ಭಾರತದಲ್ಲಿ 109 ಮಂದಿಗೆ ಕೊರೊನಾ ಪ್ರಕರಣ ಪತ್ತೆ ಕರ್ನಾಟಕದಲ್ಲಿ 1,308 ಮಂದಿ ಗೃಹಬಂಧನ

ಬೆಂಗಳೂರು, ಮಾ.15- ಭಾರತದಲ್ಲಿ ಕೊರೊನಾ ವೈರಸ್‍ನಿಂದಾಗಿ ಮಾಲ್, ಥಿಯೇಟರ್, ಅಂಗಡಿಗಳು, ಶಾಪಿಂಗ್ ಕಾಂಪ್ಲೆಕ್ಸ್‍ಗಳು ಬಹುತೇಕ ಬಂದ್ ಆಗಿವೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದ್ದು, ಸೋಂಕಿನ ಪ್ರಕರಣ ಇನ್ನಷ್ಟು ಹೆಚ್ಚಾಗುವ ಆತಂಕ ಮೂಡಿದೆ. ದೇಶದಲ್ಲಿ ಕೊರೊನಾಗೆ ಮೊದಲ ಬಲಿಯಾಗಿರುವುದು ಕರ್ನಾಟಕ. ಹೀಗಾಗಿ, ರಾಜ್ಯ ದೆಲ್ಲೆಡೆ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ. ಭಾರತದಲ್ಲಿ ಒಟ್ಟಾರೆ ಇದುವರೆಗೂ 109 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಓರ್ವ ಮೃತಪಟ್ಟಿದ್ದು, 7 ಸೋಂಕಿತ ಪ್ರಕರಣ ಪತ್ತೆಯಾಗಿವೆ. ದೆಹಲಿಯಲ್ಲಿ ಒಬ್ಬರು, ಕಲಬುರ್ಗಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 109 ಪ್ರಕರಣಗಳಲ್ಲಿ 10 ಜನರು ಗುಣಮುಖರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ದೇಶದಲ್ಲಿ ಅತಿ ಹೆಚ್ಚು ಕೋವಿಡ್ 19 ಪರೀಕ್ಷೆಗೆ ಒಳಪಟ್ಟ ಪೈಕಿ ನಮ್ಮ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಜನ ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದಾರೆ. ಇಲ್ಲಿಯವರೆಗೆ ಒಟ್ಟು 731 ಸ್ಯಾಂಪಲ್ ಗಳನ್ನು ಕ್ರೋಢೀಕರಣ ಮಾಡಲಾಗಿದೆ. ಶನಿವಾರ ಒಂದೇ ದಿನ 92 ಸ್ಯಾಂಪಲ್‍ಗಳ ಪರೀಕ್ಷೆ ಮಾಡಲಾಗಿದೆ. 731 ಸ್ಯಾಂಪಲ್‍ಗಳ ಪೈಕಿ 50 ಹೊಸ ಸ್ಯಾಂಪಲ್‍ಗಳು ನೆಗೆಟಿವ್ ಬಂದಿವೆ. 590 ಸ್ಯಾಂಪಲ್‍ಗಳಲ್ಲಿ ಸೋಂಕು ಇಲ್ಲದಿರುವುದು ಪತ್ತೆಯಾಗಿದೆ.

ಕೊರೋನಾ ಭೀತಿಯಿಂದ ರಾಜ್ಯದಲ್ಲಿ 1,308 ಜನರು ಗೃಹಬಂಧನ (ಹೋಮ್ ಐಸೋಲೇಷನ್)ದಲ್ಲಿದ್ದಾರೆ. ಅವರಿಗೆ ಆರೋಗ್ಯ ಇಲಾಖೆಯಿಂದ ನಿಯಮಗಳನ್ನು ತಿಳಿಸಲಾಗಿದೆ. 14 ದಿನಗಳ ಕಾಲ 104ಕ್ಕೆ ಕರೆ ಮಾಡಿ ಮಾತನಾಡಲು ಸೂಚನೆ ನೀಡಲಾಗಿದೆ. ದಿನಕ್ಕೆ 2 ಬಾರಿ ಫೆÇೀನ್ ಮಾಡುವುದು ಕಡ್ಡಾಯಗೊಳಿಸಲಾಗಿದೆ.

ಕೊರೋನಾ ನಿಯಂತ್ರಣಕ್ಕೆ ಸಮಿತಿ ರಚನೆ: ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆ ರಾಜ್ಯದಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸೂಚನೆ ಮೇರೆಗೆ ಸಮಿತಿ ರಚನೆ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳು ಸೇರಿ ಕೆಲಸ ಮಾಡಲಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಇದಕ್ಕೆ ಅಧ್ಯಕ್ಷರಾಗಿರುತ್ತಾರೆ. ಉಳಿದಂತೆ ಮೆಡಿಕಲ್ ಎಜುಕೇಶನ್ ಹಾಗೂ ಖಾಸಗಿ ಆಸ್ಪತ್ರೆಗಳ ಅಧ್ಯಕ್ಷರು ಸೇರಿದಂತೆ ಒಟ್ಟು 6 ಮಂದಿ ಸದಸ್ಯರಿರುತ್ತಾರೆ. ಒಬ್ಬರು ಸದಸ್ಯ ಕಾರ್ಯದರ್ಶಿ ಇರುತ್ತಾರೆ.