ಅಂತಾರಾಷ್ಟ್ರೀಯ ಯೋಗ ದಿನ: ಐವರು ಸಾಧಕರಿಗೆ `ಯೋಗ ನಕ್ಷತ್ರ’ ಪ್ರಶಸ್ತಿ

ಮೈಸೂರು,ಜೂ.20(ಪಿಎಂ)-ಜಿಎಸ್‍ಎಸ್ ಯೋಗ ಪ್ರತಿಷ್ಠಾನ, ಮೈಸೂರು ಯೋಗ ಬಳಗದ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗ ಕ್ಷೇತ್ರದ ಐವರು ಹಿರಿ-ಕಿರಿಯ ಸಾಧಕರಿಗೆ `ಯೋಗ ನಕ್ಷತ್ರ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಯೋಗ ಸಾಧಕರಾದ ಹೆಚ್.ಜಿ.ಹಿರಣ್ಣಯ್ಯ, ಜಿ.ವೆಂಕಟೇಶ್, ಎಸ್.ಹರೀಶ್, ವಿನಾಯಕ ಹೊನ್ನಾವರ ಹಾಗೂ ಎನ್.ಆಶಾದೇವಿ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಎಸ್‍ಎಸ್ ಯೋಗ ಪ್ರತಿಷ್ಠಾನದ ಅಧ್ಯಕ್ಷ ಶ್ರೀಹರಿ ಮಾತನಾಡಿ, ಯೋಗ ಪರಂಪರೆ ಯಲ್ಲಿ ಮೈಸೂರು ವಿಶಿಷ್ಟ ಛಾಪು ಮೂಡಿಸಿದೆ. 2019ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಂದು ಮೈಸೂರಿನಲ್ಲಿ 70 ಸಾವಿರ ಯೋಗಾಸಕ್ತರು ಒಂದೆಡೆ ಸೇರಿ ಯೋಗ ಪ್ರದರ್ಶಿಸಿ ದರು. ಈ ಬಾರಿ ಕೊರೊನಾ ಭೀತಿ ಜನ ಒಂದೆಡೆ ಸೇರಲಾಗದಂತೆ ಮಾಡಿದೆ. ಜಿಲ್ಲೆಯ ಯೋಗಪಟುಗಳು, ಜನತೆ ಅಂಗಳ/ತಾರಸಿಯಲ್ಲೇ ಭಾನುವಾರ ಬೆಳಗ್ಗೆ ಯೋಗ ಪ್ರದರ್ಶನ ನೀಡಿ ಮೈಸೂರಿಗೆ ಖ್ಯಾತಿ ತರÀಬೇಕೆಂದು ಮನವಿ ಮಾಡಿದರು.

ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಕೊರೊನಾ ಸೋಂಕು ಭೀತಿ ಇಲ್ಲವಾಗಿದ್ದರೆ ಈ ಬಾರಿ ಮೈಸೂರಿನಲ್ಲಿ ಯೋಗ ದಿನ ಲಕ್ಷಕ್ಕೂ ಹೆಚ್ಚು ಮಂದಿ ಯೋಗ ಪ್ರದರ್ಶನ ನೀಡುತ್ತಿದ್ದರು. ಈ ಬಾರಿ ಪ್ರಧಾನಿ ಮೋದಿ ಅವರು ಮೈಸೂರಿಗೆ ಆಗಮಿಸುವ ನಿರೀಕ್ಷೆ ಇತ್ತು. ಆದರೆ ಕೊರೊನಾ ಈ ಎಲ್ಲಾ ನಿರೀಕ್ಷೆಗೂ ತಡೆಯೊಡ್ಡಿದೆ. ಮುಂದಿನ ದಿನಗಳಲ್ಲಾದರೂ ಮೈಸೂರಿಗೆ ಅಪೂರ್ವ ಅವಕಾಶ ಕೂಡಿ ಬರಲಿ ಎಂದು ಆಶಿಸಿದರು. ಕಸಾಪ ಜಿಲ್ಲಾ ಘಟಕ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ಯೋಗ ಅಸೋಸಿಯೇಷನ್ ಉಪಾಧ್ಯಕ್ಷ ಯೋಗ ಪ್ರಕಾಶ್, ಮೈಸೂರು ಯೋಗ ಬಳಗದ ಸಂಚಾಲಕರಾದ ಎಂ.ವಿ.ನಾಗೇಂದ್ರಬಾಬು, ಎನ್.ಅನಂತ ಮತ್ತಿತರರಿದ್ದರು.