ಖಾಸಗಿ ಬಸ್-ಇನ್ನೋವಾ ಕಾರು ನಡುವೆ ತಿ.ನರಸೀಪುರ ಬಳಿ ಭೀಕರ ಅಪಘಾತ ಬಳ್ಳಾರಿ ಮೂಲದ 10 ಮಂದಿ ಸಾವು

ತಿ.ನರಸೀಪುರ, ಮೇ 29 (ಕುಮಾರ್, ಆರ್‍ಕೆ)- ಖಾಸಗಿ ಬಸ್‍ಗೆ ಇನ್ನೋವಾ ಕಾರು ಅಪ್ಪಳಿಸಿದ ಹಿನ್ನೆಲೆಯಲ್ಲಿ ಮೂವರು ಮಕ್ಕಳು ಸೇರಿ 10 ಮಂದಿ ಪ್ರವಾಸಿಗರು ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯ ಗೊಂಡ ಭೀಕರ ಅಪಘಾತ ಘಟನೆ ಮೈಸೂರು-ಕೊಳ್ಳೇಗಾಲ ಹೆದ್ದಾರಿಯಲ್ಲಿ ತಿ.ನರಸೀಪುರ ತಾಲೂಕಿನ ಕುರುಬೂರು ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆ ಸಂಗನಕಲ್ಲು ಗ್ರಾಮದಿಂದ ಮೈಸೂ ರಿಗೆ ಆಗಮಿಸಿದ್ದ ಮೂರು ಕುಟುಂಬಗಳಿಗೆ ಸೇರಿದ ಮಂಜುನಾಥ್(35), ಇವರ ಪತ್ನಿ ಪೂರ್ಣಿಮಾ(30), ಮಕ್ಕಳಾದ ಪವನ್ (10), ಕಾರ್ತಿಕ್(8), ಮತ್ತೊಂದು ಕುಟುಂಬದ ಸಂದೀಪ್(24), ಇವರ ತಂದೆ ಕೊಟ್ರೇಶಿ (46), ತಾಯಿ ಸುಜಾತ(40), ಮತ್ತೊಂದು ಕುಟುಂಬದ ಜನಾರ್ಧನ್, ಅವರ ಪತ್ನಿ ಗಾಯತ್ರಿ, ಪುತ್ರಿ ಶ್ರಾವ್ಯ ಮತ್ತು ಶ್ರೀರಂಗ ಪಟ್ಟಣದ ಕಾರು ಚಾಲಕ ಆದಿತ್ಯ ಈ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದು, ಬಳ್ಳಾರಿ ಜಿಲ್ಲೆಯ ಜನಾರ್ಧನ್(45), ಶಶಿಕುಮಾರ್(24), ಪುನೀತ್(4) ಮತ್ತು ಬಸ್ಸಿನಲ್ಲಿ ಪ್ರಯಾಣಿ ಸುತ್ತಿದ್ದ ತಿ.ನರಸೀಪುರದ ಕಾಲೇಜು ವಿದ್ಯಾರ್ಥಿನಿ ಭಾನು ತೀವ್ರವಾಗಿ ಗಾಯ ಗೊಂಡಿದ್ದು ಇವರೆಲ್ಲರೂ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಳ್ಳಾರಿಯ ಸಂಗನಕಲ್ಲು ಗ್ರಾಮದಿಂದ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದ ಈ ಕುಟುಂಬಗಳು ಪ್ರವಾಸಿ ತಾಣಗಳನ್ನು ವೀಕ್ಷಿ ಸಿದ ಖುಷಿಯನ್ನು ಪರಸ್ಪರ ಹಂಚಿಕೊಳ್ಳುತ್ತಾ ಸಂಜೆ ರೈಲಿನಲ್ಲಿ ಬಳ್ಳಾರಿಗೆ ಪ್ರಯಾಣ ಬೆಳೆಸಬೇಕಾಗಿತ್ತು. ಆದರೆ, ಮಾರ್ಗಮಧ್ಯೆಯೇ ಜವರಾಯ ಕಾದು ಕುಳಿತಿದ್ದ. ಭೀಕರ ಅಪಘಾತದಲ್ಲಿ ಮೂರು ಕುಟುಂಬಗಳ ಬಹುತೇಕ ಸದಸ್ಯರು ಇಹಲೋಕ ತ್ಯಜಿಸಿ ದ್ದಾರೆ. ಮಂಜುನಾಥ್ ಕುಟುಂಬದಲ್ಲಿ ಅವರೂ ಸೇರಿದಂತೆ ಪತ್ನಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಇಡೀ ಕುಟುಂಬವೇ ಸಾವಿನ ಮನೆ ಸೇರಿದಂತಾಗಿದೆ. ಸಂದೀಪ್, ತಮ್ಮ ತಂದೆ ಹಾಗೂ ತಾಯಿಯೊಂದಿಗೆ ಇಹಲೋಕ ತ್ಯಜಿಸಿದ್ದಾನೆ. ಜನಾರ್ಧನ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯ ಲ್ಲಿದ್ದು, ಅವರು ಪತ್ನಿ ಮತ್ತು ಮಗುವನ್ನು ಕಳೆದುಕೊಂಡಿದ್ದಾರೆ. ಬೇಸಿಗೆ ರಜೆ ಕಳೆಯಲು ಈ ಕುಟುಂಬಗಳು ಮಕ್ಕಳೊಂದಿಗೆ ಮೇ 27ರಂದು ಬಳ್ಳಾರಿಯಿಂದ ರೈಲಿನಲ್ಲಿ ಮೈಸೂ ರಿಗೆ ಆಗಮಿಸಿದ್ದವು.

ಮೈಸೂರಿನ ಲಾಡ್ಜ್‍ವೊಂದರಲ್ಲಿ ವಾಸ್ತವ್ಯ ಹೂಡಿ ಮೇ 28ರಂದು ಮೈಸೂರು ಸುತ್ತಮುತ್ತ ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ನಂತರ ಇಂದು ಬೆಳಗ್ಗೆ ಇನ್ನೋವಾ ಟ್ಯಾಕ್ಸಿ ಬುಕ್ ಮಾಡಿಕೊಂಡು ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳಿದ್ದಾರೆ. ಬಿಳಿಗಿರಿ ರಂಗನಾಥ ಸ್ವಾಮಿ ದರ್ಶನ ಪಡೆದು ಅಲ್ಲಿನ ಅರಣ್ಯ ಸೌಂದರ್ಯವನ್ನು ಸವಿದು ಮೈಸೂರಿಗೆ ಹಿಂತಿರುಗುತ್ತಿದ್ದರು. ಇಂದು ಸಂಜೆ 5 ಗಂಟೆಗೆ ರೈಲಿನಲ್ಲಿ ಬಳ್ಳಾರಿಗೆ ತೆರಳಲು ಟಿಕೆಟ್ ಬುಕ್ ಆಗಿತ್ತು.

ವಿಧಿಯಾಟವೆಂದರೆ ಇನ್ನೋವಾ ಕಾರು (ಕೆಎ-02, ಎಡಿ-5182) ಮೂಗೂರು ದಾಟಿ ತಿ.ನರಸೀಪುರದತ್ತ ವೇಗವಾಗಿ ಬರುತ್ತಿದ್ದಾಗ ಕುರುಬೂರು ಗ್ರಾಮದ ಪಿಂಜರಾಪೋಲ್ ಬಳಿಯ ತಿರುವಿನಲ್ಲಿ ಇನ್ನೋವಾ ಚಾಲಕ ಅತೀ ವೇಗವಾಗಿ ನಿರ್ಲಕ್ಷ್ಯತನದಿಂದ ರಸ್ತೆಯ ಬಲಭಾಗದಲ್ಲಿ ಬರುತ್ತಿದ್ದಂತೆಯೇ, ಅಷ್ಟೇ ವೇಗವಾಗಿ ಖಾಸಗಿ ಬಸ್ (ಕೆಎ-55, 2061) ಎದುರುಗೊಂಡಿದೆ. ತಕ್ಷಣ ನಿಯಂತ್ರಿಸಲಾಗದೇ ಬಸ್‍ಗೆ ಇನ್ನೋವಾ ಅಪ್ಪಳಿಸಿದೆ. ಅಪಘಾತದ ದೃಶ್ಯ ಬಸ್‍ನ ಡ್ಯಾಶ್‍ಬೋರ್ಡ್‍ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆಯ ರಾಂಗ್ ಸೈಡ್ ಬಲ ಭಾಗದಲ್ಲಿದ್ದು, ಬಸ್ ಕಾಣುತ್ತಲೇ ಎಡಕ್ಕೆ ತಿರುಗುವಷ್ಟರಲ್ಲಿ ಬಸ್‍ಗೆ ಅಪ್ಪಳಿಸಿದೆ. ಅಪಘಾತವಾಗುತ್ತಲೇ ಬಸ್ ಕೂಡ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದ ಅಂಚಿಗೆ ಹೋಗಿ ನಿಂತಿದೆ.

ಅಪಘಾತದ ರಭಸಕ್ಕೆ ಇನ್ನೋವಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಇದರಲ್ಲಿದ್ದ ಚಾಲಕ ಸೇರಿ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಕೆಲ ಮೃತದೇಹಗಳು ರಸ್ತೆಯಲ್ಲಿ ಬಿದ್ದಿದ್ದರೆ, ಒಂದು ಮೃತದೇಹ ಕಾರಿನ ಬಾಗಿಲ ಬಳಿ ನೇತಾಡುತ್ತಿತ್ತು. ಮತ್ತೆ ಕೆಲ ಶವಗಳು ಕಾರಿನಲ್ಲೇ ಸಿಲುಕಿದ್ದವು. ರಸ್ತೆಯಲ್ಲಿ ರಕ್ತ ಚೆಲ್ಲಾಡಿತ್ತು. ಬಸ್ ಪ್ರಯಾಣಿಕರು ಮತ್ತು ಸ್ಥಳೀಯರು ತೀವ್ರವಾಗಿ ಗಾಯಗೊಂಡು ನರಳುತ್ತಿದ್ದ ಮೂವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ. ಅದೇ ವೇಳೆ ಬಸ್ಸಿನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಿದ್ಯಾರ್ಥಿನಿ ಭಾನು ಎಂಬಾಕೆ ತೀವ್ರವಾಗಿ ಗಾಯಗೊಂಡು ತಿ.ನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ನಂತರ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ.

ವಿಷಯ ತಿಳಿಯುತ್ತಿದ್ದಂತೆಯೇ ಮೈಸೂರು ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್, ಅಡಿಷನಲ್ ಎಸ್ಪಿ ನಂದಿನಿ, ತಿ.ನರಸೀಪುರ ಠಾಣೆಯ ಪ್ರಭಾರ ಇನ್ಸ್‍ಪೆಕ್ಟರ್ ಹಾಗೂ ತಲಕಾಡು ಠಾಣೆ ಇನ್ಸ್‍ಪೆಕ್ಟರ್ ವಿಶ್ವನಾಥ್, ಸಿಬ್ಬಂದಿಗಳನ್ನೊಳಗೊಂಡು ಸ್ಥಳಕ್ಕೆ ದೌಡಾಯಿಸಿದರು. ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆಯಲು ಅಗ್ನಿ ಶಾಮಕ ದಳದ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿತ್ತು. ಅವರು ಗ್ಯಾಸ್ ಕಟ್ಟರ್‍ನಿಂದ ಕಾರಿನ ಕೆಲ ಭಾಗಗಳನ್ನು ತುಂಡರಿಸಿ ಮೃತದೇಹಗಳನ್ನು ಹೊರ ತೆಗೆದರು. ಇವರಿಗೆ ಸ್ಥಳೀಯರು ಕೂಡ ಸಹಕಾರ ನೀಡಿದರು. ಅಷ್ಟರಲ್ಲಿ ಆಂಬುಲೆನ್ಸ್‍ಗಳಲ್ಲಿ ಆಗಮಿಸಿದ್ದ ಮೈಸೂರು ಮತ್ತು ತಿ.ನರಸೀಪುರ ವೈದ್ಯಕೀಯ ಸಿಬ್ಬಂದಿ ಮೃತದೇಹಗಳನ್ನು ಮೈಸೂರು ಮೆಡಿಕಲ್ ಕಾಲೇಜು ಶವಾಗಾರಕ್ಕೆ ರವಾನಿಸಿದರು.