ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

40 ರೂ. ಪೆಟ್ರೋಲ್ ಮಾರಾಟ, ಪ್ರಧಾನಿ ಮೋದಿ ವಿರುದ್ಧ ಘೋಷಣೆ
ಚಾಮರಾಜನಗರ:  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳಕ್ಕೆ ಕೇಂದ್ರದ ಬಿಜೆಪಿ ಸರ್ಕಾರವೇ ಕಾರಣ ಎಂದು ಆರೋಪಿಸಿ ನಗರದಲ್ಲಿ ಸೋಮ ವಾರ ಯುವ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಯಿತು.

ಚಾಮರಾಜೇಶ್ವರಸ್ವಾಮಿ ದೇವಸ್ಥಾನ ಮುಂಭಾಗ ಸಮಾವೇಶಗೊಂಡ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ತಳ್ಳುವ ಗಾಡಿಯಲ್ಲಿ ಪೆಟ್ರೋಲ್ ತುಂಬಿ ಕೊಂಡು ಭುವನೇಶ್ವರಿ ವೃತ್ತದವರೆಗೆ ಮೆರ ವಣಿಗೆ ನಡೆಸಿದರು. ಬಳಿಕ, ಲೀಟರ್ ಪೆಟ್ರೋಲ್ ಅನ್ನು 40 ರೂ.ಗೆ ಮಾರಾಟ ಮಾಡುವ ಜೊತೆಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ. ತೈಲ ಹಾಗೂ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಜನ ಸಾಮಾನ್ಯರ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ಜನವಿರೋಧಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಹೆಂಡದ ದೊರೆ ವಿಜಯಮಲ್ಯ ಹೊರ ದೇಶಕ್ಕೆ ಹೋಗುವಾಗ ಕೇಂದ್ರ ಸಚಿವ ಅರುಣ್‍ಜೇಟ್ಲಿ ಅವರ ಅನುಮತಿ ಪಡೆದಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಅರುಣ್ ಜೇಟ್ಲಿ ಹಾಗೂ ಬಿಜೆಪಿ ಸ್ಪಷ್ಟ ಉತ್ತರ ನೀಡ ಬೇಕು ಎಂದು ಆಗ್ರಹಿಸಿದರು.
ದಿನೇ-ದಿನೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳ ಆಗುತ್ತಿರುವುದಕ್ಕೆ ಕಡಿ ವಾಣ ಹಾಕಬೇಕು. ದರವನ್ನು ಈ ಕೂಡಲೇ ಕಡಿಮೆ ಮಾಡಬೇಕು. ಇಲ್ಲದಿದ್ದಲ್ಲಿ ಹೋರಾಟವನ್ನು ನಿರಂತರವಾಗಿ ನಡೆಸ ಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಚೇತನ್‍ದೊರೆರಾಜು, ರಾಜ್ಯ ಕಾರ್ಯದರ್ಶಿ ಶಿವಶಂಕರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನ್ನಾ, ಮುಖಂಡ ರಾದ ಸೈಯದ್ ಮುಸೆಜ್, ಗುರುಕಿರಣ್, ಹಾರೂನ್, ಶಾಹಿಲ್, ಮಾದೇಶ್, ಕೆಂಪ ರಾಜು, ವಿನಯ್, ಶಿವು, ದ್ವಾರಕೀಸ್, ರಂಗಸ್ವಾಮಿ, ಮಹದೇವಯ್ಯ, ಅಬ್ದುಲ್ಲಾ, ಸಂತೋಷ ಪಾಲ್ಗೊಂಡಿದ್ದರು.