ಅಧಿಕಾರಿ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ

ವಿರಾಜಪೇಟೆ: ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ಭೂಮಾಪನ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಸಂಶುದ್ಧಿನ್ ಅವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಪ್ರತಿಭಟನೆ ನಡೆಸಿತು.

ಕಚೇರಿಯಲ್ಲಿ ಕೃಷಿಕರ ಕಡತಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಉಡಾಫೆ ಯಿಂದ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಸಂದರ್ಭ ಸಮಿತಿಯ ಅಧ್ಯಕ್ಷ ಕೆ.ಎಂ.ಕುಶಾಲಪ್ಪ ಮಾತನಾಡಿ, ತಾಲೂಕು ಕಚೇರಿಯಲ್ಲಿ ಎ.ಡಿ.ಎಲ್.ಆರ್.ಅಧಿಕಾರಿ ಸಂಶುದ್ಧಿನ್ ಅವರು ರೈತರುಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿಲ್ಲ. ನಮ್ಮ ಸಮಸ್ಯೆಗಳನ್ನು ಹೇಳಿದರು ಅವರಿಗೆ ಕೇಳುವಷ್ಟು ತಾಳ್ಮೆಯೂ ಇಲ್ಲ, ದೂರದ ಉರಿನಿಂದ ಬರುವ ರೈತರ ಕಡತಗಳನ್ನು ಹಲವು ಸಮಯದಿಂದ ಕಚೇರಿಯಲ್ಲಿಯೇ ಉಳಿಸಿಕೊಂಡಿದ್ದು, ಸಮಸ್ಯೆ ಹೇಳಿಕೊಂಡಲ್ಲಿ ಮನಬಂದಂತೆ ಮಾತನಾಡುವ ಈ ಅಧಿಕಾರಿಯನ್ನು ವರ್ಗಾಯಿಸುವಂತೆ ಒತ್ತಾಯಿಸಿ ತಾಲೂಕು ತಹಶಿಲ್ದಾರ್ ಗೋವಿಂದರಾಜು ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಾಡಿಚಂಡ ಯು.ಗಣಪತಿ, ಗ್ರಾಪಂ ಸದಸ್ಯ ಮಾಚಿಮಂಡ ಸುರೇಶ್, ಸಾರ್ವಜನಿಕ ಹಿತ ರಕ್ಷಣ ಸಮಿತಿಯ ಉಪಾಧ್ಯಕ್ಷ ಬಿ.ಬಿ.ಮಾಚಯ್ಯ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಬೋಪಯ್ಯ, ಖಜಾಂಚಿ ಎಂ.ಬಿ.ಲೋಕೇಶ್, ಕಾಳಮಂಡ ತಂಗಮ್ಮ, ಉದ್ದಪಂಡ ಅಯ್ಯಪ್ಪ, ಇಸ್ಮಾಯಿಲ್, ಕನ್ನಡಿಯಂಡ ಸುಭೇರ ಮುಂತಾದವರು ಭಾಗವಹಿಸಿದ್ದರು.