ಹಾಸನಕ್ಕೆ 20 ಕೋಟಿ ಬಂಡವಾಳ ಹೂಡಿಕೆ: ಎಚ್‍ಡಿಕೆ

ಹಾಸನ: ‘ದಸರಾಕ್ಕೂ ಮೊದಲು ಜಿಲ್ಲೆಯಲ್ಲಿ 20 ಕೋಟಿ ಬಂಡವಾಳ ಹೂಡಿಕೆ ಮಾಡುವ ಯೋಜನೆಯನ್ನು ರೂಪಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯ ಹಿರೀಸಾವೆ ಹೋಬಳಿಯ ತೋಟಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ, ಚನ್ನರಾಯಪಟ್ಟಣದ ಅಮಾನಿಕೆರೆಯಿಂದ ಕುಡಿಯುವ ನೀರಿಗಾಗಿ ತಾಲೂಕಿನ ಕಾವೇರಿ ನೀರಾವರಿ ನಿಗಮದ ವತಿಯಿಂದ ಹಲಗೊಂಡನ ಹಳ್ಳಿ ಏತ ನೀರಾವರಿ ಯೋಜನೆ, ಚನ್ನರಾಯಪಟ್ಟಣ ಅಮಾನಿಕೆರೆ ಏತ ನೀರಾವರಿ ಯೋಜನೆ ಕಾಲುವೆಯಿಂದ 25 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಶೀಘ್ರದಲ್ಲಿಯೇ ಜಿಲ್ಲೆಗೆ ಬೃಹತ್ ಬಂಡವಾಳ ಹೂಡಿಕೆ ಮಾಡುವ ಚಿಂತನೆ ಮಾಡಿದ್ದೇನೆ. ಇದರಿಂದ ಸುಮಾರು 10 ಸಾವಿರ ಮಂದಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲಾಗುವುದು. ನಿರುದ್ಯೋಗಿ ಯುವ ಜನತೆಗೆ ಇದು ಸ್ಫೂರ್ತಿಯಾಗಲಿದೆ. ಇಂತಹ ಯೋಜನೆಯನ್ನು ಮುಂದಿನ ದಿನದÀಲ್ಲಿ ಗುಲ್ಬಾರ್ಗ, ರಾಯಚೂರು, ಧಾರವಾಡಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಸರ್ಕಾರ ಸುಭದ್ರ: ರಾಜ್ಯ ಸರ್ಕಾರ ಆರ್ಥಿಕ ಇಲಾಖೆ ಹಣವನ್ನು ಸಾಲ ಮನ್ನಾ ಮಾಡುವ ಮೂಲಕ ಖರ್ಚು ಮಾಡಿ ಖಾಲಿ ಮಾಡಿದ್ದಾರೆ. ಹೀಗಾಗಿ ರಾಜ್ಯದ ಅಭಿವೃದ್ಧಿ ಮಾಡಲು ಎಲ್ಲಿದೆ ಹಣ ಎಂದು ಬಿಜೆಪಿ ಅವರು ಟೀಕೆ ಮಾಡುತ್ತಿದ್ದಾರೆ. ಆದರೆ, ರೈತರ ಸಾಲಮನ್ನಾ ಹಾಗೂ ರಾಜ್ಯದ ಅಭಿವೃದ್ಧಿಗೆ ಯಾವುದೇ ಸಂಬಂಧ ಇಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಏನು ಮಾಡ ಬೇಕು ಎಂದು ನಾನು ಮೊದಲೇ ಯೋಜನೆ ರೂಪಿಸಿದ್ದೇನೆ ಎಂದು ಹೇಳಿದರು.
ರಾಜ್ಯ ಸರ್ಕಾರ ನನ್ನ ನಾಯಕತ್ವದಲ್ಲಿ ಆರ್ಥಿಕವಾಗಿ ಸುಭದ್ರವಾಗಿದೆ. ರಾಜ್ಯದ ವರದಿಗಾರರು ಕೂಡ ನನ್ನ ಪರ ಇದ್ದಾರೆ. ಆದರೆ, ಕೆಲವು ಮಾಧ್ಯಮಗಳಲ್ಲಿ ವರದಿ ಯನ್ನು ತಿರುಚುತ್ತಿದ್ದಾರೆ. ಈಗ ಸರ್ಕಾರ ಬೀಳಬಹುದು, ನಾಳೆ ಬೀಳಬಹುದು ಎಂದು ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯದ ಜನರು ಕಿವಿಗೊಡಬಾರದು. ನೈಜ ಸುದ್ದಿ ಅತ್ತ ಗಮನ ಹರಿಸಿ ಎಂದು ತಿಳಿಸಿದರು.

ಬಿಜೆಪಿ ನಾಯಕರು ನಮ್ಮ ಶಾಸಕರು ಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿ ದ್ದಾರೆ. ಮುಂಬೈ, ದೆಹಲಿಗೆ ಅವರನ್ನು ಕರೆದುಕೊಂಡು ಹೋಗುವ ಪ್ರಯತ್ನ ಮಾಡಿ ದ್ದಾರೆ. ಅಂತಹ ಪ್ರಯತ್ನಗಳು ಮುಂದುವರಿ ದರೆ ನಮ್ಮ ಕಾರ್ಯಕರ್ತರುಗಳ ಮೂಲಕ ಬಿಜೆಪಿ ನಾಯಕರ ವಿರುದ್ಧ ದಂಗೆ ಎಬ್ಬಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಇದು ನನ್ನ ಜೀವನದ ಸುದಿನ. ನಾನು ಎರಡು ಬಾರಿ ಚುನಾವಣೆಯಲ್ಲಿ ಜಯ ಗಳಿಸಿದಕ್ಕಿಂತ ಇಂದು ಹೆಚ್ಚು ಸಂತಸವಾಗಿದೆ. ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದಂತಹ ನೀರಾವರಿ ಯೋಜನೆಗಳ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ. ಚನ್ನರಾಯಪಟ್ಟಣದ ಅಮಾನಿಕೆರೆ ಯಿಂದ ಮಂಗಳೂರಿನ ಓಶಿಯನ್ ಕಂಪನಿಯ ಮೂಲಕ ತ್ವರಿತ ಗತಿಯಲ್ಲಿ ಏತ ನೀರಾವರಿಯನ್ನು ಪೂರ್ಣಗೊಳಿಸುವ ಕಾರ್ಯ ಮಾಡಲಾಗುವುದು ಎಂದರು.
ನೀರಾವರಿ ಯೋಜನೆ ಪೂರ್ಣಗೊಂಡರೆ ತೋಟಿ ಭಾಗದ ಸುಮಾರು 26 ಕೆರೆಗಳಿಗೆ ಜೀವ ಸೆಲೆ ಬರುತ್ತದೆ. ರೈತರ ಸಂಕಷ್ಟಗಳು ಕೂಡ ಬಗೆಹರಿಯುತ್ತವೆ. ಹಾಗಾಗಿ, ಇಂತಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜೊತೆ ನಾನು ಭಾಗವಹಿಸಿರುವುದು ತುಂಬಾ ಖುಷಿಯಾಗುತ್ತಿದೆ. ಬಾಗೂರು ನವಿಲೆ ಸುರಂಗ ಒಡಲನ್ನು ಬಗೆದು ತುಮಕೂರು ಭಾಗಗಳಿಗೆ ನೀರನ್ನು ನೀಡಿದ್ದೇವೆ. ಅದೇ ರೀತಿ ಬಾಗೂರು ನವಿಲೆ ಸುರಂಗದ ನಿರ್ಗಮನದಿಂದ ನೀರನ್ನು ಏತ ನೀರಾವರಿ ಮೂಲಕ ಕುಡಿಯುವ ನೀರಿ ಗಾಗಿ ಚನ್ನರಾಯಪಟ್ಟಣ ತಾಲೂಕಿನ ಹಾಗೂ ಸುತ್ತ್ತಲಿನ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೂಡ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ, ಸಹಕಾರ ಸಚಿವ ಬಂಡೆಪ್ಪಕಾಶಂಪುರ್, ಶಾಸಕರಾದ ಮರಿತಿಬ್ಬೇಗೌಡ, ಎ.ಟಿ. ರಾಮಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಕೆ.ಎಸ್. ಲಿಂಗೇಶ್, ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಎಂ.ಎ. ಗೋಪಾಲ ಸ್ವಾಮಿ, ಡಿಸಿ ರೋಹಿಣಿ ಸಿಂಧೂರಿ, ಜಿಪಂ ಅಧ್ಯಕ್ಷೆ ಶ್ವೇತಾದೇವರಾಜ್, ಉಪಾ ಧ್ಯಕ್ಷ ಸುಪ್ರದೀಪ್ ಯಜಮಾನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎನ್.ಪ್ರಕಾಶ್ ಗೌಡ, ಉಪವಿಭಾಗಾಧಿಕಾರಿ ನಾಗರಾಜ್, ಗೋಪಾಲಸ್ವಾಮಿ, ಹಾಜರಿದ್ದರು.

ರಾಜ್ಯದ ಅಭಿವೃದ್ಧಿಯೇ ನನ್ನ ಕರ್ತವ್ಯ: ಎಚ್‍ಡಿಕೆ

‘ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ತಂದೆ-ತಾಯಿ ದೇವರಲ್ಲಿ ಇಟ್ಟಿರುವ ಅಪಾರ ನಂಬಿಯಿಂದಲೇ ನಾನು ಈ ಸ್ಥಾನಕ್ಕೆ ಏರಿದ್ದೇನೆ. ಹಾಗಾಗಿ, ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಯಾರೇ ಮಾಡಿದರೂ ನಾನು ಸಹಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಚನ್ನರಾಯಪಟ್ಟಣ ತಾಲೂಕಿನ ಉದಯಪುರದಲ್ಲಿ ಗುರು ವಾರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣ ಕಾಮಗಾರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜ್ಞಾನ ಬೋಧಕರ ವಿಭಾಗದ ಕೊಠಡಿಗಳ ನಿರ್ಮಾಣ ಕಾಮಗಾರಿ, ಕಾವೇರಿ ನೀರಾವರಿ ನಿಗಮದ ಯೋಜನೆಗಳು, ಹೊನ್ನಶೆಟ್ಟಹಳ್ಳಿ ಮತ್ತು ಇತರ ಆರು ಗ್ರಾಮಗಳಿಗೆ ಶಾಶ್ವತ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಸುವ ಯೋಜನೆ, ಅಗ್ರಹಾರ ಕುಂಬೇನಹಳ್ಳಿ ಮತ್ತು ಇತರ 15 ಗ್ರಾಮಗಳಿಗೆ ಶಾಶ್ವತ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಸುವ ಯೋಜನೆ, ಕುಂದೂರು ಮಠ, ದಂಡಿಗನಹಳ್ಳಿ ಮತ್ತು ದಾಸಪುರ ಸ್ಟೇಷನ್ ಉದ್ಘಾಟನೆ, ಕಾಚೇನಹಳ್ಳಿ ಏತ ನೀರಾವರಿಯ 3ನೇ ಹಂತದ ಕಾಮಗಾರಿ ಶಂಕುಸ್ಥಾಪನೆ ಮಾಡಿದ ಬಳಿಕ ಅವರು ಮಾತನಾಡಿದರು.

ರಾಜ್ಯದ ಅಭಿವೃದ್ಧಿಯೇ ನನ್ನ ಕರ್ತವ್ಯ. ಈ ವಿಚಾರದಲ್ಲಿ ನಾನು ಹಿಂದೆ ಸರಿಯುವುದಿಲ್ಲ. ನನ್ನ ರಾಜಕೀಯ ಶ್ರೇಯೋಭಿವೃದ್ಧಿಗೆ ದಂಡಿಗನಹಳ್ಳಿ ಕ್ಷೇತ್ರ ಸಾಕಷ್ಟು ಕೊಡುಗೆ ನೀಡಿದೆ. ಅದನ್ನು ನಾನು ಮರೆಯೋದಿಲ್ಲ. ನನ್ನ ತಂದೆಯ ಮೇಲೆ ಕ್ಷೇತ್ರದ ಜನರು ಇಟ್ಟಿರುವ ಅಭಿಮಾನದಿಂದ ದೇಶದ ಕೆಂಪುಕೋಟೆಯ ಮೇಲೆ ಅವರು ತ್ರಿವರ್ಣ ಧ್ವಜ ಹಾರಿಸುವ ಅವಕಾಶ ದೊರೆಯಿತು ಎಂದರು.

ಜಿಲ್ಲೆಯಲ್ಲಿ 170 ಕೋಟಿ ರೂ. ಸಾಲ ಮನ್ನಾ

ಸರ್ಕಾರ ರಚನೆಯಾದ ಬಳಿಕ, ಎಲ್ಲಾ ಸಹಕಾರಿ ಬ್ಯಾಂಕ್‍ಗಳಲ್ಲಿರುವ 9,450 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಈ ಪೈಕಿ ಹಾಸನ ಜಿಲ್ಲೆಯಲ್ಲಿ ಸುಮಾರು 170ಕೋಟಿ ಸಾಲ ಮನ್ನಾವಾಗಿದೆ. ಜೊತೆಗೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಿದ್ದ ಸಾಲದ ಉಳಿದ ಮೊತ್ತವನ್ನು ಕೂಡ ಮನ್ನಾ ಮಾಡಲು ನಿರ್ಧರಿಸಿದ್ದೇವೆ ಎಂದು ಭರವಸೆ ನೀಡಿದರು.

ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಸಾಲದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ವರದಿ ಬಂದ ಬಳಿಕ ಮುಂದಿನ ದಿನಗಳಲ್ಲಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡಲು ನಿರ್ಧರಿಸುತ್ತೇನೆ. ರಾಜ್ಯದ ಜನತೆ ಸರ್ಕಾರದ ಮೇಲೆ ವಿಶ್ವಾಸವಿಡಬೇಕು. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಕೆಲಸವನ್ನು ಮಾಡು ತ್ತೇವೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಸಾಕಷ್ಟು ಒತ್ತು ನೀಡುತ್ತಿದೆ. ಈಗಾಗಲೇ ನುಸಿ ರೋಗದಿಂದ ಹಾಳಾಗಿರುವ ತೆಂಗಿನ ಮರಗಳಿಗೆ ಪ್ರತಿ ಎಕರೆಗೆ ಹಾಳಾಗಿರುವ 40 ಮರಗಳಿಗೆ 20 ಸಾವಿರ ಪರಿಹಾರ ನೀಡಲು ನಿರ್ಧರಿಸಿದ್ದೇನೆ. ಇಂತಹ ಯೋಜನೆ ದೇಶದಲ್ಲಿಯೇ ಮೊದಲಾಗಿದೆ. ಹಾಗಾಗಿ, ನಮ್ಮ ಕೆಲಸವನ್ನು ಮಾಡಲು ಅವಕಾಶ ಮಾಡಿಕೊಡಿ. ಗಾಳಿಸುದ್ದಿಗಳಿಗೆ ಕಿವಿಗೊಡದೆ ನನ್ನ ಮೇಲೆ ವಿಶ್ವಾಸವಿಡಿ ಎಂದರು.

ರೇವಣ್ಣ ಮೇಲಿನ ಆರೋಪ ಸತ್ಯಕ್ಕೆ ದೂರ!
ಬಿಜೆಪಿ ಅವರು ಅಪ್ಪ ಮತ್ತು ಮಕ್ಕಳು ರಾಜ್ಯದ ಲೂಟಿ ಮಾಡುತ್ತಿದ್ದಾರೆ. ಅವರು ಲೂಟಿಕೋರರು ಎಂದು ಆರೋಪಿಸಿದ್ದಾರೆ. ಇದು ನನಗೆ ತುಂಬಾ ನೋವುಂಟು ಮಾಡಿದೆ. ನನ್ನ ಸಹೋದರನ ಮೇಲೆ ಬಂದಿರುವ ಭೂಮಿ ಕಬಳಿಕೆ ಆರೋಪ ಸತ್ಯಕ್ಕೆ ದೂರವಾದದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಯವರೇ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸುತ್ತಾರೆ. ಇದರಲ್ಲಿ ಭೂಮಿ ಕಬಳಿಸಿದ್ದೇ ಆದರೆ, ಕಾನೂನು ಕ್ರಮ ಕೈಗೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದು ಎಚ್.ಡಿ.ರೇವಣ್ಣ ಅವರ ವಿರುದ್ಧ ಮಾಜಿ ಸಚಿವ ಎ.ಮಂಜು ಮಾಡಿರುವ ಆರೋಪಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿ ರಾಜ್ಯದ ಬೊಕ್ಕಸ ಲೂಟಿ ಮಾಡುತ್ತೇನೆ ಎಂದು ಆರೋಪಿಸಲಾಗುತ್ತಿದೆ. ಆದರೆ, ನಾನು ರಾಜ್ಯದ ಜನತೆಯ ಕಷ್ಟದ ಹೊರೆಯನ್ನು ಇಳಿಸಲು ಶ್ರಮವಹಿಸುತ್ತಿದ್ದೇನೆ ಎಂದ ಅವರು, ವರ್ಗಾವಣೆ ಮಾಡುವ ಮೂಲಕ ಅಕ್ರಮ ಹಣ ಮಾಡುವ ಅವಶ್ಯಕತೆ ಇಲ್ಲ. ಅಂತಹ ಪಾಪದ ಹಣ ನಮಗೆ ಬೇಕಿಲ್ಲ. ನಮ್ಮ ಕುಟುಂಬದ ಬಗ್ಗೆ ಹಗುರ ವಾಗಿ ಮಾತನಾಡಬೇಡಿ. ಅಧಿಕಾರಕ್ಕಾಗಿ ಅಂಟಿ ಕೂರುವ ಜಾಯಮಾನ ನಮ್ಮದಲ್ಲ. ಪಂಚಾಯಿತಿ ಅಧ್ಯಕ್ಷರಿಂದ ದೆಹಲಿಯ ಕೆಂಪುಕೋಟೆಯವರೆಗೂ, ನೆಹರು ಕುಳಿತ್ತಿದ್ದ ಸ್ಥಾನವನ್ನು ನೋಡಿ ಬಂದಿರುವಂತಹ ಕುಟುಂಬ ನಮ್ಮದು ಎಂದರು.

ದೇವರ ಕೃಪೆ, ರಾಜ್ಯದ ತಾಯಂದಿರ ಮತ್ತು ಅಂಗವಿಕಲರ ಆಶೀರ್ವಾದ ಇರುವರೆಗೆ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಯಾವ ಬಿಜೆಪಿ ನಾಯಕರು ಕೂಡ ನನ್ನನ್ನು ಮುಖ್ಯಮಂತ್ರಿ ಪದವಿಯಿಂದ ಇಳಿಸಲು ಸಾಧ್ಯವಿಲ್ಲ’ – ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಜಿಲ್ಲೆಯಲ್ಲಿ ಉದ್ಘಾಟನೆಗೊಂಡ ಹಾಗೂ ಪ್ರಾರಂಭವಾಗಲಿರುವ ಯೋಜನೆಗಳು ರಸ್ತೆ, ನೀರಾವರಿ, ಶಿಕ್ಷಣ, ರೈಲ್ವೆ ಮತ್ತಿತರ ಕಾಮಗಾರಿಗಳ ಬಗ್ಗೆ ವಿವರಿಸಿದರು ಹತ್ತು ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿತ್ತು. ಪ್ರಸ್ತುತ ಹಾಸನದ ಅಭಿವೃದ್ಧಿಯ ಕಾರ್ಯ ನಡೆಯುತ್ತಿದೆ. – ಎಚ್.ಡಿ.ರೇವಣ್ಣ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ

ದೇಶದಲ್ಲಿ ರಾಜ್ಯ ಸರ್ಕಾರದ ಸಾಲ ಮನ್ನಾ ವಿಚಾರ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಅಧಿಕಾರಕ್ಕೆ ಬಂದ ಕೇವಲ 100 ದಿನಗಳ ಒಳಗೆ 40 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವ ಆದೇಶಗಳನ್ನು ಹೊರಡಿಸಲಾಗಿದೆ. ಇದೇ ರೀತಿ ಸಾಲ ಮನ್ನಾ ಘೋಷಣೆ ಇತರ ರಾಜ್ಯಗಳಲ್ಲಿ ಅದರ ಅನುಷ್ಠಾನ ಬಹಳ ವಿಳಂಬವಾಗಿದೆ. ಆದರೆ, ಸಿಎಂ ಕುಮಾರಸ್ವಾಮಿ ಚುರುಕಾಗಿ ಬದ್ಧತೆ ಪ್ರದರ್ಶಿಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ನೀರಾವರಿ ಯೋಜನೆಗಳಿಗೆ ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಸ್ಮರಣಿಯ. – ಬಂಡೆಪ್ಪಕಾಶಂಪುರ್, ಸಹಕಾರ ಸಚಿವ