* ನಗರದ ಎಲ್ಲಾ ದೇವಾಲಯಗಳಲ್ಲೂ ಇಡೀ ದಿನ ಭಕ್ತರ ದಂಡು, ವಿಶೇಷ ಪೂಜೆ
* ಮನೆಯೆದುರು ಬಣ್ಣ ಬಣ್ಣದ ರಂಗೋಲಿ, ಗೋವುಗಳಿಗೆ ಬಗೆ ಬಗೆ ಅಲಂಕಾರ
* ಸಿದ್ದಲಿಂಗಪುರದಲ್ಲಿ ಕಿಚ್ಚು ಹಾಯಿಸುವ ಸಡಗರ ವೀಕ್ಷಣೆಗೆ ಜನಜಾತ್ರೆ
* ಕೋಟೆ ಆಂಜನೇಯಸ್ವಾಮಿ ದೇಗುಲ ಅಂಗಳದಲ್ಲಿ ಸುಗ್ಗಿ ಸಂಭ್ರಮ, ಧಾನ್ಯದ ರಾಶಿಗೆ ವಿದೇಶಿಗರಿಂದ ಪೂಜೆ
ಮೈಸೂರು,ಜ.16(ಎಂಟಿವೈ)- ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ಬುಧವಾರ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಸಡಗರ, ಸಂಭ್ರÀಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ನಗರದಲ್ಲಿ ಎಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಿ ಸಿತ್ತು. ಬೆಳಿಗ್ಗೆಯಿಂದ ಸಂಜೆವರೆಗೂ ಚಾಮುಂಡಿ ಬೆಟ್ಟದ ದೇವಾಲಯ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಾಲಯ ಒಳ ಗೊಂಡಂತೆ ಮೈಸೂರಿನ ಎಲ್ಲಾ ದೇವಾಲಯ ಗಳಲ್ಲೂ ಭಕ್ತರ ದೊಡ್ಡ ದಂಡೇ ಇತ್ತು. ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ದೇವರಿಗೆ ಎಳ್ಳು-ಬೆಲ್ಲ-ಕಬ್ಬಿನ ನೈವೇದ್ಯ ಅರ್ಪಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಭಕ್ತಿಯಿಂದ ಆಚರಿಸಿದರು. ಇದೇ ವೇಳೆ ಮೈಸೂರಿನಲ್ಲಿರುವ ವಿವಿಧ ಸಮುದಾಯ, ತಮಿಳಿ ಗರು, ತಮಿಳು ಕ್ರೈಸ್ತರು ಹಾಗೂ ವಿವಿಧ ರಾಜ್ಯದ ವರು ಸಂಕ್ರಾಂತಿಯನ್ನು ವಿಭಿನ್ನವಾಗಿ ಆಚರಿಸುವ ಮೂಲಕ ಸುಗ್ಗಿ ಹಬ್ಬಕ್ಕೆ ಮೆರಗು ತುಂಬಿದರು.
ಸಂಭ್ರಮ: ಮೈಸೂರಿನ ನಿವಾಸಿಗಳು ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಚಿತ್ತಾರ ಮೂಡಿಸಿ ಗಮನ ಸೆಳೆದರು. ಹೊಸ ಉಡುಪು ಧರಿಸಿ, ಕೈತುಂಬ ಬಳೆ, ಕನಕಾಂಬರ, ಮಲ್ಲಿಗೆ ಹೂವು ಮುಡಿದಿದ್ದ ಮಹಿಳೆ ಯರು, ಯುವತಿಯರು, ಮಕ್ಕಳು ಮಧ್ಯಾಹ್ನ ದಿಂದ ರಾತ್ರಿವರೆಗೆ ಮನೆ ಮನೆಗೆ ತೆರಳಿ ಎಳ್ಳು-ಬೆಲ್ಲ ಬೀರಿ ಹಬ್ಬದ ಶುಭಾಶಯ ವಿನಿಮಯ ಮಾಡಿ ಕೊಂಡರು. ರಾತ್ರಿ 9 ಗಂಟೆವರೆಗೂ ಎಳ್ಳು, ಬೆಲ್ಲದ ಪ್ಯಾಕೇಟ್, ಕಬ್ಬಿನ ತುಂಡನ್ನು ಇಟ್ಟುಕೊಂಡು ಸ್ನೇಹಿ ತರು, ನೆಂಟರು ಹಾಗೂ ಅಕ್ಕಪಕ್ಕದ ಮನೆಯವರಿಗೆ ವಿತರಿಸಿ ಬರುತ್ತಿದ್ದುದು ಎಲ್ಲೆಡೆ ಕಂಡು ಬಂದಿತು.
ರಾಸುಗಳಿಗೆ ಪೂಜೆ: ಮೈಸೂರಿನ ಹಲವು ಬಡಾ ವಣೆಗಳ ನಿವಾಸಿಗಳು ಸಾಕಿರುವ ಹಸು, ಕುರಿ ಗಳನ್ನು ತೊಳೆದು ವಿವಿಧ ಬಣ್ಣ ಹಾಗೂ ಅಲಂಕಾ ರಿಕ ವಸ್ತುಗಳಿಂದ ಸಿಂಗರಿಸಲಾಗಿತ್ತು. ಗ್ರಾಮೀಣ ಸೊಗಡು ಉಳಿಸಿಕೊಂಡಿರುವ ಬಡಾವಣೆಗಳಾದ ನಂಜುಮಳಿಗೆ, ಕುರುಬಾರಹಳ್ಳಿ, ಅಗ್ರಹಾರ, ಕುಂಬಾರ ಕೊಪ್ಪಲು, ಪಡುವಾರಹಳ್ಳಿ, ನಜûರ್‍ಬಾದ್, ತೊಣಚಿ ಕೊಪ್ಪಲು, ಕೆ.ಜಿ.ಕೊಪ್ಪಲು, ಸುಣ್ಣದಕೇರಿ, ಹಳೆ ಕೆಸರೆ, ಯರಗನಹಳ್ಳಿ, ಆಲನಹಳ್ಳಿ, ಹಿನಕಲ್, ಬೋಗಾದಿ, ಜನತಾನಗರ ಸೇರಿದಂತೆ ವಿವಿಧೆಡೆ ಸಂಕ್ರಾಂತಿ ಸಂಭ್ರಮ ಹೆಚ್ಚಾಗಿತ್ತು. ಮನೆ ಮುಂದೆ ಹಸಿರು ತೋರಣ ಕಟ್ಟಿ ಹಬ್ಬಕ್ಕೆ ಮೆರಗು ನೀಡ ಲಾಗಿತ್ತು. ಗೋವುಗಳಿಗೆ ಪೂಜೆ ಸಲ್ಲಿಸಿ, ಹಣ್ಣು, ಕಬ್ಬು, ಬೆಲ್ಲ, ಕೊಬ್ಬರಿ ತಿನಿಸಲಾಯಿತು.
ಗಮನ ಸೆಳೆದ ರಾಸುಗಳ ಕಿಚ್ಚು: ಈ ಬಾರಿಯೂ ಸಂಭ್ರಮದಿಂದ ಕಿಚ್ಚು ಹಾಯಿಸಲಾಯಿತು. ಒಣ ಹುಲ್ಲನ್ನು ರಸ್ತೆಗೆ ಅಡ್ಡಲಾಗಿ ಇಟ್ಟು, ಬೆಂಕಿ ಹೊತ್ತಿಸಿ, ರಾಸುಗಳನ್ನು ಕಿಚ್ಚು ಹಾಯಿಸಲಾಯಿತು. ಮೈಸೂರು ಭಾಗದಲ್ಲಿ ಸಿದ್ದಲಿಂಗಪುರ, ರಮ್ಮನಹಳ್ಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಿಚ್ಚು ಹಾಯಿಸುವುದು ರೂಢಿಯಲ್ಲಿದೆ. ಮೈಸೂರು-ಬೆಂಗಳೂರು ಮುಖ್ಯ ರಸ್ತೆಯಲ್ಲಿ ಸಂಜೆ 4 ಗಂಟೆಯಿಂದ 5.30ರವರೆಗೂ ಕಿಚ್ಚು ಹಾಯಿಸಲಾಯಿತು. ರೈತರು ತಾವು ಸಾಕಿದ್ದ ಹಸು, ಕುರಿಗಳನ್ನು ವಿಧ ವಿಧವಾಗಿ ಸಿಂಗರಿದ್ದರು. ಕೆಲವರು ರಾಸುಗಳಿಗೆ ಗೌನ್ ತೊಡಿಸಿದ್ದರು. ಬಾಳೆ ಹಣ್ಣು, ಹೂವಿನ ಹಾರ, ಬಣ್ಣ ಬಣ್ಣದ ಟೇಪು ಸೇರಿದಂತೆ ವಿವಿಧ ವಸ್ತುಗಳಿಂದ ರಾಸುಗಳನ್ನು ಅಲಂಕರಿಸಿದ್ದರು. ಧಗಧಗನೆ ಉರಿಯೋ ಬೆಂಕಿ ಯನ್ನು ಜಿಗಿಯುತ್ತಾ ದಾಟಿ ಬಂದ ರಾಸುಗಳು, ನೆರೆದಿದ್ದ ಅಪಾರ ಸಂಖ್ಯೆಯ ಜನರಲ್ಲಿ ಮೈನವಿ ರೇಳುವಂತೆ ಮಾಡಿದವು. ಸಿದ್ದಲಿಂಗಪುರದ ಚಂದ್ರ ಮೌಳೇಶ್ವರ ದೇವಾಲಯ ಬಳಿ ಕಿಕ್ಕಿರಿದು ಸೇರಿದ್ದ ಜನಸ್ತೋಮ ಕಿಚ್ಚು ಹಾಯಿಸಲು ಕರೆತರುತ್ತಿದ್ದ ರಾಸುಗಳಿಗೆ ಕೇಕೆ ಹಾಕಿ ಪ್ರೇರೇಪಿಸಿದರು.
ರಾಸುಗಳ ಜೋಡಿ ಒಂದಕ್ಕಿಂತಲೂ ಮತ್ತೊಂದು ಕಣ್ಮನ ಸೆಳೆಯುತ್ತಿದ್ದವು. ಸಿದ್ದಲಿಂಗಪುರದಲ್ಲಿ ನಡೆ ಯುವ ಕಿಚ್ಚು ಹಾಯಿಸುವ ಪ್ರಕ್ರಿಯೆಯನ್ನು ಕಣ್ತುಂಬಿ ಕೊಳ್ಳಲು ಬೆಂಗಳೂರು ಸೇರಿದಂತೆ ವಿವಿಧೆಡೆ ಯಿಂದ ಪ್ರವಾಸಿಗರು, ಛಾಯಾಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಸಿದ್ದಲಿಂಗಪುರದ ರೈತರು 70 ವರ್ಷಗಳಿಂದ ಈ ಸಂಪ್ರದಾಯವನ್ನು ನಡೆಸಿಕೊಂಡು ಬಂದಿ ದ್ದಾರೆ. ಈ ಹಬ್ಬಕ್ಕಾಗಿ ದುಬಾರಿ ಬೆಲೆಯ ಎತ್ತುಗಳನ್ನು ಖರೀದಿಸುವುದು ಇಲ್ಲಿ ಪ್ರತಿಷ್ಠೆ ಎನಿಸಿದೆ. ಕಿಚ್ಚು ಹಾದು ಬಂದ ರಾಸುಗಳು ಗ್ರಾಮದ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದವು. ಈ ವೇಳೆ ಗ್ರಾಮಸ್ಥರು ರಾಸುಗಳ ಪಾದಪೂಜೆ ಮಾಡಿ, ಪ್ರಸಾದ ನೀಡಿ ಮನೆ ತುಂಬಿಸಿಕೊಂಡರು.
ವಿದೇಶಿಗರಿಂದ ಗೋ ಪೂಜೆ: ಶ್ರೀರಾಮ ಚಂದ್ರಾಪುರ ಮಠದ ಮೈಸೂರು ಶಾಖೆ, ಭಾರ ತೀಯ ಗೋಪರಿವಾರ ಮತ್ತು ಮೈಸೂರು ಹನು ಮಂತೋತ್ಸವ ಸಮಿತಿ ವತಿಯಿಂದ ಕೋಟೆ ಆಂಜ ನೇಯಸ್ವಾಮಿ ದೇವಾಲಯದ ಬಳಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮ-ಸಡಗರಗಳಿಂದ ಆಚರಿಸಲಾ ಯಿತು, ವಿದೇಶಿ ಯೋಗ ವಿದ್ಯಾರ್ಥಿಗಳು ಪಾಲ್ಗೊಂಡು ಧಾನ್ಯ ಪೂಜೆ, ಗೋಪೂಜೆ ಮಾಡಿದ್ದು ವಿಶೇಷವಾಗಿತ್ತು.
ಗ್ರಾಮೀಣ ಸೊಗಡಿಲ್ಲದೇ ಯಾಂತ್ರಿಕವಾಗಿ ಸಂಕ್ರಾಂತಿ ಆಚರಿಸುತ್ತಿರುವವÀರಿಗೆ ಮತ್ತು ವಿದೇಶಿ ಯರಿಗೂ ನಮ್ಮ ಶ್ರೀಮಂತ ಸಂಸ್ಕೃತಿಯ ಪರಿಚಯ ವನ್ನು ಮಾಡಿಕೊಡುವ ಸಲುವಾಗಿ ವಿಶೇಷವಾದ ವೇದಿಕೆಯನ್ನು ನಿರ್ಮಿಸಿ ಭತ್ತದ ಕಣ, ನೇಗಿಲು, ಬಂಡಿಗಳನ್ನು ಇರಿಸಿ ಸಿಂಗರಿಸಲಾಗಿತ್ತು. ಹಳ್ಳಿಕಾರ್ ದನಗಳನ್ನು ಸಿಂಗರಿಸಿ ತರಲಾಗಿತ್ತು. ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ವಿದೇಶೀಯರಿಂದಲೇ ಪೂಜೆ ಮಾಡಿಸಿ, ಎಳ್ಳು-ಬೆಲ್ಲ ವಿತರಿಸಿ ಸಂಭ್ರಮಿಸಲಾಯಿತು.
ಇದೇ ಸಂದರ್ಭದಲ್ಲಿ ಹಲವು ವರ್ಷಗಳಿಂದ ಗೋಪಾಲನೆ ಮತ್ತು ಗೋರಕ್ಷಣೆಯಲ್ಲಿ ನಿರತ ರಾಗಿರುವವರನ್ನೂ ಸನ್ಮಾನಿಸಲಾಯಿತು. ಅನಿಮಲ್ ವೆಲ್‍ಫೇರ್ ಬೋರ್ಡಿನ ಸದಸ್ಯರಾದ ಮಿತ್ತಲ್, ಪಿಂಜ್ರಾಪೆÇೀಲಿನ ರಮೇಶ್ ಜೈನ್, ಪ್ರವೀಣ್ ಗೋಯಲ್, ದೇಸೀ ಗೋತಳಿ ಸಾಕಾಣಿಕೆಯಲ್ಲಿ ತೊಡಗಿರುವ ಚೈತನ್ಯ ಜೈನ್‍ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಭಾರತೀಯ ಗೋಪರಿವಾ ರದ ಜಿಲ್ಲಾ ಸಂಯೋಜಕರಾದ ರಾಕೇಶ್ ಭಟ್, ಮೈಸೂರು ಹನುಮಂತೋತ್ಸವ ಸಮಿತಿಯ ಸಂಜಯ್, ಜೀವನ್, ಅಭಿ, ಪರಿವಾರದ ಮುಖಂಡರಾದ ಸಂದೇಶ್ ಪವಾರ್, ದೀಪಕ್ ಕುಂಚಿಟಿಗ, ವಿಕ್ರಮ್ ಅಯ್ಯಂಗಾರ್, ಉಮಾಶಂಕರ್, ಮಾಲಿನಿ, ಶಿವಾ ನಂದ್, ಹರೀಶ್ ಅಂಕಿತ್, ಹರಿಣಿ, ಯೋಗ ವಿದ್ಯಾರ್ಥಿಗಳಾದ ಅಲೆಕ್ಸ್, ದೀನಾ, ಖಾಯ್, ಇರೋಮಿ, ಯಾಸ್ಮಿನ್, ಜಾನ್ಹವಿ, ದೇವಿದಾಸ್, ಸೆಬಾಸ್ಟಿಯನ್, ಶ್ರೀರಾಮಚಂದ್ರಾಪುರ ಮಠದ ಮೈಸೂರು ವಲಯ ಮುಖ್ಯಸ್ಥರಾದ ಗಿರಿಜಾಶಂಕರ್, ವಿ.ಕೆ. ಭಟ್, ಸುಜಾತ ಶಂಕರನಾರಾಯಣ ಸೇರಿದಂತೆ ಹಲವರು ಭಾಗವಹಿಸಿದ್ದರು.