ಅರಮನೆಯಲ್ಲಿ ಯದುವೀರ್ ಸರಸ್ವತಿ ಪೂಜೆ

ಮೈಸೂರು, ಅ.12(ಎಂಟಿವೈ)-ನವರಾತ್ರಿ ಹಿನ್ನೆಲೆಯಲ್ಲಿ ಮಂಗಳವಾರ ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿ ಪೂಜೆ ನೆರವೇರಿಸಿದರು.

ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಆಶ್ವಯುಜ ಮಾಸ, ಶುಕ್ಲ ಪಕ್ಷ ಸಪ್ತಮಿ ದಿನವಾದ ಮಂಗಳವಾರ ಬೆಳಗ್ಗೆ 10.57ರಿಂದ 11.05ರವರೆಗೆ ಸಂದ ಧನುರ್ ಲಗ್ನದಲ್ಲಿ ಅವರು ಸರಸ್ವತಿ ಪೂಜೆ ನೆರವೇರಿಸಿದರು. ಸರಸ್ವತಿ ಪೂಜೆ ಆರಂಭಕ್ಕೂ ಮುನ್ನ ರಾಜ ವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ಕನ್ನಡಿ ತೊಟ್ಟಿಗೆ ಆಗಮಿಸಿ ನಮಸ್ಕರಿಸಿದರು. ಬಳಿಕ ರಾಜಪುರೋಹಿತರೊಂದಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗಣಪತಿ ಪೂಜೆ, ಚಾಮುಂಡೇಶ್ವರಿ ಪೂಜೆ ನೆರವೇರಿಸಿದರು. ನಂತರ ಕನ್ನಡಿ ತೊಟ್ಟಿ ಯಲ್ಲಿ ಪೂಜೆಗೆ ಇಡಲಾಗಿದ್ದ, ವೀಣೆ, ತಬಲ, ತಾಳೆಗರಿಗಳು, ವಿವಿಧ ಗ್ರಂಥಗಳಿಗೆ ಪೂಜೆ ಸಲ್ಲಿಸಿದರು. ಅಲ್ಲದೆ, ಸರಸ್ವತಿ ಫೋಟೊಗೆ ಪುಷ್ಪಾರ್ಚನೆ ಮಾಡಿ, ಮಂಗಳಾರತಿ ಬೆಳಗಿದರು.

ಸರಸ್ವತಿ ಪೂಜೆ ಅಂಗವಾಗಿ ಚಾಮುಂಡಿಬೆಟ್ಟದ ಚಾಮುಂಡೇ ಶ್ವರಿ ದೇವಾಲಯದಿಂದ ಪ್ರಧಾನ ಆಗಮಿಕ ಡಾ.ಎನ್.ಶಶಿ ಶೇಖರ್ ದೀಕ್ಷಿತ್ ಅವರು ಪ್ರಸಾದ ತಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ನೀಡಿದರು.

ಕಾಳರಾತ್ರಿ: ಇಂದು ಸಂಜೆ ಅರಮನೆಯಲ್ಲಿ ಕಾಳರಾತ್ರಿ ಉತ್ಸವ ನೆರವೇರಿತು. ಎಮ್ಮೆಯ ಗೊಂಬೆಯನ್ನು ಮಾಡಿ, ಅದರ ತಲೆ ಭಾಗಕ್ಕೆ ಪಟಾಕಿ ಇಟ್ಟು ಸಿಡಿಸಲಾಯಿತು. ಇದರಿಂದ ಎಮ್ಮೆಯ ತಲೆ ಭಾಗ ಬೇರ್ಪಟ್ಟಾಗ ಕುಂಕುಮದ ನೀರು ಸುರಿದು ಚಾಮುಂಡೇಶ್ವರಿ ದೇವಿಯ ಫೋಟೊ ಇಟ್ಟು, ಮಹಿಷ ಮರ್ಧಿನಿ ಸ್ವರೂಪದಲ್ಲಿ ಪೂಜೆ ಸಲ್ಲಿಸಲಾಯಿತು.