ಯಡಿಯೂರಪ್ಪ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡುತ್ತಾರೆ: ನಿರಾಣಿ

ಬೆಂಗಳೂರು, ಫೆ.21- ಸಮಾಜದ ಬಹುದಿನ ಗಳ ಬೇಡಿಕೆಯಂತೆ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನ್ಯಾಯ ಒದಗಿಸಿ ಕೊಡಲಿದ್ದು, ಎಲ್ಲರೂ ವಿಶ್ವಾಸ ಇಡಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ್ ನಿರಾಣಿ ಹೇಳಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾ ಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ ದರು. ಸಿಎಂ ಯಡಿಯೂರಪ್ಪ ಅವರು ಸಮುದಾಯಕ್ಕೆ ನ್ಯಾಯ ಒದಗಿಸಿಕೊಡುವ ಭರವಸೆ ಕೊಟ್ಟಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕ ಎಂದರು. ಈಗಾಗಲೇ ಲಿಂಗಾಯಿತ ಪಂಚಮಸಾಲಿ ಸಮುದಾಯವನ್ನು 2-ಎಗೆ

ಸೇರ್ಪಡೆ ಮಾಡುವ ಕುರಿತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ ನೀಡಿದ್ದಾರೆ. ಆಯೋಗವು ಕೂಡ ಅಧ್ಯಯನ ನಡೆಸಿ ಸರ್ಕಾರದಕ್ಕೆ ವರದಿ ನೀಡಲಿದೆ ಎಂದರು.

ಸಮುದಾಯದ ಒತ್ತಾಸೆಯಂತೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಿಂದುಳಿದ ವರ್ಗವು ಘೋಷಿಸಿದ ನಂತರ ಕಾನೂನು ತೊಡಕಾಗಬಾರದೆಂಬ ಕಾರಣಕ್ಕಾಗಿ ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ ಲಿಂಗಾಯಿತ ಪಂಚಮಸಾಲಿ ಸಮಾಜವನ್ನು 2-ಎಗೆ ಸೇರಿಸಬೇಕೆಂಬುದು ಅವರ ಉದ್ದೇಶವಾಗಿದೆ. ಲಿಂಗಾಯಿತ ಪಂಚಮಸಾಲಿ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿದೆ ಎಂಬ ಒಂದೇ ಕಾರಣಕ್ಕೆ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಸಾಮಾನ್ಯ ವರ್ಗದಲ್ಲಿ ನಮ್ಮ ಸಮಾಜವನ್ನು 3-ಬಿಗೆ ಸೇರ್ಪಡೆ ಮಾಡಿದರು.

ಸಮುದಾಯದ ಒತ್ತಾಯದಂತೆ 2-ಎ ವರ್ಗಕ್ಕೆ ಸೇರಿಸಲು ಸರ್ವ ಪ್ರಯತ್ನ ನಡೆಸಿದರೂ ಕೆಲವು ತಾಂತ್ರಿಕ ಕಾರಣದಿಂದ ಸಾಧ್ಯವಾಗಲಿಲ್ಲ. ಪಂಚಮಸಾಲಿ ಸಮುದಾಯವನ್ನು 2-ಎಗೆ ಸೇರಿಸಬೇಕೆಂದು ಮೂರು ದಶಕಗಳಿಂದಲೂ ಹೋರಾಟ ನಡೆಯುತ್ತಿದೆ. ಡಾ. ಹನುಮನಾಳ ಅವರಿಂದ ಆರಂಭವಾದ ಈ ಹೋರಾಟ ಇದೀಗ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನಾನಂದ ಸ್ವಾಮೀಜಿ ಸುಮಾರು 708 ಕಿ.ಮೀ. ಪಾದಯಾತ್ರೆ ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿ ಉಂಟು ಮಾಡಿದ್ದಾರೆ ಎಂದು ಹೇಳಿದರು.

ಮುಂದಿನ ಪೀಳಿಗೆಯ ನಮ್ಮ ಮಕ್ಕಳಿಗೆ ಶೈಕ್ಷಣಿಕ ಮತ್ತು ಉದ್ಯೋಗಕ್ಕಾಗಿ ಅನುಕೂಲವಾಗಬೇಕೆಂಬ ಒಂದೇ ಕಾರಣಕ್ಕಾಗಿ ಈ ಬೃಹತ್ ಹೋರಾಟ ಆರಂಭವಾಗಿದೆ ಹೊರತು ನಾವೇನು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಅತಿದೊಡ್ಡ ಸಮುದಾಯವಾದ ಲಿಂಗಾಯಿತ ಪಂಚಮಸಾಲಿ ಸಮುದಾಯವು ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ ಸೇರಿದಂತೆ ಅನೇಕರು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ ಎಂದು ಸ್ಮರಿಸಿದರು. ನಮ್ಮ ಸಮುದಾಯವು ಮೂಲತಃ ರೈತಾಪಿ ವರ್ಗಕ್ಕೆ ಸೇರಿದೆ. ಕೆಲವರು ಸರ್ಕಾರಿ, ಅರೆಸರ್ಕಾರಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆರಳಣಿಕೆಯಷ್ಟು ಉದ್ಯಮಿದಾರರಾಗಿದ್ದು, 2-ಎಗೆ ಸೇರ್ಪಡೆ ಮಾಡಬೇಕೆಂದು ನಡೆಸುತ್ತಿರುವ ಹೋರಾಟ ಕಾನೂನುಬದ್ಧವಾಗಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.