ರೈಲ್ವೆ ನಿಲ್ದಾಣಕ್ಕೆ 2 ದಿನ ವಾಹನ ಪ್ರವೇಶ ನಿಷೇಧ

ಮೈಸೂರು: ರಸ್ತೆ ಡಾಂಬರೀಕರಣ ಕಾಮಗಾರಿಗಾಗಿ ಇಂದಿನಿಂದ ಮೈಸೂರಿನ ರೈಲು ನಿಲ್ದಾಣದ ಮುಖ್ಯ ದ್ವಾರವನ್ನು ಎರಡು ದಿನಗಳವರೆಗೆ ಬಂದ್ ಮಾಡಲಾಗಿದೆ. ಪರಿಣಾಮ ಪ್ರಯಾಣಿಕರನ್ನು ಕರೆದೊಯ್ಯುವ ಆಟೋ, ಟ್ಯಾಕ್ಸಿ, ಖಾಸಗಿ ವಾಹನಗಳು ರೈಲು ನಿಲ್ದಾಣದ ಒಳಗೆ ಹೋಗದ ಕಾರಣ ಬಾಬು ಜಗ ಜೀವನರಾಂ ವೃತ್ತ (ರೈಲ್ವೇ ಸ್ಟೇಷನ್ ಸರ್ಕಲ್)ದಲ್ಲಿ ನಿಂತು ಪಿಕ್‍ಅಪ್ ಮಾಡುತ್ತಿ ರುವುದರಿಂದ ಸ್ಥಳದಲ್ಲಿ ಆಗಿಂದಾಗ್ಗೆ ಟ್ರಾಫಿಕ್ ಜಾಮ್ ಆಗುತ್ತಿದೆ.

ಬೆಂಗಳೂರು, ನಂಜನಗೂಡು, ಹಾಸನ ಕಡೆಯಿಂದ ರೈಲುಗಳು ಬಂದಾಗ ಒಟ್ಟಿಗೇ ಪ್ರಯಾಣಿಕರು ಬರುವುದರಿಂದ ಅವರನ್ನು ಕರೆದೊಯ್ಯಲು ವಾಹನಗಳು ಬರುವಾಗ ಉಂಟಾಗುವ ಟ್ರಾಫಿಕ್ ಜಾಮ್ ತೆರವುಗೊಳಿಸಲು ಎನ್‍ಆರ್ ಸಂಚಾರ ಠಾಣೆ ಪೊಲೀ ಸರು ಹರಸಾಹಸ ಪಡುವಂತಾಗಿದೆ. ಸಂಚಾರ ಸಮಸ್ಯೆ ತಪ್ಪಿಸಲು ದಾಸಪ್ಪ ಸರ್ಕಲ್ ಬಳಿ ಕಾಂಗ್ರೆಸ್ ಕಚೇರಿ ಎದುರು ಬ್ಯಾರಿಕೇಡ್ ಅಳವಡಿಸಿ ಗಾಯತ್ರಿ ಭವನ ಕಡೆಗೆ ವಾಹನ ಗಳನ್ನು ಪೊಲೀಸರು ಕಳುಹಿಸುತ್ತಿದ್ದಾರೆ. ಜೆ.ಕೆ. ಗ್ರೌಂಡ್ ಬಳಿಯ ಸಿಗ್ನಲ್ ಲೈಟ್ ಸರ್ಕಲ್, ದಾಸಪ್ಪ ವೃತ್ತಗಳಲ್ಲಿ ಸಂಚಾರ ಪೊಲೀಸರು ಹಾಜರಿದ್ದು, ವಾಹನ ಗಳನ್ನು ಬದಲಿ ಮಾರ್ಗದಲ್ಲಿ ಚಲಿಸುವಂತೆ ಸೂಚಿಸುತ್ತಿದ್ದಾರೆ. ರೈಲು ನಿಲ್ದಾಣದ ಆವರಣದಲ್ಲಿ ನವೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಇಂದಿನಿಂದ ಡಾಂಬರೀ ಕರಣ (ಅಷ್ಟಾಲ್ಟಿಂಗ್) ಕೆಲಸ ನಡೆಯುತ್ತಿರುವುದರಿಂದ ಮೇನ್ ಗೇಟ್ ಅನ್ನು ಬ್ಯಾರಿಕೇಡ್ ಹಾಕಿ ವಾಹನ ಪ್ರವೇಶಿಸದಂತೆ ನಿಷೇಧಿಸಲಾಗಿದೆ. ಪ್ರಯಾಣಿಕರು ನಡೆದುಕೊಂಡೇ ಸರ್ಕಲ್‍ಗೆ ಬಂದು ವಾಹನಗಳನ್ನಿಡಿದು ಹೋಗಬೇಕಾಗಿದೆ.