ರೈತ ಮಹಿಳೆಗೆ ಅವಮಾನ ಸಿಎಂ ಕ್ಷಮೆ ಯಾಚಿಸುವಂತೆ  ಯುವ ಮೋರ್ಚಾ ಆಗ್ರಹ

ಮೈಸೂರು:  ರೈತ ಮಹಿಳೆ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಲಘುವಾಗಿ ಮಾತನಾಡಿದ್ದು, ಇದು ಮಹಿಳಾ ಸಮುದಾಯಕ್ಕೆ ಮಾಡಿದ ಅಪಮಾನ. ಇವರು ಈ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಮೈಸೂರು ನಗರಾಧ್ಯಕ್ಷ ಗೋಕುಲ್ ಗೋವರ್ಧನ್ ಆಗ್ರಹಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಮಹಿಳೆ ಜಯಶ್ರೀ ಕುರಿತಂತೆ ಮುಖ್ಯಮಂತ್ರಿಗಳು ಲಘುವಾಗಿ ಮಾತನಾಡಿದ್ದಾರೆ. ಆ ಮೂಲಕ ನಮ್ಮದು ರೈತರ ಹಿತ ಕಾಯುವ ಪಕ್ಷ ಎಂದು ಹೇಳಿಕೊಳ್ಳುವವರ ನಿಜಬಣ್ಣ ಬಯಲಾಗಿದೆ ಎಂದು ಟೀಕಿಸಿದರು. ರೈತ ಸಮುದಾಯದ ಬಗ್ಗೆ ಅಪಾರ ಕಾಳಜಿ ಇದೆ ಎಂದು ಹೇಳಿಕೊಳ್ಳುವ ಇವರು, ಬೆಳಗಾವಿಯ ಸುವರ್ಣ ಸೌಧದಲ್ಲಿ ರೈತರ ಸಮಸ್ಯೆಗೆ ಸಂಬಂಧಿಸಿದಂತೆ ನಿಗದಿಯಾಗಿದ್ದ ಸಭೆ ರದ್ದು ಮಾಡಿದ್ದು ಏಕೆ? ಎಂದು ಕಿಡಿಕಾರಿದರು. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿಗಳ ತವರು ಜಿಲ್ಲೆಯ ನಂಜನಗೂಡಿನ ಚಾಮಲಾಪುರ ಹುಂಡಿಯಲ್ಲಿ ಹಾಡುಹಗಲೇ 12 ವರ್ಷದ ಬಾಲಕಿಯನ್ನು ಅತ್ಯಾಚಾರ ಗೈದು ಕೊಲೆ ಮಾಡಲಾಗಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು. ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಕೆ.ದೇವರಾಜ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್, ಭರತ್ ರಾಮಸ್ವಾಮಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.