ಇಂದು, ನಾಳೆ ಕಾರ್ಮಿಕ ಸಂಘಟನೆಗಳ ಮುಷ್ಕರ

ಮಡಿಕೇರಿ: ದೇಶದ ಹತ್ತು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜ.8 ಮತ್ತು 9 ರಂದು ಕರೆ ನೀಡಿರುವ ರಾಷ್ಟ್ರ ವ್ಯಾಪ್ತಿ ಮುಷ್ಕರದ ಕರೆಯಂತೆ ಕೊಡಗು ಜಿಲ್ಲೆಯಲ್ಲಿರುವ ವಿವಿಧ ಕಾರ್ಮಿಕ ಸಂಘಟನೆಗಳು ಕೂಡ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ ಎಂದು ಜಂಟಿ ಕ್ರಿಯಾ ಸಮಿತಿ ಹಾಗೂ ಅಂಗನವಾಡಿ ಸಂಘಟನೆಯ ಮುಖಂಡ ಟಿ.ಪಿ.ರಮೇಶ್ ತಿಳಿಸಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಹೊಸ ಹಾಗೂ ಸಭ್ಯ ಉದ್ಯೋಗಗಳನ್ನು ನಿರುದ್ಯೋಗಿಗಳಿಗೆ ನೀಡಬೇಕು, 7ನೇ ವೇತನ ಆಯೋಗ ಜಾರಿಗೊಳಿಸಿರುವ ಕನಿಷ್ಠ ವೇತನ ರೂ.18 ಸಾವಿರ ನೀಡಬೇಕು, ಕಾರ್ಮಿಕ ಕಾನೂನು ಗಳನ್ನು ಮೊಟಕುಗೊಳಿಸುವ ಕ್ರಮವನ್ನು ಕೈಬಿಡಬೇಕು, ಗುತ್ತಿಗೆ ಆಧಾರದ ನೌಕರರನ್ನು ಖಾಯಂಗೊಳಿಸಬೇಕು, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀ ಕರಣಗೊಳಿಸ ಬಾರದು, ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಮತ್ತು ಭದ್ರತೆ ನೀಡಬೇಕು, ಕೃಷಿ ಬಿಕ್ಕಟ್ಟು ಮತ್ತು ರೈತರ ಆತ್ಮಹತ್ಯೆಗೆ ಪರಿಹಾರ ಸೂಚಿಸಲು ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕೆಂಬುದು ಸೇರಿದಂತೆ ಕಾರ್ಮಿಕರು ಹಾಗೂ ಜನಸಾಮಾನ್ಯರ ಪರ ವಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎರಡು ದಿನಗಳ ಮುಷ್ಕರವನ್ನು ನಡೆಸಲಾಗು ತ್ತಿದೆ ಎಂದು ರಮೇಶ್ ಮಾಹಿತಿ ನೀಡಿದ್ದಾರೆ.

ಇಂದು ಮತ್ತು ನಾಳೆ ಪ್ರತಿಭಟನೆ: ಜ.8 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಗಾಂಧಿ ಮೈದಾನದ ಬಳಿ ಪ್ರತಿಭಟನೆಯನ್ನು ನಡೆಸಲಾಗುವುದು. ವಿರಾಜಪೇಟೆ ಯಲ್ಲಿ ಮಾರಿಯಮ್ಮ ದೇವಾಲಯದ ಬಳಿ ಮತ್ತು ಸೋಮವಾರಪೇಟೆಯಲ್ಲೂ ಜಂಟಿಕ್ರಿಯಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಲಿದೆ.

ಜ.9 ರಂದು ಬೆಳಗ್ಗೆ 11 ಗಂಟೆಗೆ ಮಡಿಕೇರಿಯ ಚೌಕಿ ವೃತ್ತ (ಇಂದಿರಾ ಗಾಂಧಿ ವೃತ್ತ) ದಿಂದ ಗಾಂಧಿ ಮೈದಾನ ದವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ.
ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಕಾರ್ಪೋ ರೇಟ್ ವಲಯದ ನೌಕರರು, ಬಿಎಸ್‍ಎನ್‍ಎಲ್, ಎಲ್‍ಐಸಿ, ಕೆ.ಎಸ್. ಆರ್.ಟಿ.ಸಿ ಪ್ಲಾಂಟೇಷನ್ ಕಾರ್ಮಿಕರು, ಬ್ಯಾಂಕ್ ಸಂಘಟನೆಗಳು, ಅಂಗನವಾಡಿ, ಆಶಾ, ಬಿಸಿಯೂಟ, ಗ್ರಂಥಾಲಯ, ಗ್ರಾಮ ಪಂಚಾಯಿತಿ, ಆಸ್ಪತ್ರೆ ನೌಕರರು, ಹಮಾಲಿ ಸಂಘಟನೆ, ತಲೆಹೊರೆ ಕಾರ್ಮಿಕರು, ರೈತಾಪಿ ವರ್ಗದವರು, ಕೃಷಿ ಕಾರ್ಮಿಕರು, ಅಂಚೆ ನೌಕರರ ಸಂಘಟನೆಗಳು, ಕಟ್ಟಡ ಕಾರ್ಮಿಕರು, ವಾಹನ ಚಾಲಕರು ಅಲ್ಲದೆ, ಅಸಂಘಟಿತ ವಲಯದ ಕಾರ್ಮಿಕರು, ನಿರುದ್ಯೋಗಿ ಯುವ ಸಮೂಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ ಎಂದು ಟಿ.ಪಿ.ರಮೇಶ್ ತಿಳಿಸಿದ್ದಾರೆ.
ಕಾರ್ಮಿಕರು ಹಾಗೂ ಜನಸಾಮಾನ್ಯರ ಸಂಕಷ್ಟಗಳ ಪರಿಹಾರಕ್ಕಾಗಿ ದೇಶ ವ್ಯಾಪಿ ಕರೆ ನೀಡಿರುವ ಮುಷ್ಕರಕ್ಕೆ ಕೊಡಗಿನ ಜನತೆ ಕೂಡ ಬೆಂಬಲ ನೀಡಿ ಸಹಕರಿಸ ಬೇಕೆಂದು ಅವರು ಮನವಿ ಮಾಡಿದ್ದಾರೆ.

ಕೊಡಗಿನಲ್ಲಿ ಶಾಲಾ-ಕಾಲೇಜಿಗೆ ರಜೆ ಇಲ್ಲ
ಆಟೋರಿಕ್ಷಾ, ಖಾಸಗಿ ಬಸ್ ಎಂದಿನಂತೆ ಸಂಚಾರ
ಮಡಿಕೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ 2 ದಿನಗಳ ಭಾರತ್ ಬಂದ್‍ಗೆ ಕೊಡಗು ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿಲ್ಲ.
ಜಿಲ್ಲೆಯಲ್ಲಿ ಎಲ್ಲಾ ಅಂಗನವಾಡಿ, ಶಾಲಾ -ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಎಲ್ಲಾ ಖಾಸಗಿ ಬಸ್‍ಗಳು ಜ.8 ಮತ್ತು 9ರಂದು ಸಂಚಾರ ನಡೆಸಲಿವೆ ಎಂದು ಖಾಸಗಿ ಬಸ್ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ರಾದ ಹೊಸೂರು ರಮೇಶ್ ಜೋಯಪ್ಪ ತಿಳಿಸಿದ್ದಾರೆ. ಆಟೋ ರಿಕ್ಷಾಗಳು ಕೂಡ ರಸ್ತೆಗಿಳಿಯಲಿವೆ ಎಂದು ಜಿಲ್ಲಾ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮೇದಪ್ಪ ಕೂಡ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಸರಕಾರಿ ಕಚೇರಿಗಳ ನೌಕರರಿಗೂ ಬಂದ್‍ನ ಬಿಸಿ ತಟ್ಟುವುದಿಲ್ಲ.

ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಬಳಿಕ ಜಿಲ್ಲೆಯ ಆರ್ಥಿಕ ಸ್ಥಿತಿಗತಿಗಳ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಇದೀಗ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಹೀಗಾಗಿ ವರ್ತಕ ಸಮುದಾಯ ಕೂಡ ಭಾರತ್ ಬಂದ್ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಲ್ಲ. ಆದರೆ ವಿವಿಧ ಕಾರ್ಮಿಕ ಸಂಘಟನೆಗಳು ಮಾತ್ರ ಭಾರತ್ ಬಂದ್‍ಗೆ ಬೆಂಬಲ ಸೂಚಿಸಿದ್ದು, ಜಿಲ್ಲೆಯ ಕೆಲವು ಕಡೆಗಳಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ.