಿ ಎಣ್ಣೆ ಅಥವಾ ಯಾವುದೇ ತೀಕ್ಷ್ಣ ವಸ್ತುಗಳು, ಬೆಂಕಿಕಡ್ಡಿಗಳನ್ನು ಕಿವಿ, ಮೂಗಿಗೆ ಹಾಕದಿರಿ ಎಂದು ಜಾಗೃತಿ ಮೂಡಿಸಲಾಯಿತು.

ಇದೇ ವೇಳೆ ಎನ್‍ಪಿಪಿಸಿಡಿ ನೋಡಲ್ ಅಧಿಕಾರಿ ಡಾ.ರವಿ ಮಾತನಾಡಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಿಂದ ನಮ್ಮ ಜಿಲ್ಲೆಯಲ್ಲಿ ಪ್ರತಿ ತಿಂಗಳು 8 ವರ್ಷದಿಂದ 24 ವರ್ಷದವರೆಗೆ ಶ್ರವಣ ಪರೀಕ್ಷೆ ಮಾಡಲಾಗುತ್ತಿದೆ. ನಾಚನಹಳ್ಳಿ ಪಾಳ್ಯದಲ್ಲಿ ಡೆಕ್ ಸಂಸ್ಥೆಯಲ್ಲಿ ಮಕ್ಕಳ ಶ್ರವಣ ದೋಷ ತಪಾಸಣೆ ಮಾಡಲಾಗುತ್ತಿದೆ. ವಿಶೇಷವಾಗಿ ಕಾಂಕ್ಲಿಯರ್ ಇಂಪ್ಲಾಂಟೇಷನ್ ಶಸ್ತ್ರಚಿಕಿತ್ಸೆಗೆ 3-4 ಲಕ್ಷ ರೂ.ಗಳಾಗುತ್ತವೆ. ಅದನ್ನು ಕೃತಕವಾಗಿ ಮಾಡಲಾಗುತ್ತಿದೆ. ಕಿವಿಯ ಒಳಗಡೆಗೆ ಅದನ್ನು ಇಂಪ್ಲಾಟೇಷನ್ ಮಾಡಲಾಗುತ್ತಿದೆ. ಕಳೆದ ವರ್ಷ 4 ಮಂದಿಗೆ ಇಂಪ್ಲಾಟೇಷನ್ ಮಾಡಿದ್ದೆವು. ಈ ಬಾರಿ ಕೊರೊನಾ ಇರುವುದ ರಿಂದ ಒಬ್ಬರಿಗೆ ಮಾಡಿದ್ದೇವೆ. ಕಿವಿ ಸೋರುವಿಕೆ, ಕಿವುಡುತನವಿರುವ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಸರಿಯಾದ ಸಮಯದಲ್ಲಿ ಇದಕ್ಕೆ ಚಿಕಿತ್ಸೆ ಪಡೆಯಬೇಕು ಎಂದರು. ಜಿಲ್ಲಾ ಶ್ರವಣದೋಷ ತಜ್ಞೆ ಡಾ.ಸಿ.ವಿ.ವಿನೀತ ಇತರರು ಉಪಸ್ಥಿತರಿದ್ದರು.