ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 22 ‘ಸಖಿ’ ಮತಗಟ್ಟೆಗಳು

ಮೈಸೂರು: ಮಹಿಳಾ ಮತದಾರರು ಹೆಚ್ಚಾಗಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 22 ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಮೈಸೂರು ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 2ರಂತೆ 12 ಸಖಿ ಮತಗಟ್ಟೆ ಗಳು, ಕೊಡಗಿನ 2 ಕ್ಷೇತ್ರಗಳಲ್ಲಿ ತಲಾ 5ರಂತೆ 10 ಸಖಿ ಮತಗಟ್ಟೆಗಳನ್ನು ಸ್ಥಾಪಿಸ ಲಾಗಿದ್ದು, ಅಲ್ಲಿ ಮಹಿಳಾ ಸಿಬ್ಬಂದಿಗಳೇ ಮತದಾನ ಪ್ರಕ್ರಿಯೆಯಲ್ಲಿ ನಿರತರಾಗಿರುತ್ತಾರೆ ಎಂದು ಜಿಪಂ ಸಿಇಓ ಕೆ.ಜ್ಯೋತಿ ತಿಳಿಸಿದ್ದಾರೆ. ಅದೇ ರೀತಿ ಪಿರಿಯಾಪಟ್ಟಣ, ಹುಣಸೂರು, ವಿರಾಜಪೇಟೆ ಮತ್ತು ಮಡಿಕೇರಿಗಳಲ್ಲಿ ಬುಡಕಟ್ಟು ಮತಗಟ್ಟೆಗಳನ್ನು ಸ್ಥಾಪಿಸಿ ಅಲ್ಲಿ ಬುಡಕಟ್ಟು ಸಂಪ್ರದಾಯದಂತೆ ಶೃಂಗರಿಸಿ ಮತದಾರರ ಸೆಳೆಯಲು ಪ್ರಯತ್ನಿಸಲಾಗಿದೆ.ಪ್ರತೀ ಮತ ಗಟ್ಟೆಯಲ್ಲಿ ವೃದ್ಧರು, ಅಂಗವಿಕಲರು ಹಾಗೂ ಅಂಧರಿಗಾಗಿ ಗಾಲಿ ಕುರ್ಚಿ, ಸಹಾಯಕ ರನ್ನು ಒದಗಿಸಲಾಗಿದೆ. ಕ್ಷೇತ್ರದಾದ್ಯಂತ ಎಲ್ಲಾ ಮತಗಟ್ಟೆಗಳಲ್ಲೂ ರ್ಯಾಂಪ್, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಸುಮಾರು 50 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಚುನಾವಣಾ ಪ್ರಕ್ರಿಯೆಯಿಂದ ದೂರ ಇರಿಸಿದ್ದು, ಅವರ ವಿರುದ್ಧ ಕ್ರಮ ವಹಿಸಲು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು. ಮತಗಟ್ಟೆಗಳಿಗೆ ಮೊಬೈಲ್, ಕ್ಯಾಮರಾಗಳನ್ನು ಕೊಂಡೊಯ್ಯಬಾರದು. ಏಪ್ರಿಲ್ 16ರ ಸಂಜೆ 6 ರಿಂದ ಏಪ್ರಿಲ್ 18ರ ಮಧ್ಯರಾತ್ರಿವರೆಗೆ ಜಿಲ್ಲೆಯಾದ್ಯಂತ ಪಾನ ನಿರೋಧ ದಿನವೆಂದು ಘೋಷಿಸಲಾಗಿದೆ.