ಅ.21, ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಗೆ ನಿರ್ಧಾರ

ಚಾಮರಾಜನಗರ:  ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರ ಸಹಕಾರದೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜಯಂತಿ ಕಾರ್ಯಕ್ರಮವನ್ನು ಅ.21ರಂದು ಚಾ.ನಗರದಲ್ಲಿ ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಚರಿಸಲು ತೀರ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲು ನಿರ್ಧಾರ ಮಾಡಲಾಯಿತು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ಈ ಹಿಂದೆ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಗಿತ್ತು. ಜಯಂತಿ ಕಾರ್ಯಕ್ರಮ ವನ್ನು ಎಲ್ಲರ ಸಲಹೆ ಹಾಗೂ ಸಹಕಾರ ಪಡೆದು ಅಕ್ಟೋಬರ್ 21ರಂದು ಸಕಲ ಸಿದ್ಧತೆಗಳೊಂದಿಗೆ ಏರ್ಪಡಿಸಲಾಗುತ್ತಿದೆ ಎಂದರು. ಕಳೆದ ಬಾರಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗಾಗಿ ಮೆರವಣಿಗೆ, ವೇದಿಕೆ, ಸ್ವಾಗತ, ಅಲಂಕಾರಿಕಾ, ಅತಿಥ್ಯ, ವಿಚಾರ ಸಂಕಿರಣ, ಪ್ರಚಾರ ಸೇರಿದಂತೆ ವಿವಿಧ ಸಮಿತಿ ಹಾಗೂ ಉಪಸಮಿತಿಗಳನ್ನು ರಚಿಸಲಾಗಿತ್ತು. ಪ್ರಸ್ತುತ ಅದೇ ಸಮಿತಿಗಳು ಈ ಬಾರಿಯು ಸಹ ಕಾರ್ಯೋನ್ಮುಖ ವಾಗಲಿವೆ. ಈ ನಿಟ್ಟಿನಲ್ಲಿ ವಿವಿಧ ಸಂಘಸಂಸ್ಥೆಗಳ ಮುಖಂಡರು ಕಾರ್ಯಕ್ರಮ ಆಯೋಜನೆಗೆ ಸಲಹೆ ನೀಡುವಂತೆ ಕೋರಿದರು.

ಇದೇ ವೇಳೆ ಮಾತನಾಡಿದ ಮುಖಂಡರು ಪ್ರವಾಸಿ ಮಂದಿರದಿಂದ ಕಲಾತಂಡಗಳೊಂದಿಗೆ ಹೊರಡುವ ಭಾವಚಿತ್ರ ಮೆರವಣಿಗೆಗೆ ಈ ಬಾರಿ ಮೆರುಗು ನೀಡುವಂತಹ ಸಾರೋಟಿನ ವ್ಯವಸ್ಥೆಯಾಗಬೇಕು. ಮೆರವಣಿಗೆಗೆ ಜಿಲ್ಲೆಯ ಕಲಾತಂಡಗಳನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು. ಇದು ಜಿಲ್ಲಾಮಟ್ಟದ ಕಾರ್ಯಕ್ರಮ ವಾಗಿದ್ದು, ಆಹ್ವಾನಪತ್ರಿಕೆಗಳು ಸಮರ್ಪಕವಾಗಿ ತಲುಪಬೇಕು. ಜಯಂತಿ ಆಚರಣೆ ಸಂಬಂಧ ಕೆಲ ಸಮಿತಿಯಲ್ಲಿ ಬದಲಾವಣೆ ಯಾಗಬೇಕು. ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ಕಾಯ್ದೆಯ ಕುರಿತು ವಿಚಾರ ಸಂಕಿರಣ ಏರ್ಪಡಿಸಬೇಕು. ಅಂಬೇಡ್ಕರ್ ಪ್ರತಿಮೆಗೆ ವಿಶೇಷ ದೀಪಾಲಂಕಾರ ಸೇರಿದಂತೆ ಹಲವು ಸಲಹೆ, ಅಭಿಪ್ರಾಯಗಳನ್ನು ಮುಖಂಡರು ನೀಡಿದರು.

ಎಲ್ಲರ ಸಲಹೆ ಆಲಿಸಿದ ಜಿಲ್ಲಾಧಿಕಾರಿಯವರು ಜಯಂತಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಸೂಕ್ತ ನಿರ್ದೇಶನ ನೀಡಲಾಗುವುದು. ವೇದಿಕೆ ಕಾರ್ಯ ಕ್ರಮ ಹಾಗೂ ಜಯಂತಿ ಹಿಂದಿನ ದಿನದ ವಿಚಾರಸಂಕಿರಣ ಕಾರ್ಯಕ್ರಮಕ್ಕೂ ಮುಖ್ಯ ಭಾಷಣಕಾರರ ಆಯ್ಕೆಗೆ ಸಲಹೆ ಪಡೆಯಲಾಗುವುದು. ಅಂತಿಮವಾಗಿ ಎಲ್ಲರ ಒಪ್ಪಿಗೆ ಅನುಸಾರ ಆಯ್ಕೆ ನಡೆಸಿ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಮಹಾತ್ಮರ ಜನ್ಮದಿನದಂದು ಸಮಾಜಮುಖಿ ಕೆಲಸ ಮಾಡಿ ದರೆ ಅದು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗುತ್ತಿದೆ. ಯಾವುದೇ ಆರೋಗ್ಯವಂತ ವ್ಯಕ್ತಿ ಅಂದು ರಕ್ತದಾನ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಆಯೋಜನೆಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಾಗ ಬಾರದು. ಕಾರ್ಯಕ್ರಮ ಸಿದ್ಧತೆಗಾಗಿ ರಚಿಸಲಾಗಿರುವ ವಿವಿಧ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ಜಯಂತಿ ಕಾರ್ಯಕ್ರಮ ಆಯೋಜನೆ ಕುರಿತು ಸಭೆ ಸೇರಿ ಶೀಘ್ರವಾಗಿ ಚರ್ಚಿಸಿ ತಮಗೆ ವರದಿ ಸಲ್ಲಿಸಬೇಕು. ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣವೆಂದು ಜಿಲ್ಲಾಧಿಕಾರಿ ಕಾವೇರಿ ತಿಳಿಸಿದರು.

ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇ ಶಕ ತಿರುಮಲೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ರಾದ ಮಂಜುಳ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಾಚಪ್ಪ, ಮುಖಂಡರಾದ ಆಲೂರು ಮಲ್ಲು, ಅರಕಲವಾಡಿ ನಾಗೇಂದ್ರ, ಸಿ.ಕೆ. ಮಂಜುನಾಥ್, ಸಿ.ಎಂ. ಕೃಷ್ಣಮೂರ್ತಿ, ಆರ್. ಸುಂದರ್, ಅರಕಲವಾಡಿ ನಾಗೇಂದ್ರ, ಬ್ಯಾಡಮೂಡ್ಲು ಬಸವಣ್ಣ, ಕೆ.ಎಂ. ನಾಗರಾಜು, ವೇಣುಗೋಪಾಲ್, ಶ್ರೀಧರಮೂರ್ತಿ, ಸೋಮ ಶೇಖರ ಬಿಸಲ್ವಾಡಿ, ಶ್ರೀಕಂಠಮೂರ್ತಿ, ರಾಮಸಮುದ್ರ ಬಸವರಾಜು, ಸಿ.ಎಂ. ಶಿವಣ್ಣ, ಕಂದಹಳ್ಳಿ ನಾರಾಯಣ, ಯಳಂದೂರು ರಾಜಣ್ಣ, ಆಲೂರು ನಾಗೇಂದ್ರ ಇತರರು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.